ಮೈಸೂರು

ಪ್ಲಾಸ್ಟಿಕ್ ನಿಷೇಧ ಉಲ್ಲಂಘಿಸಿದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ಚಿಂತನೆ: ಮೇಯರ್ ಭೈರಪ್ಪ

ದೇಶದ ಸ್ವಚ್ಛ ನಗರಿ, ಬಯಲು ಶೌಚ ಮುಕ್ತ ನಗರಿ ಬಿರುದು ಪಡೆದುಕೊಂಡಿರುವ ಮೈಸೂರು ಪ್ಲಾಸ್ಟಿಕ್ ಮುಕ್ತ ನಗರವೂ ಆಗಿದ್ದು ಪ್ಲಾಸ್ಟಿಕ್ ಬಳಕೆಯ ನಿಷೇಧದ ನಡುವೆಯೂ ನಗರದಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ. ಅಂತಹವರ ವಿರುದ್ಧ ಪಾಲಿಕೆಯ ಕಾನೂನುಗಳಡಿ ಕ್ರಿಮಿನಲ್ ಮೊಕದ್ದಮೆ ಹೂಡಲು ಚಿಂತಿಸಲಾಗುತ್ತಿದೆ ಎಂದು ಮೇಯರ್ ಬಿ.ಎಲ್. ಭೈರಪ್ಪ ತಿಳಿಸಿದರು.

ಶಿವರಾಂಪೇಟೆಯಲ್ಲಿರುವ ಮನ್ನಾರ್ಸ್ ಮಾರ್ಕೆಟ್‌ನಲ್ಲಿ ಅಕ್ರಮವಾಗಿ ಮಾರಾಟ ಮಾಡಲು ತಂದಿದ್ದ 2 ಲಾರಿ ನಿಷೇಧಿತ ಪ್ಲಾಸ್ಟಿಕ್ ಕವರ್‌ಗಳನ್ನು ವಶಪಡಿಸಿಕೊಂಡ ಸಂಬಂಧ ಬುಧವಾರ ಪಾಲಿಕೆ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಗರದಲ್ಲಿ ಪ್ಲಾಸ್ಟಿಕ್ ನಿಷೇಧಿಸಿದ್ದರೂ ಕೆಲ ಅಂಗಡಿಗಳ ಮಾಲೀಕರು ಕದ್ದುಮುಚ್ಚಿ ಪ್ಲಾಸ್ಟಿಕ್ ಬಳಕೆ ಮತ್ತು ಮಾರಾಟವನ್ನೂ ಮಾಡುತ್ತಿದ್ದಾರೆ. ಮನ್ನಾರ್ಸ್ ಮಾರ್ಕೆಟ್‌ನಲ್ಲಿ ಅಕ್ರಮವಾಗಿ ಪ್ಲಾಸ್ಟಿಕ್ ಮಾರಾಟ ಮಾಡಲಾಗುತ್ತಿದೆ ಎಂಬ ವಿಷಯ ತಿಳಿದ ಕೂಡಲೇ ಅಧಿಕಾರಿಗಳ ನೇತೃತ್ವದಲ್ಲಿ ದಾಳಿ ಮಾಡಿ ವಶಪಡಿಸಿಕೊಳ್ಳಲಾಗಿದೆ. ವಾಹನದ ಸಂಖ್ಯೆಯನ್ನು ಬರೆದುಕೊಂಡಿದ್ದ ಅಧಿಕಾರಿಗಳು ಪರಾರಿಯಾಗಿರುವ ವಾಹನ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರಿಗೆ ದೂರು ನೀಡಿದ್ದಾರೆ. ನಿಷೇಧಿತ ಎರಡೂ ಪ್ಲಾಸ್ಟಿಕ್ ವಾಹನಗಳೂ ಎಸ್‌ಎಸ್ ಟ್ರೇಡರ್ಸ್ ಅಂಗಡಿಗೆ ಸರಕು ಸಾಗಿಸುತ್ತಿದ್ದರಿಂದ ಟ್ರಾನ್ಸ್‌ಪೋರ್ಟ್ ಕಂಪೆನಿಗೆ ಸೇರಿದ ಎರಡು ಲಾರಿಗಳಿಗೆ ಹತ್ತು ಸಾವಿರ ರೂ. ದಂಡ ವಿಧಿಸಿ, 25 ಲಕ್ಷ ರೂ.ಗಳ ಪ್ಲಾಸ್ಟಿಕ್ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ದಸರೆಯಲ್ಲೂ ಚಾಮುಂಡಿ ಬೆಟ್ಟದ ಪಾದ ಸೇರಿದಂತೆ ಹಲವೆಡೆಯಲ್ಲಿ ಅತಿಯಾಗಿ ನಿಷೇಧಿತ ಪ್ಲಾಸ್ಟಿಕ್ ಬಳಕೆಯಾಗುತ್ತಿದೆ ಎಂಬ ದೂರು ಕೇಳಿಬಂದಿದೆ. ಇದಲ್ಲದೆ ಎಪಿಎಂಸಿ ಮಾರುಕಟ್ಟೆ ವ್ಯಾಪಾರಸ್ಥರು ತಾವು ನಗರ ವ್ಯಾಪ್ತಿಗೆ ಬರುವುದಿಲ್ಲ. ಹಾಗಾಗಿ ಪ್ಲಾಸ್ಟಿಕ್ ನಿಷೇಧ ಕಾನೂನು ತಮಗೆ ಅನ್ವಯಿಸುವುದಿಲ್ಲ ಎಂದು ಹೇಳಿಕೊಂಡು ಮುಕ್ತವಾಗಿ ಪ್ಲಾಸ್ಟಿಕ್ ಬಳಕೆ ಮಾಡುತ್ತಿದ್ದಾರೆ ಎಂಬ ದೂರುಗಳಿವೆ. ಕೂಡಲೇ ಇವರು ಪ್ಲಾಸ್ಟಿಕ್ ಬಳಕೆ ನಿಲ್ಲಿಸದಿದ್ದರೆ ಶೀಘ್ರವೇ ದಾಳಿ ನಡೆಸಿ ದಂಡ ವಿಧಿಸಲಾಗುವುದು. ಮಾತ್ರವಲ್ಲದೆ ಕ್ರಿಮಿನಲ್ ಮೊಕದ್ದಮೆ ಹೂಡಲು ಕಾನೂನಿನಲ್ಲಿ ಅವಕಾಶವಿದೆಯೇ ಎಂಬುದನ್ನು ಪರಿಶೀಲಿಸುತ್ತೇವೆ. ಒಂದು ವೇಳೆ ಅವಕಾಶವಿದ್ದಲ್ಲಿ ಅದನ್ನು ಜಾರಿಗೆ ತರುತ್ತೇವೆ ಎಂದು ಅಕ್ರಮ ಪ್ಲಾಸ್ಟಿಕ್ ಮಾರಾಟಗಾರರಿಗೆ ಎಚ್ಚರಿಕೆ ನೀಡಿದರು.

ಕಸ ವಿಂಗಡಣ ಘಟಕ ಅಭಿವೃದ್ಧಿ:

ನಗರದಲ್ಲಿ ಕೆಟ್ಟು ನಿಂತಿರುವ ಘಟಕಗಳ ಮರು ಅಭಿವೃದ್ಧಿ ಕೈಗೊಳ್ಳುವ ನಿಟ್ಟಿನಲ್ಲಿ 30 ವರ್ಷದ ಅವಧಿಗೆ ಘಟಕ ನಡೆಸಲು ಮುಂದೆ ಬಂದಿರುವ ಕಂಪನಿಗಳಿಗೆ ಲೀಸ್ ಆಧಾರದಲ್ಲಿ ನೀಡಲು ಅನುಮತಿ ಕೊಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಐಎಲ್‌ಎಫ್‌ಎಸ್ ಸೇರಿದಂತೆ 2 ಸಂಸ್ಥೆಗಳು ಅರ್ಜಿ ಸಲ್ಲಿಸಿದ್ದು, ಎರಡು ಘಟಕ ನಿರ್ಮಿಸಿ, 400 ಟನ್ ಕಸ ವಿಂಗಡಣೆಗೆ ರೂಪರೇಷೆ ಸಿದ್ಧಪಡಿಸಲಾಗಿದೆ. ನಗರದ ಹಿತದೃಷ್ಟಿಯಿಂದ ಕ್ಯಾಬಿನೆಟ್‌ನಲ್ಲಿ ಇದಕ್ಕೆ ಅನುಮೋದನೆ ದೊರಕಬೇಕಿದೆ. 400 ಕೋಟಿ ರೂ. ವೆಚ್ಚದಲ್ಲಿ ಕಸ ವಿಂಗಡಣಾ ಘಟಕಗಳನ್ನು ನಿರ್ಮಿಸಲು ಕಂಪನಿಗಳು ಸಿದ್ಧವಿದ್ದು, ಮುಂದಿನ ಕ್ಯಾಬಿನೆಟ್‌ನಲ್ಲಿ ಇದಕ್ಕೆ ಒಪ್ಪಿಗೆ ಸೂಚಿಸುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ ಎಂದರು.

ಡೆಬ್ರಿಸ್ ಮರುಬಳಕೆ ಘಟಕ: ನಗರದ ರಾಯನಕೆರೆಯ 3 ಎಕರೆ ಜಾಗದಲ್ಲಿ 6.5 ಕೋಟಿ ವೆಚ್ಚದಲ್ಲಿ ರಾಜ್ಯದಲ್ಲಿಯೇ ಮೊದಲ ಬಾರಿಗೆ ಕಾಂಕ್ರಿಟ್ ಸೇರಿದಂತೆ ಮನೆ ಕೆಡವಿದ ತ್ಯಾಜ್ಯಗಳನ್ನು ಮರು ಬಳಕೆ ಮಾಡುವ ಘಟಕ ನಿರ್ಮಾಣ ಕಾಮಗಾರಿಗೆ ಅ. 28ರಂದು ಬೆ.10ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಕೆಸರೆ ಅಥವಾ ರಾಯನಕೆರೆ ಘಟಕಗಳಲ್ಲಿ ಸಿ.ಎಂ. ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ತಿಳಿಸಿದರು.

 

Leave a Reply

comments

Related Articles

error: