ಕರ್ನಾಟಕದೇಶಪ್ರಮುಖ ಸುದ್ದಿ

ಪ್ರಭಾವಿ ಸಚಿವನಿಗೆ ಐಟಿ ಆಘಾತ : ಡಿಕೆಶಿ ರಕ್ಷಣೆಗೆ ಸಜ್ಜಾಗುತ್ತಿದೆ ಕಾಂಗ್ರೆಸ್‍ ಕಾನೂನು ತಜ್ಞರ ತಂಡ!

ಬೆಂಗಳೂರು, ಆ.4 : ಸತತ 60 ಗಂಟೆಗಳಿಂದ ರಾಜ್ಯದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ನಿವಾಸ, ಕಚೇರಿ, ಆಪ್ತರ ನಿವಾಸಗಳ ಮೇಲೆ ಐ.ಟಿ. ಅಧಿಕಾರಿಗಳು ದಾಳಿ ಮಾಡಿ ಪರಿಶೋಧನೆ ನಡೆಸುತ್ತಿದ್ದಾರೆ. 3ನೇ ದಿನವೂ ಐಟಿ ದಾಳಿ ಮುಂದುವರಿದಿರುವುದು ದೇಶದ ರಾಜಕೀಯ ಮುಖಂಡರ ಹುಬ್ಬೇರುವಂತೆ ಮಾಡಿದ್ದು, ಕಾಂಗ್ರೆಸ್‍ನ ಉನ್ನತ ಮಟ್ಟದ ಕಾನೂನು ತಜ್ಞರ ತಂಡ ಡಿಕೆಶಿಯವರನ್ನು ರಕ್ಷಣೆ ಮಾಡಲು ಸಜ್ಜಾಗುತ್ತಿದೆ ಎಂದು ತಿಳಿದುಬಂದಿದೆ.

ಸದಾಶಿವ ನಗರದಲ್ಲಿರುವ ಡಿ.ಕೆ.ಶಿವಕುಮಾರ್ ಅವರ ನಿವಾಸದಲ್ಲಿ ಕಳೆದ 60 ಗಂಟೆಗಳಿಂದ ನಡೆಯುತ್ತಿರುವ ಪರಿಶೀಲನೆ ಕಾರ್ಯ ಅಂತಿಮ ಹಂತಕ್ಕೆ ಬಂದಿದೆ ಎನ್ನಲಾಗಿದೆಯಾದರೂ, ಯಾವಾಗ ನಿಲ್ಲಬಹುದು ಎಂಬ ಬಗ್ಗೆ ಮಾಹಿತಿ ಇಲ್ಲ.

ಬೆಂಗಳೂರಿನ ಸದಾಶಿವ ನಗರ, ರಾಮನಗರದ ನಿವಾಸ, ಸಹೋದರ ಹಾಗೂ ಸಂಸದ ಡಿ.ಕೆ. ಸುರೇಶ್ ನಿವಾಸ ಮತ್ತು ಕಚೇರಿ, ನವದೆಹಲಿಯ ನಿವಾಸ, ಆಪ್ತರು, ಸಂಬಂಧಿಕರ ನಿವಾಸಗಳು ಸೇರಿ ಸುಮಾರು 70 ಸ್ಥಳಗಳಲ್ಲಿ ಐ.ಟಿ. ಅಧಿಕಾರಿಗಳು ದಾಳಿ ಮಾಡಿ ಪರಿಶೋಧನೆ ಕೈಗೊಂಡಿದ್ದಾರೆ. ಈ ವೇಳೆ ಅಮೂಲ್ಯ ದಾಖಲೆಗಳು ಐಟಿ ಅಧಿಕಾರಿಗಳ ಕೈಸೇರಿವೆ ಎಂದು ಮೂಲಗಳು ತಿಳಿಸಿವೆ.

ಡಿಕೆಶಿ ರಕ್ಷಣೆಗೆ ರೆಡಿಯಾಗುತ್ತಿದೆ ಕಾನೂನು ತಜ್ಞರ ತಂಡ :

ಸಚಿವ ಡಿ.ಕೆ.ಶಿವಕುಮಾರ್ ಮೇಲಿನ ಆದಾಯ ತೆರಿಗೆ ಇಲಾಖೆ ದಾಳಿ ದೇಶಾದ್ಯಂತ ಸುದ್ದಿಯಾಗಿದ್ದು, ಮೊದಲ ದಿನವೇ ಸಂಸತ್ತಿನ ಉಭಯಸದನಗಳಲ್ಲಿ ಪ್ರತಿಧ್ವನಿಸಿತು. ಈ ದಾಳಿಯ ಜೊತೆಯಲ್ಲಿ ಗುಜರಾತ್‍ನಿಂದ ರಾಜ್ಯಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಕುದುರೆ ವ್ಯಾಪಾರ ತಪ್ಪಿಸಲು ಕಾಂಗ್ರೆಸ್ ಸದಸ್ಯರನ್ನು ಬೆಂಗಳೂರಿಗೆ ಕರೆತಂದಿದ್ದ ಪ್ರಕರಣವೂ ಥಳಕು ಹಾಕಿಕೊಂಡದ್ದರಿಂದ ದೇಶಾದ್ಯಂತ ಈ ದಾಳಿ ಸಂಚಲನ ಮೂಡಿಸಿದೆ.

ಕಾಂಗ್ರೆಸ್‍ ಹೈಕಮಾಂಡ್‍ಗೆ ನಿಷ್ಠರಾಗಿದ್ದ ಡಿ.ಕೆ.ಶಿವಕುಮಾರ್ ಅವರು, ಪಕ್ಷಕ್ಕೆ ಸಂಕಷ್ಟ ಒದಗಿಬಂದಾಗಲೆಲ್ಲಾ ಡಿಕೆಶಿ ನೆರವಿಗೆ ಬರುತ್ತಿದ್ದರು ಎಂದೇ ರಾಜಕೀಯ ವಲಯದಲ್ಲಿ ಹೇಳಲಾಗುತ್ತದೆ. ಹೀಗಾಗಿ ಬಿಜೆಪಿಯ ಕೇಂದ್ರ ನಾಯಕತ್ವವು ಐಟಿ ಇಲಾಖೆಯ ಮೂಲಕ ಡಿಕೆಶಿ ಮೇಲಿನ ದಾಳಿಯನ್ನು ತೀಕ್ಷಗೊಳಿಸಿದೆ ಎನ್ನುವ ಅಭಿಪ್ರಾಯಗಳು ರಾಜಕೀಯ ವಲಯದಲ್ಲಿ ಕೇಳಿ ಬಂದಿದೆ.

ಪಕ್ಷದ ನೆರವಿಗೆ ನಿಲ್ಲುತ್ತಿದ್ದ ಪ್ರಭಾವಿ ಸಚಿವನ ಮೇಲೆ ಐಟಿ ಇಲಾಖೆ ದಾಳಿ ನಡೆಸಿರುವುದರಿಂದ ಸಹಜವಾಗಿ ಕಾಂಗ್ರೆಸ್ ಹೈಕಮಾಂಡ್ ಸಿಟ್ಟಾಗಿದೆ. ಮತ್ತು ಡಿಕೆಶಿಯನ್ನು ಕಾನೂನು ಕೋಳಗಳಿಂದ ರಕ್ಷಿಸಲು ಘಟಾನುಘಟಿ ವಕೀಲರ ತಂಡವನ್ನು ಅಣಿಯಾಗಿಸುತ್ತಿದೆ ಎಂದು ತಿಳಿದು ಬಂದಿದೆ.

ಚಕ್ರವ್ಯೂಹದಿಂದ ಹೊರಬರುವರೇ ಡಿಕೆಶಿ :

ಡಿಕೆಶಿ ರಕ್ಷಣೆಗೆ ಘಟಾನುಘಟಿ ವಕೀಲರ ತಂಡವೇ ಸಿದ್ಧವಾಗಿದ್ದರೂ ಕೇಂದ್ರ ಸರ್ಕಾರ ಒಡ್ಡಿರುವ ಚಕ್ರವ್ಯೂಹದಿಂದ ಅವರು ಹೊರಬರಲು ಸಾಧ್ಯವೇ ಎಂದು ಕೇಳುವಂತಾಗಿದೆ. ಏಕೆಂದರೆ ಸತತ 60 ಗಂಟೆಗಳ ನಂತರವೂ ಐಟಿ ಇಲಾಖೆ ಪರಿಶೋಧನೆ ಮುಂದುವರೆಸಿದ್ದು, ಕಾನೂನು ಸಮರ ಜಯಿಸುವುದು ಅಷ್ಟು ಸುಲಭವಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

ಮೇಲ್ನೋಟಕ್ಕೆ ಡಿಕೆಶಿ ಮನೆಯಲ್ಲಿ ಯಾವುದೇ ಅಕ್ರಮ ಚಿನ್ನಾಭರಣ ಪತ್ತೆಯಾಗಿಲ್ಲ ಎಂದು ಪ್ರಾಥಮಿಕ ಪಂಚನಾಮೆ ವರದಿಗಳು ಹೇಳುತ್ತಿವೆಯಾದರೂ, ಐಟಿ ಇಲಾಖೆ ಅಧಿಕೃತವಾಗಿ ಇನ್ನೂ ಏನನ್ನೂ ಪ್ರಕಟಿಸಿಲ್ಲ. ಡಿಕೆಶಿ ಅವರು ವಿದೇಶದಲ್ಲೂ ಅಕ್ರಮ ಆಸ್ತಿ ಮಾಡಿರುವ ಬಗ್ಗೆ ದಾಖಲೆಗಳು ಸಿಕ್ಕವೆ ಎನ್ನಲಾಗುತ್ತಿದ್ದು, ಜಾರಿ ನಿರ್ದೇಶನಾಲಯಕ್ಕೆ ಪ್ರಕರಣ ಹಸ್ತಾಂತರವಾಗು ಸಾಧ್ಯತೆ ಇದೆ.

ಪರಿಸ್ಥಿತಿಯ ಸೂಕ್ಷ್ಮತೆ ಗಮನಿಸಿರುವ ಕಾಂಗ್ರೆಸ್ ಹೈಕಮಾಂಡ್, ಡಿಕೆಶಿ ರಕ್ಷಣೆಗೆ ಘಟಾನುಘಟಿ ವಕೀಲರ ತಂಡವನ್ನೇ ರಚಿಸಿ ಐಟಿ ವಿರುದ್ಧ ಕಾನೂನು ಸಮರಕ್ಕೆ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗುತ್ತಿದೆ. ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ವಕೀಲರಾದ ಕಪಿಲ್ ಸಿಬಲ್ ನೇತೃತದ ಲೀಗಲ್ ಟೀಂನಲ್ಲಿ ಮಾಜಿ ಅಡ್ವೊಕೇಟ್ ಜನರಲ್ ಉದಯ್ ಹೊಳ್ಳ, ಖ್ಯಾತ ವಕೀಲರಾದ ಅಜ್ಮತ್ ಪಾಷಾ ಅವರನ್ನೊಳಗೊಂಡ ಐವರು ವಕೀಲರ ತಂಡವನ್ನ ರಚಿಸಲಾಗಿದೆ ಎಂದು ತಿಳಿದುಬಂದಿದ್ದು ಈ ತಂಡ ಡಿಕೆಶಿ ಅವರನ್ನು ಕಾನೂನು ಕೋಳದಿಂದ ತಪ್ಪಿಸುವ ಪ್ರಯತ್ನ ಮಾಡಲಿದೆ ಎನ್ನಲಾಗಿದೆ.

ಒಟ್ಟಾರೆ ಗುಜರಾತ್ ಮತ್ತು ಕರ್ನಾಟಕ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿರುವ ಈ ಪ್ರಕರಣ ಯಾವ ಯಾವ ತಿರುವು ಪಡೆಯುತ್ತದೆ ಕಾದುನೋಡಬೇಕಿದೆ.

-ಎನ್.ಬಿ.

Leave a Reply

comments

Related Articles

error: