ಕರ್ನಾಟಕ

ಆರ್ಥಿಕ ಅಭಿವೃದ್ಧಿಗೆ ಗ್ರಾಮೀಣ ಗೃಹ ಉತ್ಪನ್ನಗಳು ಸಹಕಾರಿ: ಮುಂಡಂಡ ಸಿ.ನಾಣಯ್ಯ

ಮಡಿಕೇರಿ ಆ.03-ವಿರಾಜಪೇಟೆ ಮತ್ತು ಮಡಿಕೇರಿ ತಾಲ್ಲೂಕು ಸಾವಯವ ಕೃಷಿ ಸಹಕಾರಿ ನಿಯಮಿತ ಹಾಗೂ ಕೊಡಗು ನೇಚರ್ಸ್ ಬೆಸ್ಟ್ ಫುಡ್ ಕ್ಲಸ್ಟರ್ ಇವರ ಸಂಯುಕ್ತ ಆಶ್ರಯದಲ್ಲಿ ಸ್ಥಾಪನೆಗೊಂಡ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕು (ನಬಾರ್ಡ್) ಅನುದಾನಿತ ಯೋಜನೆಯಾದ ಗ್ರಾಮೀಣ ಮಾರಾಟ ಮಳಿಗೆಗೆ ಬುಧವಾರ ಚಾಲನೆ ದೊರೆಯಿತು.

ಉದ್ಘಾಟನೆಯನ್ನು ನಬಾರ್ಡಿನ ಜಿಲ್ಲಾ ಅಭಿವೃದ್ಧಿಯ ಸಹಾಯಕ ಮಹಾ ಪ್ರಬಂಧಕರಾದ ಮುಂಡಂಡ ಸಿ.ನಾಣಯ್ಯ ಅವರು ನೆರವೇರಿಸಿದರು. ಬಳಿಕ ಮಾತನಾಡಿದ ಮುಂಡಂಡ ಸಿ.ನಾಣಯ್ಯ ಅವರು ಕೊಡಗು ಜಿಲ್ಲೆಯು ಸಂಪದ್ಭರಿತವಾಗಿದ್ದು, ಇಲ್ಲಿಯ ಸಂಪನ್ಮೂಲಗಳನ್ನು ಬಳಸಿಕೊಂಡು ಜಂಟಿ ಭಾದ್ಯತಾ ಗುಂಪುಗಳ ಮುಖಾಂತರ ಬ್ಯಾಂಕುಗಳಿಂದ ಆರ್ಥಿಕ ಸಹಕಾರ ಪಡೆದು ಗೃಹೋತ್ಪನ್ನ ಜೊತೆ, ವಿವಿಧ ರೀತಿಯ ಆರ್ಥಿಕ ಚಟುವಟಿಕೆಯಲ್ಲಿ ತೊಡಗಿಕೊಂಡು, ತಮ್ಮ ಜೀವನ ಶೈಲಿ ಬದಲಾಯಿಸಿಕೊಳ್ಳುವಂತಾಗಬೇಕು ಎಂದು ಅವರು ಸಲಹೆ ಮಾಡಿದರು.

ಹಂತ ಹಂತವಾಗಿ ಆರ್ಥಿಕತೆ ಹೆಚ್ಚಿಸಿಕೊಳ್ಳಲು ಸಂಘಟಿತರಾಗಿ ತಾಲ್ಲೂಕು ಸಾವಯವ ಕೃಷಿಕರ ಸಂಘ ಹಾಗೂ ಕೊಡಗು ನೇಚರ್ಸ್ ಬೆಸ್ಟ್ ಪುಡ್ ಕ್ಲಸ್ಟರ್ ಇದರ ಎಲ್ಲಾ ಸದಸ್ಯರು ಪ್ರಯತ್ನಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲೆಯ ವಿವಿಧ ಗೃಹ ಉತ್ಪನ್ನಗಳಿಗೆ ಅಪಾರ ಬೇಡಿಕೆಯಿದ್ದು, ಈ ಬೇಡಿಕೆಯನ್ನು ಪೂರೈಸಲು ಸಂಘಟಿತವಾಗಿ ಪ್ರಯತ್ನಿಸಿದ್ದೇ ಆದಲ್ಲಿ ರಾಜ್ಯ ಮಟ್ಟದಲ್ಲಿ ರಾಷ್ಟ್ರ ಮಟ್ಟದಲ್ಲಿ ಗುರುತಿಸಲ್ಪಡುವುದು ಮಾತ್ರವಲ್ಲ, ವಿಶ್ವ ಮಟ್ಟದಲ್ಲೂ ಪ್ರತಿಸ್ಟಿತ ಸ್ಥಾನ ಪಡೆಯುವುದರಲ್ಲಿ ಸಂಶಯವಿಲ್ಲ ಎಂದರು. ಗ್ರಾಮೀಣ ಗೃಹ ಉತ್ಪನ್ನಗಳ ಮಾರಾಟವು ದೇಶದ ಆರ್ಥಿಕ ಸೂಚ್ಯಂಕದ ಶೇ.29 ರಿಂದ 30 ಇದ್ದು, ಗ್ರಾಮೀಣ ಭಾಗದ ಜನರು ವಿಶೇಷವಾಗಿ ಸ್ವಸಹಾಯ ಸಂಘಗಳು, ಜಂಟಿ ಭಾದ್ಯತಾ ಗುಂಪುಗಳು ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಸದಸ್ಯರುಗಳು ಪ್ರಾಮಾಣಿಕತೆಯಿಂದ ಬದ್ಧತೆಯಿಂದ ಪ್ರಯತ್ನಿಸಿದ್ದಲ್ಲಿ ಒಟ್ಟು ಆರ್ಥಿಕ ಸೂಚ್ಯಂಕಕ್ಕೆ ಅಪಾರ ಕೊಡುಗೆ ನೀಡಿದಂತಾಗುತ್ತದೆ ಎಂದು ಮುಂಡಂಡ ಸಿ ನಾಣಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಬಂಗಾರು ಗುಪ್ತಾಜಿ, ಕಾರ್ಪೋರೇಷನ್ ಬ್ಯಾಂಕು ಚಿಕ್ಕಪೇಟೆ ಶಾಖೆಯ ವ್ಯವಸ್ಥಾಪಕಿ ಕೆ.ಎಸ್.ಕಮಲಾಕ್ಷಿ, ಪ.ಪಂ.ಸದಸ್ಯರಾದ ಪಾಂಡಂಡ ರಜನ್ ಮೇದಪ್ಪ, ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥರಾದ ಸಜು ಜಾರ್ಜ್, ಕೊಡಗು ನೇಚರ್ಸ್ ಬೆಸ್ಟ್ ಫುಡ್ ಕ್ಲಸ್ಟರ್‍ನ ಅಧ್ಯಕ್ಷರಾದ ಫ್ಯಾನ್ಸಿ ಗಣಪತಿ, ನಡಿಕೇರಿಯಂಡ ಕರುಂಬಯ್ಯ, ಸಾವಯವ ಕೃಷಿಕರ ಸಂಘದ ಅಧ್ಯಕ್ಷರಾದ ಬಿ.ಪಿ.ಮುದ್ದಣ್ಣ ಇತರರು ಇದ್ದರು. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: