ಮೈಸೂರು

ಗೌರಿ-ಗಣೇಶ ಹಬ್ಬಕ್ಕೆ ಭರದ ಸಿದ್ಧತೆ: ಬೆಲೆಯೇರಿಕೆಯ ನಡುವೆಯೂ ಖರೀದಿಗೆ ಮುಗಿಬಿದ್ದ ಜನತೆ

ಭಾನುವಾರ-ಸೋಮವಾರ ಗೌರಿ-ಗಣೇಶ ಹಬ್ಬ. ಹಬ್ಬಕ್ಕಾಗಿ ಭರ್ಜರಿ ಸಿದ್ಧತೆಗಳು ನಡೆದಿವೆ. ಮೈಸೂರಿನ ಪ್ರಮುಖ ಬೀದಿಗಳಲ್ಲಿ ಗೌರಿ-ಗಣೇಶನ ವಿಗ್ರಹ, ಬಾಳೆ ಕಂದು, ಮಾವಿನ ಎಲೆ ಜೊತೆ ತೋರಣ ಕ್ಕೆ ಸಂಬಂಧಿಸಿದ ವಿವಿಧ ಸಾಮಗ್ರಿಗಳು ಗಮನ ಸೆಳೆಯುತ್ತಿದೆ.

ಆದರೆ ದಿನದಿಂದ ದಿನಕ್ಕೆ ಬೆಲೆ ಏರಿಕೆಯಾಗುತ್ತಲೇ ಇದ್ದು, ಬೆಲೆ ಏರಿಕೆಯ ನಡುವೆಯೂ ಗ್ರಾಹಕರು ತಮ್ಮ ಅಗತ್ಯ ವಸ್ತುಗಳ ಖರೀದಿಗಾಗಿ ಮಾರುಕಟ್ಟೆಗೆ ಮುಗಿ ಬಿದ್ದಿದ್ದಾರೆ.

ಮೈಸೂರು ನಗರದಲ್ಲಂತು ಜನತೆ ಗೌರಿ ಹಬ್ಬಕ್ಕಾಗಿ ಗೌರಿ ಪ್ರತಿಮೆ, ಮೊರ, ಹೊಸಬಟ್ಟೆ, ಬಳೆ, ಹೂ-ಹಣ್ಣುಗಳ ಖರೀದಿಯಲ್ಲಿ ತೊಡಗಿರುವುದು ಕಂಡುಬಂತು.

ಪ್ರಮುಖ ಮಾರುಕಟ್ಟೆಗಳಲ್ಲಿ ಜನಸಾಗರವೇ ಹರಿದು ಬಂದಿತ್ತು. ನಗರದ  ಅಗ್ರಹಾರದ ನೂರೊಂದು ಗಣಪತಿ ದೇವಳದ ಬಳಿಯಂತೂ ಶನಿವಾರವೇ ಜನಸಂದಣಿ ಕಂಡುಬಂದಿದೆ.

ಶುಕ್ರವಾರ ಹಲವು ಕಾರ್ಮಿಕ ಸಂಘಟನೆಗಳು ಬಂದ್‍ಗೆ ಕರೆ ನೀಡಿದ್ದರಿಂದ ಹಲವೆಡೆ ಬಸ್ ಸಂಚಾರ ಇಲ್ಲದ ಕಾರಣ ಜನರಿಗೆ ಮಾರುಕಟ್ಟೆಗೆ ಬರಲಾಗಿರಲಿಲ್ಲ. ಶುಕ್ರವಾರ ರಜೆ ಇದ್ದ ಕಾರಣ ಕೆಲವು ನೌಕರರು ಶನಿವಾರಕ್ಕೂ ರಜೆ ಮುಂದುವರಿಸಿದ್ದು ಈ ಬಾರಿ ವಾರದ ಕೊನೆಯಲ್ಲಿ ಹಬ್ಬದ ಸಿದ್ಧತೆಯನ್ನು ಭರ್ಜರಿಯಾಗಿಯೇ ನಡೆಸಿದ್ದಾರೆ.

ಮಾರುಕಟ್ಟೆಯಲ್ಲಿ ಸೇವಂತಿಗೆ ದೊಡ್ಡದು ಮೀಟರೊಂದಕ್ಕೆ 30 ರೂ, ಸಣ್ಣದು 20 ರೂ, ಮಲ್ಲಿಗೆ ಮೀಟರೊಂದಕ್ಕೆ 30 ರೂ, ತಾವರೆ ಒಂದು ಹೂವಿಗೆ 10 ರೂ, ಸೇಬು ಕೆಜಿಗೆ 120 ರೂ, ದಾಳಿಂಬೆ ಕೆಜಿಗೆ 120 ರೂ, ಮುಸಂಬಿ ಕೆಜಿಗೆ 60 ರೂ, ಬಾಳೆಹಣ್ಣು ಕೆಜಿಗೆ 100 ರೂ ಗಳಂತೆ ಮಾರಾಟವಾಗುತ್ತಿದೆ. ಈಗ ಮಾರುಕಟ್ಟೆಯಲ್ಲಿ ಹೂ-ಹಣ್ಣುಗಳದ್ದೇ ಕಾರುಬಾರು. ಅದೇನೆ ಇರಲಿ, ಹಬ್ಬದ ಸಮಯದಲ್ಲಿ ಎಷ್ಟು ದುಬಾರಿಯಾದರೂ ಅಗತ್ಯ ವಸ್ತುಗಳು ಮನೆ ಸೇರಲೇಬೇಕು.

Leave a Reply

comments

Related Articles

error: