ಮೈಸೂರು

ಚಂದ್ರಗ್ರಹಣ ಹಿನ್ನೆಲೆ : ಮಂಕಾದ ರಾಖೀ ಹಬ್ಬ

ಮೈಸೂರು,ಆ.7:- ಶ್ರಾವಣ ಮಾಸವನ್ನು ಶಿವನ ತಿಂಗಳು ಎಂದು ಪರಿಗಣಿಸಲಾಗುತ್ತದೆ. ಧಾರ್ಮಿಕವಾಗಿಯೂ ಈ ತಿಂಗಳು ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ. ಶ್ರಾವಣ ಮಾಸ ಬರುತ್ತಲೇ ಎಲ್ಲ ಹಬ್ಬಗಳೂ ಆರಂಭವಾಗುತ್ತವೆ. ಈ ಶ್ರಾವಣದಲ್ಲಿ ಅಣ್ಣ-ತಂಗಿಯರ ಪವಿತ್ರ ಸಂಬಂಧದ ಹಬ್ಬವಾದ ರಕ್ಷಾ ಬಂಧನದ ಆಚರಣೆಯೂ ನಡೆಯಲಿದೆ. ಆದರೆ ಚಂದ್ರಗ್ರಹಣವಿರುವುದರಿಂದ ರಾಖೀ ಹಬ್ಬ ಮಂಕಾಗಿದೆ.

ರಾಖೀ  ಹಬ್ಬ ಪುರಾಣ ಕಾಲದಿಂದಲೂ ತನ್ನದೇ ಆದ ಮಹತ್ವವನ್ನು ಪಡೆದುಕೊಂಡಿದೆ. ಮಹಾಭಾರತ ಯುದ್ಧದ ಸಮಯದಲ್ಲಿ ದ್ರೌಪದಿ ಶ್ರೀಕೃಷ್ಣನ ರಕ್ಷೆಗಾಗಿ ರಕ್ಷಾಬಂಧನವನ್ನು ಕಟ್ಟಿದ್ದಳು. ಈ ಕಾರಣದಿಂದಾಗಿಯೇ ಶ್ರೀಕೃಷ್ಣ ತನ್ನ ಸಹೋದರಿಯ ರಕ್ಷಣೆಗೆ ನಿಂತಿದ್ದ ಎಂದು ಪೌರಾಣಿಕ ಕಥೆಗಳು ತಿಳಿಸುತ್ತವೆ. ಈ ಬಾರಿ ರಕ್ಷಾಬಂಧನದ ದಿನ ಚಂದ್ರಗ್ರಹಣ ಆಗಮಿಸಿದ್ದರಿಂದ ಈ ಸಮಯದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡಬಾರದು ಎಂಬ ಹಿನ್ನೆಲೆಯಲ್ಲಿ ರಾಖೀ ಖರೀದಿ ಅಷ್ಟೇನೂ ಭರ್ಜರಿಯಾಗಿ ನಡೆದಿಲ್ಲ. ದೇಶಾದ್ಯಂತ ರಾಖೀ ಹಬ್ಬ ಮಂಕಾಗಿದೆ. ಉತ್ತರ ಭಾರತದಲ್ಲಿ ಅತ್ಯಂತ ಸಡಗರ ಸಂಭ್ರಮದಿಂದ ಈ ಹಬ್ಬವನ್ನು ಆಚರಿಸಲಾಗುತ್ತಿತ್ತು. ಸಹೋದರನಿಗೆ ಆರತಿ ಬೆಳಗಿ, ತಿಲಕವಿಟ್ಟು, ಸಿಹಿ ತಿನ್ನಿಸಿ ರಾಖೀ ಕಟ್ಟಿ ಆತನ ಒಳಿತನ್ನು ಕೋರಿ ಶುಭ ಹಾರೈಸಿ, ಬಳಿಕ ಆತ ನೀಡಿದ ಉಡುಗೊರೆಯನ್ನು  ಸ್ವೀಕರಿಸಲಾಗುತ್ತದೆ, ಆದರೆ ಯಾರಲ್ಲಿಯೂ ರಕ್ಷಾಬಂಧನದ ಸಂಭ್ರಮ ಮನೆ ಮಾಡಿಲ್ಲ. ಹಲವು ಅಂಗಡಿಗಳಲ್ಲಿ ರಾಖೀಗಳು ಗ್ರಾಹಕರಿಗಾಗಿ ಕಾಯುತ್ತಿವೆ.  ಚಂದ್ರಗ್ರಹಣ ಮುಗಿದ ಮೇಲೆ ಬಹುಶಃ ರಾಖೀ ಖರೀದಿಗೆ ಮುಗಿ ಬೀಳಬಹುದು ಎನ್ನಲಾಗುತ್ತಿದೆ. (ಎಸ್.ಎಚ್)

Leave a Reply

comments

Related Articles

error: