ಪ್ರಮುಖ ಸುದ್ದಿಮೈಸೂರು

ನಂಜುಂಡನ ಸನ್ನಿಧಿಯಲ್ಲೂ ಅಕ್ರಮ..!

nanjunda-web
ಸವಿತಾ.

ಎಲ್ಲ ಕ್ಷೇತ್ರಗಳಲ್ಲೂ ಆವರಿಸಿರುವ ಅಕ್ರಮ ಈಗ ಕೋಟಿ-ಕೋಟಿ ಆದಾಯ ಆದಾಯ ಹೊಂದಿರುವ ದಕ್ಷಿಣ ಕಾಶಿ ನಂಜನಗೂಡಿನ ದೇಗುಲವನ್ನೂ ಬಿಟ್ಟಿಲ್ಲ. ಇಲ್ಲಿನ  ಶ್ರೀಕಂಠೇಶ್ವರ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನ ಮಂಡಳಿಯ ಮಾಜಿ ಅಧ್ಯಕ್ಷ ಕೆ.ಎಸ್. ಮೋಹನ್ ಕುಮಾರ್, ಬೆಂಗಳೂರಿನ ಮಾರುತಿನಗರದ ಭಕ್ತರಿಗೆ ಉಂಡೆನಾಮ ಹಾಕಿದ್ದಾರೆ ಎನ್ನುವ ‍ಮಾತುಗಳು ಕೇಳಿಬಂದಿವೆ.

2016ರ ಸಾಲಿನಲ್ಲಿ ನಡೆದ ಗಿರಿಜಾಕಲ್ಯಾಣ  ಸೇವೆಗೆಂದು ಕಳೆದ ಏಪ್ರಿಲ್ 29 ರಂದು ಭಕ್ತರಾದ ಸವಿತಾ ಚಂದ್ರಶೇಖರ್  ಅವರ ಸಿಂಡಿಕೇಟ್ ಬ್ಯಾಂಕ್ ಖಾತೆಯಿಂದ 12 ಸಾವಿರ ರೂ. ಹಣವನ್ನು ಮೋಹನ್ ಅವರು ಜಮಾ ಮಾಡಿಸಿಕೊಂಡಿದ್ದಾರೆ. ಮಾತ್ರವಲ್ಲ, ಅ.15ರಂದು ರಂದು ಸವಿತಾ ಅವರ ಮನೆಗೆ ಹೊಗಿ 5,000 ಸಾವಿರ ರೂ.ಗಳನ್ನು ಪಡೆದಿದ್ದಾರಂತೆ. ಜೊತೆಯಲ್ಲೇ 25 ಸಾವಿರ ರೂಪಾಯಿಯ ಪ್ರಸಾದದ ರಶೀದಿಯನ್ನು ನೀಡಿ ನೀವು ಬಾಕಿ 8 ಸಾವಿರ ರೂ. ನೀಡಬೇಕೆಂದು ನಿತ್ಯವೂ ಫೋನ್ ಮಾಡುತ್ತಾ ಭಕ್ತೆ ಸವಿತಾರಿಗೆ ದುಂಬಾಲು ಬಿಂದಿದ್ದಾರೆ.  ಕೆಲ ದಿನಗಳ ಹಿಂದೆ ದೇವಾಲಯದ ಆಡಳಿತ ಕಚೇರಿಗೆ ಆಗಮಿಸಿದ ಸವಿತಾ ಚಂದ್ರಶೇಖರ್, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ರಶೀದಿ ನೀಡಿ ವಿಚಾರಿಸಿದಾಗ ಮೋಹನ್ ಕುಮಾರ್ ನೀಡಿರುವ ರಶೀದಿ ನಮ್ಮದಲ್ಲ ಹಾಗೂ ಅದು ನಕಲಿ ಎಂದಿದ್ದಾರೆ. ಏಪ್ರಿಲ್‍ನಲ್ಲೇ ಮೋಹನ್ ಕುಮಾರ್ ದೇವಸ್ಥಾನದ ಆಡಳಿತ ಮಂಡಳಿಯಿಂದ ಹೊರ ಹೋಗಿದ್ದಾರೆ ಎಂದು ತಿಳಿಸಿದ್ದಾರೆ.

ಕಳೆದ ಮೂರು ದಿನಗಳ ಹಿಂದೆಯೂ ಸಹ ಭಕ್ತರ ಬಳಿ ಹಣ ಪಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಅಲ್ಲದೆ, ನಕಲಿ ರಶೀದಿಗೆ ಕಾರ್ಯನಿರ್ವಾಹಕ ಅಧಿಕಾರಿ ಜಯಪ್ರಕಾಶ್ ರವರ ಸಹಿಯನ್ನೇ ನಕಲಿ ಮಾಡಿ ಭಕ್ತರಿಗೆ ವಂಚನೆ ಮಾಡಿದ್ದಾರೆ. ವಂಚನೆಗೊಳಗಾದ ಭಕ್ತೆ ಸವಿತಾ ಚಂದ್ರಶೇಖರ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಲಿಖಿತ ದೂರು ನೀಡಿದ್ದು, ಮೋಹನ್ ಕುಮಾರ್ ತೆಗೆದು ಕೊಂಡಿರುವ ಹಣವನ್ನು ವಾಪಸ್ ಕೊಡಿಸಿ ಅವರ ವಿರುದ್ದ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ತಿಳಿಸಿದ್ದಾರೆ.

ಲಕ್ಷಲಕ್ಷ ಅಕ್ರಮ?

ಲಕ್ಷಾಂತರ ಜನರು ನಂಜುಂಡನಿಗೆ ಗಿರಿಜಾ ಕಲ್ಯಾಣ ಸೇರಿದಂತೆ ಇತರೆ ಸೇವೆಗೆಂದು ಇದೇ ರೀತಿ ಭಕ್ತರಿಗೆ ಎಷ್ಟೆಲ್ಲ ವಂಚನೆಯಾಗಿರಬಹುದು. ಮಾತ್ರವಲ್ಲ, ಮಾಜಿ ಅಧ್ಯಕ್ಷನಾದರೂ ನಕಲಿ ರಶೀದಿ ಪ್ರಿಂಟ್ ಮಾಡಿಸಿ, ಭಕ್ತರ ಮನೆ-ಮನೆಗೆ ತೆರಳಿ ಮೋಹನ್ ಅದೆಷ್ಟು ಬಾಚಿದ್ದಾನೆಂದು ಭಕ್ತರು ಹಾಗೂ ನಂಜನಗೂಡಿನ ನಾಗರಿಕರು ಚರ್ಚೆ ಪ್ರಾರಂಭಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಈ ರೀತಿಯ ಪ್ರಕರಣದಿಂದ ದೇವಾಲಯದ ಘನತೆಗೆ ಕುಂದು ಬರುವ ಬಗ್ಗೆ ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ  ಕಾರ್ಯನಿರ್ವಾಹಕ ಅಧಿಕಾರಿ ಜಯ ಪ್ರಕಾಶ್ ನಕಲಿ ರಶೀದಿ ಹಾಗೂ ಅಧಿಕಾರಿಯ ಸಹಿ ನಕಲಿ ಮಾಡಿರುವ ಬಗ್ಗೆ ಉನ್ನತ ಅಧಿಕಾರಿಗಳ ಗಮನಕ್ಕೆ ತಂದು ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.

 

 

Leave a Reply

comments

Related Articles

error: