ದೇಶ

ಟಿಎಂಸಿ ಈಗ ರಾಷ್ಟ್ರೀಯ ಪಕ್ಷ; ದೀದಿ ಮುಡಿಗೆ ಮತ್ತೊಂದು ಗರಿ

ನವದೆಹಲಿ: ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್‍ಗೆ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಲಭಿಸಿದ್ದು, ಕಾಂಗ್ರೆಸ್, ಬಿಜೆಪಿ, ಬಿಎಸ್ಪಿ, ಸಿಪಿಐ, ಸಿಪಿಎಂ, ಎನ್‍ಸಿಪಿ ನಂತರ ಟಿಎಂಸಿ ಭಾರತದ 7ನೇ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿದೆ.

ಪಶ್ಚಿಮ ಬಂಗಾಳ, ಮಣಿಪುರ, ತ್ರಿಪುರಾ, ಅರುಣಾಚಲ ಪ್ರದೇಶದಲ್ಲಿ ಟಿಎಂಸಿ ನೆಲೆ ಕಂಡಿದ್ದು, ನಾಲ್ಕು ರಾಜ್ಯಗಳಲ್ಲಿ ಅಸ್ತಿತ್ವ ಸಾಬೀತುಪಡಿಸಿರುವುದರಿಂದ ಟಿಎಂಸಿಗೆ ರಾಷ್ಟ್ರೀಯ ಪಕ್ಷದ ಮಾನ್ಯತೆ ನೀಡಲಾಗಿದೆ. 1968ರ ಚುನಾವಣಾ ಚಿನ್ಹೆ (ಮೀಸಲಿರಿಸುವುದು ಮತ್ತು ವಿತರಣೆ) ನಿಯಮದಲ್ಲಿ ನಮೂದಾಗಿರುವ ಅಂಶಗಳನ್ನು ಪಕ್ಷ ಪೂರೈಸಿದೆ ಎಂದು ಚುನಾವಣಾ ಆಯೋಗ ಅಭಿಪ್ರಾಯಪಟ್ಟಿದೆ.

ಒಂದೇ ಚಿಹ್ನೆಯನ್ನು ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಪಕ್ಷಗಳಿಗೆ ತತ್ಕಾಲದ ಬಳಕೆಗಾಗಿ ಚುನಾವಣಾ ಆಯೋಗ ನೀಡಿರುತ್ತದೆ. ರಾಷ್ಟ್ರೀಯ ಪಕ್ಷದ ಮಾನ್ಯತೆ ಪಡೆಯುವುದರಿಂದ ಪಕ್ಷದ ಚಿನ್ನೆಯನ್ನು ದೇಶದ ಯಾವುದೇ ಭಾಗದಲ್ಲಿ ಬೇರೆ ಪ್ರಾದೇಶಿಕ ಪಕ್ಷಗಳು ಬಳಸಿಕೊಳ್ಳಲು ಅವಕಾಶವಿರುವುದಿಲ್ಲ. ಒಂದು ವೇಳೆ ಬೇರೆ ರಾಜಕೀಯ ಪಕ್ಷಗಳು ಒಂದೇ ಚಿಹ್ನೆಯನ್ನು ಬಳಸುತ್ತಿದ್ದರೆ ಚುನಾವಣಾ ಆಯೋಗ ನೀಡುವ ಹೊಸ ಚಿಹ್ನೆಯನ್ನು ಪ್ರಾದೇಶಿಕ ಪಕ್ಷಗಳು ಆರಿಸಿಕೊಳ್ಳಬೇಕಿರುತ್ತದೆ.

ಭಾರತದಲ್ಲಿ ರಾಜಕೀಯ ಪಕ್ಷವೊಂದು ರಾಷ್ಟ್ರೀಯ ಪಕ್ಷದ ಸ್ಥಾನಮಾನ ಪಡೆಯಬೇಕಿದ್ದರೆ, ಲೋಕಸಭೆಯ ಶೇಕಡಾ 2 ರಷ್ಟು ಸ್ಥಾನಗಳನ್ನು ದೇಶದ 3 ವಿವಿಧ ರಾಜ್ಯಗಳಿಂದ ಗಳಿಸಿರಬೇಕು. ಅಥವಾ ಲೋಕಸಭೆ ಅಥವಾ ರಾಜ್ಯವಿಧಾನಸಭಾ ಚುನಾವಣೆಯಲ್ಲಿ  ನಾಲ್ಕು ರಾಜ್ಯಗಳಲ್ಲಿ ಶೇಕಡಾ 6 ರಷ್ಟು ಮತಗಳನ್ನು ಪಡೆಯುವುದರ ಜೊತೆಗೆ ನಾಲ್ಕು ಲೋಕಸಭಾ ಸ್ಥಾನಗಳನ್ನು ಗೆದ್ದಿರಬೇಕು. ಅಥವಾ ನಾಲ್ಕು ರಾಜ್ಯಗಳಲ್ಲಿ ರಾಜ್ಯಪಕ್ಷವಾಗಿ ಮಾನ್ಯತೆ ಪಡೆದಿರಬೇಕು.

ಚುನಾವಣಾ ಆಯೋಗವು ಪಕ್ಷಗಳ ಮಾನ್ಯತೆಯನ್ನು ಹತ್ತುವರ್ಷಗಳಿಗೊಮ್ಮೆ ನವೀಕರಣಗೊಳಿಸಲು ನಿಯಮ ತಿದ್ದುಪಡಿ ಮಾಡಿದ್ದು, ಈ ಮೊದಲು ಐದು ವರ್ಷಗಳಿಗೊಮ್ಮೆ ನವೀಕರಣ ಕ್ರಮ ಕೈಗೊಳ್ಳುತ್ತಿತ್ತು.

Leave a Reply

comments

Related Articles

error: