ಪ್ರಮುಖ ಸುದ್ದಿಮೈಸೂರು

ಯುವಜನತೆಯಿಂದ ದೇಶ ಬಲಿಷ್ಠವಾಗಿದೆ: ಎಂ.ಎನ್.ಸಿ. ವಿಜಯಶಂಕರ್

ಯುವ ಸಮೂಹ ಹಾಗೂ ಪ್ರತಿಭೆ ಇವೆರಡರ ಸಂಗಮವು ದೇಶದಲ್ಲಿದ್ದು 126 ಕೋಟಿ ಜನಸಂಖ್ಯೆಯಲ್ಲಿ ಶೇ.40ರಷ್ಟು ಯುವಜನತೆ ಹೊಂದಿರುವ ಭಾರತ ಬಲಿಷ್ಠ ರಾಷ್ಟ್ರವಾಗಿದೆ ಎಂದು ಮಾಜಿ ಸಚಿವ ಹಾಗೂ ಭಾರತೀಯ ಜನತಾ ಪಕ್ಷದ ವಿಧಾನ ಪರಿಷತ್ ಸದಸ್ಯ ವಿಜಯಶಂಕರ್ ತಿಳಿಸಿದರು.
ಅವರು ಇಂದು (ಅ.20) ನಗರದ ಬೋಗಾದಿಯಲ್ಲಿರುವ ಅಮೃತಾ ವಿಶ್ವವಿದ್ಯಾಪೀಠಂ ವಿಶ್ವವಿದ್ಯಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ಅಮೃತ ಉದ್ಯೋಗ ವಿನಿಮಯ ಮತ್ತು ತರಬೇತಿ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿ ವಿಶ್ವದ ದೊಡ್ಡಣ್ಣ ಅಮೆರಿಕದ ರಾಷ್ಟ್ರಾಧ್ಯಕ್ಷರ ಕಚೇರಿಯಲ್ಲಿ ಶಿಕ್ಷಣ, ವೈದ್ಯಕೀಯ, ರಕ್ಷಣೆ ಸೇರಿದಂತೆ ಹದಿನಾರು ವಿಭಾಗಗಳು ಕಾರ್ಯನಿರ್ವಹಿಸುತ್ತಿದ್ದು ಸುಮಾರು ಒಂಬತ್ತು ವಿಭಾಗದ ಮುಖ್ಯಸ್ಥರು ಭಾರತೀಯರಾಗಿರುವುದು ಹೆಮ್ಮಯ ಸಂಗತಿ. ವಿದ್ಯೆ ಮತ್ತು ಪ್ರತಿಭೆಯಿದ್ದರೆ ಜಗತ್ತನ್ನೇ ಆಳಬಹುದು. ವಿದ್ಯಾರ್ಥಿಗಳು ಜೀವನದಲ್ಲಿ ಸ್ಪಷ್ಟ ಗುರಿಯಿರಿಸಿ ಆತ್ಮವಿಶ್ವಾಸ, ಪರಿಶ್ರಮ ಹಾಗೂ ಏಕಾಗ್ರತೆಯಿಂದ ಸಾಧಿಸಿ, ಗುರಿಯನ್ನು ತಡೆಯಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂದರು. ಸಾಧನೆ ಮಾಡಿದಾಗ ನಿಮಗೆ ಸಹಕಾರಿಯಾದ ಪರಿಸರವನ್ನು ಸ್ಮರಿಸಿ, ಹಿನ್ನೆಡೆಗೆ ಯಾರನ್ನೂ ದೂಷಣೆ ಮಾಡಬೇಡಿ ಎಂದು ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಿದರು.
ಸ್ವಾಮಿ ವಿವೇಕಾನಂದರ ನಂತರ ಮಾತಾ ಅಮೃತಾನಂದಮಯಿ ಅವರು ವಿಶ್ವ ಪರ್ಯಟನೆಯ ಮೂಲಕ ಜಗತ್ತಿನ ಮೂಲೆ ಮೂಲೆಗೆ ಭಾರತೀಯ ಧಾರ್ಮಿಕ ಹಾಗೂ ಸಾಂಸ್ಕೃತಿಕ ಪಸರಿಸುತ್ತಿರುವ ಏಕೈಕ ವ್ಯಕ್ತಿಯಾಗಿದ್ದು, ಧಾರ್ಮಿಕ ಮತ್ತು ಶೈಕ್ಷಣಿಕವಾಗಿ ವಿಶ್ವದ ಭೂಪಟದಲ್ಲಿಯೇ ಭಾರತವನ್ನು ಅತ್ಯುನ್ನತ ಸ್ಥಾನಕೇರಿಸಿದ್ದಾರೆ ಎಂದು ಮಾತಾ ಅಮೃತಾನಂದಮಯಿ ಸೇವೆಯನ್ನು ಸ್ಮರಿಸಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಇನ್ಫೋಸಿಸ್ ತರಬೇತಿ ಕೇಂದ್ರದ ಸಹಾಯಕ ಉಪಾಧ್ಯಕ್ಷ ಸತೀಶ್ ಬಿ.ನಂಜಪ್ಪ ಮಾತನಾಡಿ ಕಾರ್ಪೋರೇಟ್ ಸಂಸ್ಥೆಗಳಂತೆ ಅತ್ಯುನ್ನತ ತಂತ್ರಜ್ಞಾನ ಹಾಗೂ ವ್ಯವಸ್ಥಿತವಾದ ಕಚೇರಿಯನ್ನು ಸಿಐಆರ್ ನಲ್ಲಿ ನಿರ್ಮಿಸಿದ್ದು ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕಷ್ಟೇ ಅಲ್ಲದೇ ಉದ್ಯೋಗವಕಾಶವನ್ನು ವಿವಿಯಿಂದ ನೀಡುತ್ತಿರುವುದು ಶ್ಲಾಘನೀಯವೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದ ಅಮೃತ ವಿ.ವಿ.ಯ ಕಾರ್ಪೂರೇಟ್ ಮತ್ತು ಉದ್ಯಮ ಸಂಬಂಧಗಳ ಕೇಂದ್ರ ಹಿರಿಯ ಮ್ಯಾನೇಜರ್ ವಿಶ್ವವಿದ್ಯಾಲಯವು 1994-2016 ರ ವರೆಗೆ ನಡೆದು ಬಂದ ದಾರಿ ಬಗ್ಗೆ ಸಂಕ್ಷಿಪ್ತ ವರದಿ ವಾಚಿಸಿ ದೇಶದ ಖಾಸಗಿ ವಿವಿಗಳಲ್ಲಿ ಅಮೃತಾ ವಿ.ವಿ.ಯು ನಂ.1 ಸ್ಥಾನದಲ್ಲಿದ್ದು, ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದೊಂದಿಗೆ ಪ್ರಾಯೋಗಿಕ ಕೌಶಲಗಳನ್ನು ವೃದ್ಧಿಸುವ ಅವಕಾಶಗಳ ಬಗ್ಗೆ ತಿಳಿಸಿದರು.
ವಿ.ವಿ.ಯ ನಿರ್ದೇಶಕ ಸುನಿಲ್ ಧರ್ಮಪಾಲ ಹಾಗೂ ವ್ಯವಸ್ಥಾಪಕ ವೇಣುಗೋಪಾಲ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಪ್ರೊ. ವಿದ್ಯಾ ಪೈ ಸ್ವಾಗತಿಸಿದರು. ಕಾಲೇಜಿನ ವಿವಿಧ ವಿಭಾಗದ ಪದವಿ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

amrita4-new

Leave a Reply

comments

Related Articles

error: