ಮೈಸೂರು

ಭೂಕಬಳಿಕೆಯಲ್ಲಿ ಅಧಿಕಾರಿಗಳು ಶಾಮೀಲು: ಕ್ರಿಮಿನಲ್ ಪ್ರಕರಣ ದಾಖಲಿಸಲು ಒತ್ತಾಯ

ಚಾಮುಂಡಿ ಬೆಟ್ಟದ ಸರ್ವೆ ನಂ 30/1ರ ಜಮೀನನ್ನು ಅಕ್ರಮವಾಗಿ ಖಾತೆ ಮಾಡಿಸಿಕೊಂಡಿರುವ ಬಗ್ಗೆ ನ್ಯಾಯಾಲಯ ನೀಡಿರುವ ಯಥಾಸ್ಥಿತಿ ಕಾಯ್ದುಕೊಳ್ಳುವ ಆದೇಶ ಉಲ್ಲಂಘಿಸಿ ಕಟ್ಟಡ ನಿರ್ಮಾಣ ಮಾಡಿದ್ದರೂ ಅಧಿಕಾರಿಗಳು ಕ್ರಮಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಹಾಗೂ ಭೂ ಕಬಳಿಕೆದಾರರ ಜತೆ ಅಧಿಕಾರಿಗಳು ಕೈಜೋಡಿಸಿದ್ದಾರೆ ಎಂದು ಭಷ್ಟಾಚಾರ ವಿರೋಧಿ ಆಂದೋಲನ ವೇದಿಕೆ ಆರೋಪಿಸಿದೆ.

ಮೈಸೂರು ತಾಲೂಕಿನ ಚಾಮುಂಡಿ ಬೆಟ್ಟದ ಸರ್ವೆ ನಂ.30/1ರ 0.04 ಗುಂಟೆ ಜಮೀನು ಈಶ್ವರ ಎಂಬುವವರಿಗೆ ಸೇರಿದ್ದು ಸದರಿ ಭೂಮಿಗೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಹಕಾರದಿಂದ ಅಕ್ರಮ ದಾಖಲೆ ಸೃಷ್ಠಿಸಿ ವಾಣಿಜ್ಯ ಉದ್ದೇಶಕ್ಕೆ ಎಲ್. ಮಹದೇವಸ್ವಾಮಿ ಮತ್ತು  ಸುಬ್ಬಲಕ್ಷ್ಮೀಯವರಿಗೆ ವಿಲೇವಾರಿ ಮಾಡಿದೆ. ಇದನ್ನು ಪ್ರಶ್ನಿಸಿ ಮೂಲ ಭೂಮಾಲೀಕರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯವು ಯಥಾಸ್ಥಿತಿ ಕಾಪಾಡಲು ಎಂದು ಆದೇಶಿಸಿತ್ತು.

ಆದರೆ ನ್ಯಾಯಾಲಯದ ಆದೇಶವನ್ನು ಮೀರಿ ಕಟ್ಟಡವನ್ನು ಪೂರ್ಣಗೊಳಿಸಿದ್ದು, ವ್ಯಾಪಾರ ವಹಿವಾಟು ನಡೆಸಲು ನಡೆಸಲಾಗುತ್ತಿದೆ. ಈ ಬಗ್ಗೆ ಸ್ಪಷ್ಟ ದಾಖಲಾತಿಗಳನ್ನು ನ್ಯಾಯಾಲಯ ಕೇಳಿತ್ತು. ಸೂಕ್ತ ದಾಖಲಾತಿ ಸಲ್ಲಿಸಲು ಅಧಿಕಾರಿಗಳು ವಿಫಲರಾದ್ದರಿಮದ, ನ್ಯಾಯಾಲಯ ನಕಲಿ ಖಾತೆಯನ್ನು ರದ್ದುಪಡಿಸಿ ಆದೇಶ ಹೊರಡಿಸಿತ್ತು. ಈ ನಂತರವೂ ನ್ಯಾಯಾಲಯದ ಆದೇಶವನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಆಸಕ್ತಿ ವಹಿಸದೇ ಇರುವ ಧೋರಣೆಯನ್ನು ಖಂಡಿಸಿರುವ ವೇದಿಕೆ, ನಕಲಿ ದಾಖಲೆಗಳನ್ನು ಸೃಷ್ಠಿಸಿ ಪಟ್ಟಭದ್ರರ ಹಿತಾಸಕ್ತಿಗಳಿಗೆ ಸಹಕರಿಸಿದ್ದ  ಗ್ರಾ.ಪಂ. ಅಧಿಕಾರಿ ಎಲ್. ಬಸವರಾಜು ವಿರುದ್ಧ ಸರ್ಕಾರವು ಕ್ರಿಮಿನಲ್ ಪ್ರಕರಣ ದಾಖಲಿಸಿ ಶಿಸ್ತುಕ್ರಮ ಜರುಗಿಸಬೇಕೆಂದು ವೇದಿಕೆಯ ಅಧ್ಯಕ್ಷ ಹೆಚ್.ಎನ್. ನಂಜುಂಡರಾಜು ಆಗ್ರಹಿಸಿದ್ದಾರೆ.

ಸಾಮಾಜಿಕ ಸ್ವಾಸ್ಥ್ಯ ಕದಡುವ ಆತಂಕ: ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕಂದಾಯ ಭೂಮಿಗಳ ಮೇಲೆ ರಿಯಲ್ ಎಸ್ಟೇಟ್ ದಂಧೆಕೋರರು ಕಣ್ಣು ಹಾಕಿದ್ದು, ನಕಲಿ ದಾಖಲಾತಿ ಸೃಷ್ಠಿಸಿ ರೈತರ ಜಮೀನುಗಳನ್ನು ಕಬಳಿಸುತ್ತಿವೆ. ಇದಕ್ಕೆ ಸರ್ಕಾರಿ ಅಧಿಕಾರಿಗಳು ಕೈ ಜೋಡಿಸಿದ್ದು, ಸರ್ಕಾರದ ಹಕ್ಕು ಪತ್ರವಾಗಲಿ ಅಥವಾ ಪಿತ್ರಾರ್ಜಿತ ದಾಖಲೆಗಳು ಇಲ್ಲದಿದ್ದರು ಗ್ರಾ.ಪಂ. ಅಧಿಕಾರಿಗಳು ಖಾತೆ ಮಾಡಲು ಡಿಮ್ಯಾಂಡ್  ನೋಟ್ ನೀಡುತ್ತಿವೆ. ಇದನ್ನೇ ನ್ಯಾಯಾಲಯಗಳು ಸರ್ಕಾರಿ ದಾಖಲೆಗಳೆಂದು ಪರಿಗಣಿಸುತ್ತಿದ್ದು, ಭೂಮಿಯ ಮಾಲೀಕರು ವಿನಾಕಾರಣ ಕೋರ್ಟು ಕಚೇರಿಗೆ ಅಲೆದಾಡುವ ಪರಿಸ್ಥಿತಿ ಒದಗಿದೆ. ಪರಿಸ್ಥಿತಿ ಹೀಗೇ ಮುಂದುವರಿದರೆ ರಿಯಲ್ ಎಸ್ಟೇಟ್ ದಂಧೆ ನಿಯಂತ್ರಣಕ್ಕೆ ಸಿಗದೆ ನಾಗರಿಕ ಸಮಾಜವನ್ನು ಬಾಧಿಸಬಹುದು ಎಂದು ವೇದಿಕೆ ಆತಂಕ ವ್ಯಕ್ತಪಡಿಸಿದೆ.

Leave a Reply

comments

Related Articles

error: