ಕರ್ನಾಟಕ

ಮಣ್ಣಿನ ಸೊಗಡನ್ನು ಅಳವಡಿಸಿಕೊಂಡಲ್ಲಿ ಕಲೆಗಳು ಜನಮನ ತಲುಪಲಿವೆ : ಗೋಪಾಲಕೃಷ್ಣನಾಯರಿ

ರಾಜ್ಯ(ತುಮಕೂರು)ಆ.3:-ಆಧುನಿಕ ಕಲೆಗಳು ಜನಮನ ಮುಟ್ಟಬೇಕಾದರೆ ಈ ಮಣ್ಣಿನ ಸೊಗಡನ್ನು ಅಳವಡಿಸಿಕೊಂಡರೆ ಮಾತ್ರ ಸಾಧ್ಯ ಎಂದು ಹಿರಿಯ ರಂಗಕರ್ಮಿ ಗೋಪಾಲಕೃಷ್ಣನಾಯರಿ ಹೇಳಿದರು.

ನಗರದ ಡಾ.ಗುಬ್ಬಿ ವೀರಣ್ಣ ಕಲಾಕ್ಷೇತ್ರದಲ್ಲಿ ನಾಟಕಮನೆ ವತಿಯಿಂದ ಭಾರತ ಸರ್ಕಾರದ ಸಂಸ್ಕೃತಿ ಮಂತ್ರಾಲಯದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮೂರು ದಿನಗಳ ವೈವಿಧ್ಯಮಯ ರಂಗೋತ್ಸವ ಕಾರ್ಯಕ್ರಮದ ಮುಕ್ತಾಯ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಜಾನಪದದಿಂದ ವಿಕಾಸಗೊಂಡು ವಿವಿಧ ಪ್ರಕಾರಗಳಲ್ಲಿ ಪಸರಿಸುತ್ತಿರುವ ಎಲ್ಲಾ ಕಲೆಗಳು ಆಯಾಯ ಮಣ್ಣಿನ ಸೊಗಡನ್ನು ಉಳಿಸಿಕೊಳ್ಳಲೇಬೇಕಾಗಿದೆ. ಇಲ್ಲವಾದಲ್ಲಿ ಅದು ಕೇವಲ ದೈಹಿಕ ಚಟುವಟಿಕೆಯಾಗಿ ಮಾತ್ರ ಕಾಣುತ್ತದೆ. ಈ ಹಿನ್ನೆಲೆಯಲ್ಲಿ ಇಂದಿಗೂ ವೃತ್ತಿ ಮತ್ತು ಹವ್ಯಾಸಿ ರಂಗಭೂಮಿಯ ಅನೇಕ ನಾಟಕಗಳಲ್ಲಿ ಯಕ್ಷಗಾನ, ದೊಡ್ಡಾಟ, ಬಯಲಾಟ, ವೀರಗಾಸೆ, ಮಾರಿ ಕುಣಿತ, ಕೊರಗರ ಕುಣಿತದಂತಹ ಹಲವು ಅಂಶಗಳು ಸೇರ್ಪಡೆಗೊಂಡಿವೆ ಎಂದರು. ಕಳೆದ 20 ವರ್ಷಗಳಲ್ಲಿ ತುಮಕೂರಿನ ನಾಟಕಮನೆ ಇಂತಹ ಹಲವಾರು ಮಣ್ಣಿನ ಸೊಗಡಿನ ಪ್ರಯೋಗಗಳನ್ನು ತಮ್ಮ ನಾಟಕಗಳಲ್ಲಿ ಪ್ರದರ್ಶಿಸುವ ಮೂಲಕ ರಂಗಭೂಮಿಗೆ ತನ್ನನ್ನು ತೊಡಗಿಸಿಕೊಂಡಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಲಾಶ್ರೀ ಡಾ.ಲಕ್ಷ್ಮಣ್‌ದಾಸ್ ಮಾತನಾಡಿ, ಡಾ.ಸಿದ್ದಲಿಂಗಯ್ಯ ಅವರು ರಚಿಸಿರುವ ಏಕಲವ್ಯ ನಾಟಕ ಪಿಯು ಮಕ್ಕಳಿಗೆ ಪಠ್ಯವಾಗಿ, ಸಾವಿರಾರು ಪ್ರದರ್ಶನವನ್ನು ಕಂಡಿದೆ. ಇಂತಹ ನಾಟಕವನ್ನು ರಂಗಕ್ಕೆ ಅದರಲ್ಲಿಯೂ ದೊಡ್ಡಾಟದಂತಹ ಜಾನಪದ ಕಲೆಗೆ ಅಳವಡಿಸುವ ಮೂಲಕ ಜನಕಥನಗಳಿಗೆ ವೇದಿಕೆ ಒದಗಿಸಿರುವ ಹರಪ್ಪನಹಳ್ಳಿ ಪರುಶುರಾಮ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಕಳೆದ ಮೂರು ದಿನಗಳಿಂದ ರಂಗಮಂದಿರದಲ್ಲಿ ವೈವಿಧ್ಯಮಯ ನಾಟಕಗಳನ್ನು ವಿವಿಧ ಕಲಾ ತಂಡಗಳು ನಾಟಕಮನೆ ಸಹಯೋಗದಲ್ಲಿ ಪ್ರದರ್ಶಿಸಿರುವುದು ಸಂತೋಷ ತಂದಿದೆ. ಇದಕ್ಕಾಗಿ ನಾಟಕಮನೆ ಮಹಾಲಿಂಗು ಅವರ ತಂಡವನ್ನು ಅಭಿನಂದಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ರಂಗಕರ್ಮಿ ಚನ್ನಬಸಯ್ಯ ಗುಬ್ಬಿ, ಹೆಚ್.ಎಂ.ರಂಗಯ್ಯ, ಮೆಳೇಹಳ್ಳಿ ದೇವರಾಜು, ನಾಟಕಮನೆ ಕಾರ್ಯನಿರ್ವಾಹಕ ಟ್ರಸ್ಟಿ ನಾಟಕಮನೆ ಮಹಾಲಿಂಗು ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: