ಮೈಸೂರು

ಸ್ವಾಮಿ ವಿವೇಕಾನಂದರು ಯುವಕರಿಗೆ ಮಾದರಿ: ಡಾ. ಸಿ.ಕೆ.ರೇಣುಕಾಚಾರ್ಯ

“ಸ್ವಾಮಿ ವಿವೇಕಾನಂದರವರು ತಮ್ಮ ವಿಚಾರಧಾರೆಗಳನ್ನು ದೇಶ ವಿದೇಶಗಳಲ್ಲಿ ಹರಡುವ ಮೂಲಕ ಭಾರತ ದೇಶದ ಹಿರಿಮೆಯನ್ನು ಎತ್ತಿ ಹಿಡಿದಿದ್ದಾರೆ” ಎಂದು ಮಹಾಜನ ಸ್ನಾತಕೋತ್ತರ ಕೇಂದ್ರದ ನಿರ್ದೇಶಕ ಡಾ. ಸಿ.ಕೆ. ರೇಣುಕಾಚಾರ್ಯ ಹೇಳಿದರು.

ಮಹಾಜನ ಪ್ರಥಮ ದರ್ಜೆ ಕಾಲೇಜು, ಮೈಸೂರು ವಿಶ್ವವಿದ್ಯಾನಿಲಯ ತತ್ವಶಾಸ್ತ್ರ ವಿಭಾಗ, ಸ್ವಾಮಿ ವಿವೇಕಾನಂದ ಅಧ್ಯಯನ ಪೀಠದ ಸಹಯೋಗದಲ್ಲಿ ನಗರದ ಜಯಲಕ್ಷ್ಮೀಪುರಂನಲ್ಲಿ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಅ.20 ರಂದು ಆಯೋಜಿಸಿದ್ದ ಸ್ವಾಮಿ ವಿವೇಕಾನಂದ ವಿಶೇಷ ಉಪನ್ಯಾಸ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಭವಿಷ್ಯವಿರುವುದು ಯುವಕರ ಕೈಯಲ್ಲಿ. ಯುವಕರಲ್ಲಿ ನೈತಿಕ ಶಕ್ತಿಯೊಂದಿದ್ದರೆ ಯಾವುದಕ್ಕೂ ಹೆದರದೆ ದೇಶವನ್ನು ಕಟ್ಟಬಹುದೆಂದು ಅವರಲ್ಲಿ ದೇಶಪ್ರೇಮದ ಕಿಚ್ಚನ್ನು ಹುಟ್ಟುಹಾಕುತ್ತಿದ್ದವರು ಸ್ವಾಮಿ ವಿವೇಕಾನಂದರು ಎಂದು ಅವರ ಶ್ರೇಷ್ಠ ವ್ಯಕ್ತಿತ್ವವನ್ನು ಸ್ಮರಿಸಿದರು.

ಸ್ವಾಮಿ ವಿವೇಕಾನಂದರು ಮತ್ತು ಅವರ ಜೀವನ ಸಂದೇಶದ ಕುರಿತು ಮಾತನಾಡಿದ ಶ್ರೀ ರಾಮಕೃಷ್ಣ ನೈತಿಕ ಮತ್ತು ಅಧ್ಯಾತ್ಮಿಕ ಕೇಂದ್ರದ ಮಹೇಶಾತ್ಮಾನಂದಜೀ ಮಹಾರಾಜ್ ಸ್ವಾಮೀಜಿ, “ಶಕ್ತಿಯೇ ಜೀವನವಾದರೆ ದೌರ್ಬಲ್ಯವೇ ಸಾವು. ಸಾಮಾಜಿಕ ಕಳಕಳಿಯನ್ನು ಹೋಂದಿರುವುದೇ ನಿಜವಾದ ಶಿಕ್ಷಣ” ಎಂದು ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದರು. ಮನುಷ್ಯ ಪಶುತ್ವದಿಂದ ದೈವತ್ವದ ಕಡೆಗೆ ಹೋಗಬೇಕಾದರೆ ವಿವೇಕಾನಂದರ ಕುರಿತಾದ ಇಂತಹ ಚಿಂತನ-ಮಂಥನ ಕಾರ್ಯಕ್ರಮಗಳು ಅತ್ಯವಶ್ಯಕ. ಇಂದಿನ ಯುವಕರು ವಿವೇಕಾನಂದರ ದಾರಿಯಲ್ಲಿ ಸಾಗಿ ಜೀವನವನ್ನು ರೂಪಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಸ್ವಾಮಿ ವಿವೇಕಾನಂದರು ಹಾಗೂ ಶಕ್ತಿಶಾಲಿ ವ್ಯಕ್ತಿತ್ವ ನಿರ್ಮಾಣ ಕುರಿತು ಮೈಸೂರು ವಿ.ವಿ.ಯ ಸ್ವಾಮಿ ವಿವೇಕಾನಂದ ಪೀಠದ ಸಂದರ್ಶಕ ಪ್ರಾಧ್ಯಾಪಕ ಡಾ. ಕೆ. ರಾಘವೇಂದ್ರ ಪೈ ಅವರು ಉಪನ್ಯಾಸ ನೀಡಿದರು. ಹಿರಿಯ ಸಾಹಿತಿ ಪ್ರೊ. ಪ್ರಭುಶಂಕರ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಹಾಜನ ವಿದ್ಯಾಸಂಸ್ಥೆಯ ಅಧ‍್ಯಕ್ಷ ಆರ್. ವಾಸುದೇವ ಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ವಿವಿ ತತ್ವಶಾಸ್ತ್ರ ವಿಭಾಗದ ಅಧ್ಯಕ್ಷ ಡಾ. ಎಸ್. ವೆಂಕಟೇಶ್, ಮಹಾಜನ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ. ಕೆ.ವಿ. ಪ್ರಭಾಕರ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: