ದೇಶಪ್ರಮುಖ ಸುದ್ದಿ

ಶಶಿತರೂರ್ ಮಾನಹಾನಿ ಪ್ರಕರಣ : ಅರ್ನಾಬ್ ಗೋಸ್ವಾಮಿಗೆ ದೆಹಲಿ ಹೈಕೋರ್ಟ್ ನೋಟಿಸ್

ನವದೆಹಲಿ, ಆ.4 : ಸುನಂದಾ ಪುಷ್ಕರ್ ಅವರ ನಿಗೂಢ ಸಾವು ಕುರಿತು ಕಲ್ಪಿತ ವರದಿ ಪ್ರಕಟಿಸದಂತೆ ರಿಪಬ್ಲಿಕ್ ಚಾನೆಲ್‍ಗೆ ದೆಹಲಿ ಹೈಕೋರ್ಟ್ ಸೂಸಿಸಿದೆ.

ಪತ್ರಕರ್ತ ಅರ್ನಬ್ ಗೋಸ್ವಾಮಿ ಹಾಗೂ ರಿಪಬ್ಲಿಕ್ ಚಾನಲ್ ವಿರುದ್ಧ ಸುನಂದಾ ಅವರ ಪತಿ ಹಾಗೂ ಕಾಂಗ್ರೆಸ್ ನಾಯಕ ಶಶಿ ತರೂರ್ ಅವರು ಸಲ್ಲಿಸಿದ್ದ ಅರ್ಜಿಯನ್ನು ದೆಹಲಿಯ ಹೈಕೋರ್ಟ್ ಪುರಸ್ಕರಿಸಿದ್ದು, ಕಲ್ಪಿತವಾದ ತಪ್ಪು ತಪ್ಪು ವರದಿ ಪ್ರಕಟಿಸಬೇಡಿ ಎಂದು ರಿಪಬ್ಲಿಕ್ ಚಾನಲ್‍ಗೆ ಸೂಚನೆ ನೀಡಿದೆ. ಗಮನಿಸಬೇಕಾದ ಬಹುಮುಖ್ಯ ಅಂಶವೆಂದರೆ, ಶಶಿ ತರೂರ್ ಅವರು ಪ್ರತಿಕ್ರಿಯೆ ನೀಡದೇ ಇರುವುದನ್ನು ಗೌರವಿಸಬೇಕು ಎಂದು ಕೋರ್ಟ್‍ ಹೇಳಿದೆ.

ಸುನಂದಾ ಪುಷ್ಕರ್ ಸಾವು ಪ್ರಕರಣದ ವರದಿಯಲ್ಲಿ ತಮ್ಮ ವಿರುದ್ಧ “ಕ್ರಿಮಿನಲ್” ಶಬ್ದ ಬಳಸಿರುವುದನ್ನು ವಿರೋಧಿಸಿ ಮೇ.29 ರಂದು ಅರ್ನಬ್ ಗೋಸ್ವಾಮಿ ವಿರುದ್ಧ 2 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಈ ಅರ್ಜಿಯನ್ನು ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್, “ಅರ್ನಬ್ ಗೋಸ್ವಾಮಿ ಅವರ ರಿಪಬ್ಲಿಕ್ ಚಾನಲ್ ಸುನಂದಾ ಪುಷ್ಕರ್ ಪ್ರಕರಣಕ್ಕೆ ಸಂಬಂಧಿಸಿದ ನೈಜ ಅಂಶಗಳನ್ನು ಮಾತ್ರ ವರದಿ ಮಾಡಬಹುದು. ಆದರೆ ಕಲ್ಪಿತ ಮತ್ತು ಉದ್ದೇಶಪೂರ್ವಕ ವರದಿಗಳನ್ನು ಪ್ರಕಟಿಸುವಂತಿಲ್ಲ. ಮತ್ತು ಶಶಿ ತರೂರ್ ಅವರನ್ನು ಕ್ರಿಮಿನಲ್ ಎಂದು ಹೇಳುವಹಾಗಿಲ್ಲ” ಎಂದು ಹೇಳಿದೆ.

ಶಶಿ ತರೂರ್ ಅವರು ಮಾನನಷ್ಟ ಮೊಕದ್ದಮೆ ಹೂಡಿರುವ ಕುರಿತು ನೋಟಿಸ್ ನೀಡಿರುವ ನ್ಯಾಯಾಲಯವು, ಆಗಸ್ಟ್ 16 ರ ಒಳಗೆ ಪ್ರತಿಕ್ರಿಯೆ ನೀಡುವಂತೆ ಅರ್ನಬ್ ಗೋಸ್ವಾಮಿ ಹಾಗೂ ರಿಪಬ್ಲಿಕ್ ಚಾನಲ್‍ಗೆ ತಿಳಿಸಿದೆ.

-ಎನ್.ಬಿ.

Leave a Reply

comments

Related Articles

error: