
ಪ್ರಮುಖ ಸುದ್ದಿ
ಡಿಕೆ ಶಿವಕುಮಾರ್ ಮೇಲಿನ ಐಟಿ ದಾಳಿ ಖಂಡಿಸಿ ಪ್ರತಿಭಟನೆ
ಪ್ರಮುಖ ಸುದ್ದಿ, ಕೆ.ಆರ್.ನಗರ, ಆ.೫: ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ನಿವಾಸದ ಮೇಲೆ ರಾಜಕೀಯ ಪ್ರೇರಿತ ದಾಳಿ ನಡೆಯುತ್ತಿದ್ದೆ ಎಂದು ಆರೋಪಿಸಿ ತಾಲೂಕು ಕಾಂಗ್ರೆಸ್ ಪಕ್ಷದ ವತಿಯಿಂದ ಪ್ರತಿಭಟನೆ ಮಾಡಿ ರಸ್ತೆ ತಡೆ ನಡೆಸಲಾಯಿತು.
ಪಟ್ಟಣದ ಪುರಸಭೆ ವೃತ್ತದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ವತಿಯಿಂದ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಜಿ.ಪಂ.ಮಾಜಿ ಸದಸ್ಯ ಜಿ.ಆರ್.ರಾಮೇಗೌಡ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರ ಕಾಂಗ್ರೆಸ್ ಪಕ್ಷದ ಸಚಿವರನ್ನು ಗುರಿಯಾಗಿಸಿಕೊಂಡು ದಾಳಿ ಮಾಡುತ್ತಿರುವುದು ಖಂಡನೀಯ ಎಂದರು.
ದೇಶದಲ್ಲಿಯೇ ಅತ್ಯುತ್ತಮ ಆಡಳಿತ ನೀಡುತ್ತಿರುವ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಮತ್ತು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ಷಾ ಹುನ್ನಾರ ನಡೆಸುತ್ತಿದ್ದು ಈ ಕುತಂತ್ರಕ್ಕೆ ಮುಂಬರುವ ಚುನಾವಣೆಯಲ್ಲಿ ತಕ್ಕಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಜಿ.ಪಂ ಸದಸ್ಯ ಜಯರಾಮೇಗೌಡ, ತಾ.ಪಂ. ಅಧ್ಯಕ್ಷ ಹೆಚ್.ಟಿ.ಮಂಜುನಾಥ್, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಜಿ.ಎಂ.ಹೇಮಂತ್, ಎಪಿಎಂಸಿ ಉಪಾಧ್ಯಕ್ಷ ನಾಗೇಂದ್ರ, ಮಾಜಿ ಉಪಾಧ್ಯಕ್ಷ ತೋಟಪ್ಪನಾಯಕ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)