ಕರ್ನಾಟಕ

ವೀರಶೈವ-ಲಿಂಗಾಯಿತ ಸ್ವತಂತ್ರ ಧರ್ಮದ ಮಾನ್ಯತೆಗೆ ಸರ್ವ ಪ್ರಯತ್ನ: ಮಹಾಸಭೆಯಲ್ಲಿ ನಿರ್ಣಯ

ಬೆಂಗಳೂರು,ಆ.2-ವೀರಶೈವ-ಲಿಂಗಾಯಿತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯಲು ಸರ್ವ ಪ್ರಯತ್ನ ಮಾಡಲು ಅಖಿಲ ಭಾರತ ವೀರಶೈವ ಮಹಾಸಭಾ ಸಭೆಯಲ್ಲಿ ಒಕ್ಕೊರಲಿನಿಂದ ನಿರ್ಣಯಿಸಿದೆ.

ಅಖಿಲ ಭಾರತ ವೀರಶೈವ ಮಹಾಸಭಾ ಆಯೋಜಿಸಿದ್ದ ಸಭೆಯಲ್ಲಿ ಕೈಗೊಂಡ ನಿರ್ಣಯಗಳಲ್ಲಿ ಪ್ರಮುಖವಾಗಿ ವೀರಶೈವ-ಲಿಂಗಾಯಿತ ಧರ್ಮ ಹಿಂದೂ ಧರ್ಮದ ಭಾಗವಲ್ಲ. ಯಾರೆಲ್ಲ ಅಷ್ಟಾವರಣ, ಷಟ್ ಸ್ಥಳ, ಪಂಚಾಚಾರ ತತ್ತ್ವಗಳನ್ನು ಹಾಗೂ ಅಂಗೈಯಲ್ಲಿ ಲಿಂಗವಿಡಿದು ಲಿಂಗಪೂಜೆ ಮಾಡುವ ವೀರಶೈವ-ಲಿಂಗಾಯಿತರೆಲ್ಲರೂ ಒಂದೇ. ಹಾಗಾಗಿ ವೀರಶೈವ -ಲಿಂಗಾಯಿತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಪಡೆಯಲು ಎಲ್ಲ ಪ್ರಯತ್ನ ಮಾಡಲು ತೀರ್ಮಾನಿಸಲಾಗಿದೆ.

ಎರಡೂ ವಾದಗಳನ್ನು ಮಾಡುತ್ತಿರುವ ಗುರು-ವಿರಕ್ತ ಮಠಾಧೀಪತಿಗಳ, ಸಮಾಜದ, ಜನಪ್ರತಿನಿಧಿಗಳ, ಮುಖಂಡರುಗಳ ಹಾಗೂ ವಿಷಯ ತಜ್ಞರ ಸಭೆಯನ್ನು ಸದ್ಯದಲ್ಲಿಯೇ ಏರ್ಪಡಿಸಿ ಪ್ರಸ್ತುತ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಲು ಸರ್ವಾನುಮತದಿಂದ ನಿರ್ಣಯಿಸಲಾಯಿತು.

ಮಹಾಸಭೆಯ ನಿಯಮ, ನಿಬಂಧನೆಗಳನ್ನು ಒಪ್ಪಿ ಸದಸ್ಯರಾಗಿ ಕೆಲವರು ಈಗ ಇದಕ್ಕೆ ವಿರುದ್ಧವಾಗ ನಡೆದುಕೊಳ್ಳುತ್ತಿರುವವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತ ಮೂಡಿಸಲು ನಿರ್ಣಯಿಸಲಾಗಿದೆ. ಅಲ್ಲಿಯವರೆಗೆ ವೀರಶೈವ-ಲಿಂಗಾಯಿತ ಧರ್ಮದ ವಿಚಾರವಾಗಿ ಬಹಿರಂಗ ಹೇಳಿಕೆ ನೀಡಿ ಸಮಾಜದಲ್ಲಿ ಗೊಂದಲವನ್ನು ಮೂಡಿಸದೇ ಸಮಾಜದ ಘನತೆ, ಗೌರವಕ್ಕೆ ಧಕ್ಕೆ ಬಾರದಂತೆ ನಡೆದುಕೊಳ್ಳಲು ಹಾಗೂ ತಮ್ಮ ಅಭಿಪ್ರಾಯವನ್ನು ಮಹಾಸಭೆಗೆ ಮಂಡಿಸುವಂತೆ ಮನವಿ ಮಾಡಿಕೊಳ್ಳಲು ನಿರ್ಣಯಿಸಲಾಗಿದೆ.

ಈ ನಿರ್ಣಯಗಳಿಗೆ ಹಲವು ಪೀಠಾ/ಮಠಾಧೀಶರುಗಳು, ಸಂಘ-ಸಂಸ್ಥೆಗಳು, ಉಪಪಂಗಡಗಳ ಮುಖಂಡರುಗಳು ಹಾಗೂ ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಬೆಂಬಲ ವ್ಯಕ್ತಪಡಿಸಿದ್ದಾರೆ. (ವರದಿ-ಎಸ್.ಎನ್, ಎಂ.ಎನ್)

Leave a Reply

comments

Related Articles

error: