
ಮೈಸೂರು
ಕುಲಸಚಿವ ಪ್ರೊ. ಸಿ.ಬಸವರಾಜು ಅವರ ಅಮಾನತು ಖಂಡನೀಯ
ಮೈಸೂರು ವಿವಿ ಯ ಕುಲಸಚಿವ ಪ್ರೊ. ಸಿ. ಬಸವರಾಜು ಅವರನ್ನು ಅಮಾನತುಗೊಳಿಸಿರುವುದು ಖಂಡನೀಯ ಎಂದು ಬಿವಿಎಸ್ ಕಾರ್ಯಕರ್ತ ಸೋಸಲೆ ಸಿದ್ದರಾಜು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ವಿವಿಯ ಕುಲಪತಿಗಳಾದ ಪ್ರೊ. ಕೆ.ಎಸ್. ರಂಗಪ್ಪ ಮತ್ತು ಯುವರಾಜ ಕಾಲೇಜಿನ ಪ್ರಾಂಶುಪಾಲ ನಂಜೇಗೌಡ ಅವರು ಸಹಾಯಕ ಪ್ರಾಧ್ಯಾಪಕರ ನೇಮಕಾತಿ ವಿಚಾರದಲ್ಲಿ ಮಾಡಿರುವ ಹಗರಣದಲ್ಲಿ ಬಸವರಾಜು ಅವರನ್ನು ಸಿಕ್ಕಿಹಾಕಿಸಿರುವುದು ಯಾವ ನ್ಯಾಯ? ರಾಜಕೀಯ ಕುತಂತ್ರ ಮಾಡಿ ಬಸವರಾಜು ಅವರನ್ನು ಅಮಾನತು ಮಾಡಲಾಗಿದೆ. ಈ ಹಗರಣದ ಬಗ್ಗೆ ಉನ್ನತ ಮಟ್ಟದ ತನಿಖೆ ಮಾಡಬೇಕು. ತಪ್ಪು ಮಾಡಿದವರಿಗೆ ಸೂಕ್ತ ಶಿಕ್ಷೆಯಾಗಬೇಕು. ಸರ್ಕಾರ ರಂಗಪ್ಪನ ಪರವಾಗಿ ನಿಂತಿದೆ. ಆದ್ದರಿಂದ ರಂಗಪ್ಪನವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿ ತನಿಖೆ ಪ್ರಾರಂಭಿಸಬೇಕು. ಅಲ್ಲದೇ ಆತುರಾತುರವಾಗಿ ರಾಜಣ್ಣನವರನ್ನು ರಿಜಿಸ್ಟ್ರಾರ್ ಆಗಿ ನೇಮಕ ಮಾಡಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ ಎಂದು ಆರೋಪಿಸಿದರು.
ಈ ಬಗ್ಗೆ ಸರ್ಕಾರ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯಿಸದಿದ್ದಲ್ಲಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿ ಬಿವಿಎಸ್ ಪದಾಧಿಕಾರಿಗಳಾದ ಗಣೇಶ್ ಮೂರ್ತಿ, ನಾಗೇಶ್ ಕುಮಾರ್, ಹೇಮಂತ್, ನವೀನ್ ಮೌರ್ಯ ಹಾಜರಿದ್ದರು.