ಮನರಂಜನೆ

6ರಂದು ಕುರುಕ್ಷೇತ್ರಕ್ಕೆ ಮುಹೂರ್ತ: ಸಿಎಂ ಸೇರಿದಂತೆ ಗಣ್ಯಾತಿಗಣ್ಯರು ಭಾಗಿ

 

ಪ್ರಮುಖ ಸುದ್ದಿ, ಬೆಂಗಳೂರು, .4: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಚಿತ್ರ ಕುರುಕ್ಷೇತ್ರದ ಮುಹೂರ್ತ ಸಮಾರಂಭ ಇದೇ 6ರಂದು ನಡೆಯಲಿದೆ.

ಬಹುಕೋಟಿ ವೆಚ್ಚದೊಂದಿಗೆ ನಿರ್ಮಾಣವಾಗುತ್ತಿರುವ ಅದ್ಧೂರಿ ಹಾಗೂ ಐತಿಹಾಸಿಕ  ಕಥೆಯನ್ನೊಳಗೊಂಡ ಕುರುಕ್ಷೇತ್ರ ಚಿತ್ರದಲ್ಲಿ ಕನ್ನಡ, ತೆಲುಗು, ತಮಿಳು ಹಾಗೂ ಹಿಂದಿ ಭಾಷಾ ಚಿತ್ರಗಳ ಖ್ಯಾತ ಕಲಾವಿದರು ಅಭಿನಯಿಸುತ್ತಿರುವುದು ಒಂದು ವಿಶೇಷವಾದರೆ, ನಿರ್ದೇಶಕ ನಾಗಣ್ಣ  ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾಂಬಿನೇಷನ್‌ನಲ್ಲಿ ಈ ಮೊದಲು ಬಂದಿದ್ದ ಸಂಗೊಳ್ಳಿ ರಾಯಣ್ಣ  ನಂತರದ ಚಿತ್ರ ಇದಾಗಿರುವುದರಿಂದ ಬಹಳಷ್ಟು ನಿರೀಕ್ಷೆ ಹುಟ್ಟು ಹಾಕಿದೆ.

ಇದೀಗ ಅದೇ ಜೋಡಿ ಮತ್ತೊಂದು ಉತ್ತಮ ಪೌರಾಣಿಕ ಹಿನ್ನಲೆ ಚಿತ್ರ ನೀಡಲು ಮತ್ತೊಮ್ಮೆ ಒಂದಾಗಿ ಅದರೊಂದಿಗೆ ಕನ್ನಡ ಚಿತ್ರರಂಗದ ದಿಗ್ಗಜರನ್ನು ಸೇರಿಸಿಕೊಂಡು ಬಹುತಾರಾಗಣದಲ್ಲಿ ಸಾಹಸ, ಐತಿಹಾಸಿಕ ಕಥಾ ಹಂದರದ ಚಿತ್ರ ನಿರ್ಮಿಸುತ್ತಿದೆ.

ಸುರಸುಂದರಾಂಗ, ಕಠಾರಿ ವೀರದಂತಹ ಚಿತ್ರಗಳನ್ನು ನೀಡಿರುವ ನಿರ್ಮಾಪಕ ಮುನಿರತ್ನ ಈ ಚಿತ್ರ ನಿರ್ಮಿಸುತ್ತಿದ್ದು , ಬಾಹುಬಲಿ ಖ್ಯಾತಿಯ ಕಿಂಗ್ ಸಾಲೋಮನ್ ಸಾಹಸ ನಿರ್ದೇಶಕರಾಗಿದ್ದಾರೆ. ಡಾ.ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಈ ಚಿತ್ರಕ್ಕಿದೆ.

ನಗರದ ಗೊರಗುಂಟೆಪಾಳ್ಯ ಪ್ರಭಾಕರ್ ಕೋರೆ ಕನ್ವೆಷನ್ ಸೆಂಟರ್‌ನಲ್ಲಿ ಅಂದು ಸಂಜೆ 6.30ಕ್ಕೆ   ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಸಚಿವೆ ಉಮಾಶ್ರೀ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಎಸ್.ವಿ.ರಾಜೇಂದ್ರಸಿಂಗ್ ಬಾಬು, ನಿರ್ಮಾಪಕರಾದ ರಾಕ್‌ಲೈನ್ ವೆಂಕಟೇಶ್, ಕೃಷ್ಣೇಗೌಡ ಮತ್ತಿತರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. (ವರದಿ ಬಿ.ಎಂ)

Leave a Reply

comments

Related Articles

error: