ಕರ್ನಾಟಕಪ್ರಮುಖ ಸುದ್ದಿ

ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗೆ ಆದ್ಯತೆ ನೀಡಲಾಗಿದೆ : ಕೆ.ಎಸ್.ಪುಟ್ಟಣ್ಣಯ್ಯ

ರಾಜ್ಯ(ಮಂಡ್ಯ)ಆ.4:- ಪಾಂಡವಪುರ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸುಮಾರು 128 ಹಳ್ಳಿಗಳನ್ನು 12 ಕೋಟಿ ರೂ. ವೆಚ್ಚದಲ್ಲಿ ನಗರವ್ಯಾಪ್ತಿಯ ವಿದ್ಯುತ್ ಕ್ಷೇತ್ರ ಸಬಲೀಕರಣ(ಐಪಿಡಿಎಸ್) ಮತ್ತು ದೀನ್ ದಯಾಳು ಉಪಾಧ್ಯಾಯ ಗ್ರಾಮೀಣ ಜ್ಯೋತಿ (ಡಿಡಿಯುಜಿಜೆವೈ) ಕಾರ್ಯಕ್ರಮದಡಿ ಅಭಿವೃದ್ದಿಪಡಿಸಲಾಗುತ್ತಿದೆ ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ತಿಳಿಸಿದರು.
ಪಟ್ಟಣದ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಕನಗನಮರಡಿ ಗ್ರಾಮಗಳು ಸೇರಿದಂತೆ ವಿದ್ಯುತ್ ಇಲಾಖೆವತಿಯಿಂದ ಪಾಂಡವಪುರ ಪಟ್ಟಣದ 11ಕೆ.ವಿ ಮಾರ್ಗ ಹಾಗೂ ಎಲ್‍ಟಿ ಮಾರ್ಗ ಸೇರಿದಂತೆ ಕಬ್ಬಿಣದ ಕಂಬಗಳು, ಮುರಿದ ಕಂಬಗಳು, ಹಾಳಾಗಿರುವ ವಿದ್ಯುತ್ ಕಂಬಗಳನ್ನು ಬದಲಾಯಿಸುವ ಕಾಮಗಾರಿಗೆ ಪೂಜೆ ಸಲ್ಲಿಸಿ ಮಾತನಾಡಿದರು. ವಿದ್ಯುತ್ ಇಲಾಖೆಯಲ್ಲಿ ಇದೇ ಪ್ರಥಮ ಬಾರಿಗೆ ನಗರ ಪ್ರದೇಶ ಮತ್ತು ಗ್ರಾಮೀಣ ಪ್ರದೇಶಗಳ ಅಭಿವೃದ್ದಿಗೆ ಆದ್ಯತೆ ನೀಡಲಾಗಿದ್ದು ವಿದ್ಯುತ್ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ ಎಂದರು. ಪಟ್ಟಣ ಪ್ರದೇಶಕ್ಕೆ ನಿರಂತರವಾಗಿ ವಿದ್ಯುತ್ ಸರಬರಾಜು ಮಾಡುವ ಉದ್ದೇಶದಿಂದ ಅಲ್ಲಲ್ಲಿ ವಿದ್ಯುತ್ ಪರವರ್ತಕಗಳನ್ನು ಅಳವಡಿಸಿ ಪಟ್ಟಣವನ್ನು ಅಭಿವೃದ್ದಿ ಪಡಿಸುವುದರ ಜತೆಗೆ ನಿಗಮಕ್ಕೆ ನಷ್ಟವಾಗುತ್ತಿರುವ ವಿದ್ಯುತ್‍ನ್ನು ತಪ್ಪಿಸಲು ಇಂತಹ ಕಾರ್ಯಕ್ರಮವನ್ನು ರೂಪಿಸಲಾಗಿದೆ ಎಂದು ಹೇಳಿದರು.
ಕಾರ್ಯನಿರ್ವಾಹಕ ಎಂಜಿನಿಯರ್ ಎನ್.ಶ್ರೀನಿವಾಸ ಮೂರ್ತಿ, ಜಿ.ಪಂ ಸದಸ್ಯ ತಿಮ್ಮೇಗೌಡ, ಎಇಇ ವಿ.ಪುಟ್ಟಸ್ವಾಮಿ, ಎಇಗಳಾದ ಮಹದೇವು, ನಂದೀಶ್, ರಂಗರಾಜು, ಗುತ್ತಿಗೆದಾರರಾದ ಶೇಖರ್, ಮೊಹಮದ್ ಷರೀಫ್, ಪರಮೇಶ್, ಶೇಖರ್, ಗೋವಿಂದೇಗೌಡ ಸೇರಿದಂತೆ ಹಲವರು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: