ಕರ್ನಾಟಕಮೈಸೂರುಸಿಟಿ ವಿಶೇಷ

ಚಾಮಚೆಲುವೆ ಯಶಸ್ವಿ ನೂರನೇ ಪ್ರಯೋಗ; ನಿರ್ದೇಶಕ ಮಂಡ್ಯ ರಮೇಶ್ ಮನದಾಳದ ಮಾತು

ರಂಗಭೂಮಿ ಮತ್ತು ಚಲನಚಿತ್ರ Mandya Rameshನಟ, ನಟನಾರಂಗಶಾಲೆಯ ಸ್ಥಾಪಕ ಮಂಡ್ಯ ರಮೇಶ್ ನಿರ್ದೇಶನದ ‘ಚಾಮ ಚೆಲುವೆ’ ನಾಟಕದ 100ನೇ ಪ್ರಯೋಗ ಸೆಪ್ಟೆಂಬರ್ 4, ಭಾನುವಾರದಂದು ಸಂಜೆ 6.30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರದರ್ಶನಗೊಳ್ಳಲಿದೆ. ಕಳೆದ ಅನೇಕ ವರ್ಷಗಳಿಂದ ನಿರಂತರ ಕ್ರಿಯಾಶೀಲರಾಗಿರುವ ರಮೇಶ್, ರಂಗಭೂಮಿಯಲ್ಲಿ ತನ್ನದೇ ಛಾಪು ಮೂಡಿಸಿದವರು. ಈ ಸಂದರ್ಭ ‘ಸಿಟಿಟುಡೆ’ ಜೊತೆ ರಮೇಶ್ ಅವರು ಹಂಚಿಕೊಂಡ ಮನದಾಳದ ಮಾತುಗಳು ಇಲ್ಲಿವೆ.

* ಚಾಮಚೆಲುವೆ ಕುರಿತು ಆರಂಭದಲ್ಲಿ ವಿವಾದ ಹುಟ್ಟಿಕೊಂಡಿತ್ತು. ಈಗ ಅದು ನಿಮಗೆ ವರ ಅಂತ ಅನ್ನಿಸ್ತಿದೆಯಾ?

ಹಾಂ, ಕೃತಿಸ್ವಾಮ್ಯದ ಕುರಿತು ವಿವಾದ ಸೃಷ್ಟಿಯಾಗಿತ್ತು. ನಂತರ ಬಗೆಹರಿದಿದೆ. ಹೌದು, ಒಂದು ರೀತಿಯಲ್ಲಿ ವರ ಅಂತಲೇ ಅನ್ನಿಸ್ತಿದೆ. ಎಷ್ಟೋ ದೂರದೂರುಗಳಿಂದ ಗಾಡಿ ಮಾಡಿಕೊಂಡು ನಾಟಕ ನೋಡಲು ಜನ ಬರುತ್ತಾರೆ. ನಾಟಕ ನೋಡಿ ತುಂಬಾ ಸಂತೋಷಪಡುತ್ತಾರೆ. ಜನರ ಪ್ರತಿಕ್ರಿಯೆ ತುಂಬಾ ಚೆನ್ನಾಗಿದೆ. ನಮಗೆ ಅದಕ್ಕಿಂತ ಖುಷಿ ಬೇರೇನಿದೆ.

* ನಾಟಕದ ಮೊದಲ ಪ್ರಯೋಗ ಎಲ್ಲಿ ನಡೆಯಿತು?

ಮೊದಲ ಪ್ರಯೋಗ ಧ್ವನ್ಯಾಲೋಕದಲ್ಲಿ ವಿಶಿಷ್ಟ ರೀತಿಯಲ್ಲಿ ನಡೆಯಿತು. ಅದನ್ನು ಮರೆಯಲು ಸಾಧ್ಯವಿಲ್ಲ. ಅಲ್ಲಿ ಜನರು ಕುಳಿತುಕೊಳ್ಳುವ ಜಾಗದಲ್ಲಿ ರಂಗಸಜ್ಜಿಕೆ ಸಿದ್ಧಗೊಳಿಸಿ, ರಂಗಸಜ್ಜಿಕೆ ಇದ್ದ ಕಡೆ ಜನರಿಗೆ ಕುಳಿತುಕೊಳ್ಳಲು ಅನುವು ಮಾಡಿಕೊಡಲಾಗಿತ್ತು. 100 ಅಡಿ ಆಳದಲ್ಲಿ ಮರಗಳನ್ನಿರಿಸಲಾಗಿತ್ತು. ಅದರ ಮೇಲಿಂದ ಪಾತ್ರಧಾರಿಗಳು ನಡೆದು ಬರುತ್ತಿದ್ದರು.

* ನಾಟಕದಲ್ಲಿ ಮೊದಲಿನಿಂದಲೂ ಅಭಿನಯಿಸ್ತೀರೋ ಕಲಾವಿದರೇ ಇದ್ದಾರಾ ಅಥವಾ ಕಲಾವಿದರಲ್ಲಿ ಬದಲಾವಣೆ ಆಗಿದೆಯಾ?

ಬಹುತೇಕ ಅದೇ ಕಲಾವಿದರೇ ಇದ್ದಾರೆ. ನಟನ ರಾಮು ಅನ್ನೋರು ಮಹಿಷಾಸುರನ ಪಾತ್ರವನ್ನು ಆರಂಭದಿಂದಲೂ ಮಾಡಿಕೊಂಡು ಬಂದಿದ್ದಾರೆ. ರಾಘವೇಂದ್ರ ಅರಸ್ (ರಾಗ್ ಅರಸ್) ನಂಜುಂಡೇಶ್ವರನನ್ನು ಮಾಡಿದ್ದಾರೆ. ಕಾವ್ಯಾ ನಟನ ಕಲಾವಿದೆ ದುಂಡುದೇವಿರಿಯಾಗಿ ಕಾಣಿಸಿಕೊಂಡಿದ್ದಾಳೆ. ದಿಶಾ ರಮೇಶ್ ಮೊದಲು ಸಂಗೀತದಲ್ಲಿ ತೊಡಗಿಸಿಕೊಂಡು, ಕೊರವಂಜಿ ರೂಪದಲ್ಲಿ ಕಾಣಿಸಿಕೊಳ್ಳುತ್ತಿದ್ದಳು. ಇದೀಗ ಚಾಮುಂಡಿಯ ಪಾತ್ರವನ್ನು ಆಕೆಯೇ ನಿಭಾಯಿಸುತ್ತಾಳೆ.

* ಇದಕ್ಕೂ ಮುನ್ನ ನಿಮ್ಮ ಯಾವುದಾದರೂ ಬೇರೆ ನಾಟಕ ಶತದಿನ ಪೂರೈಸಿದೆಯಾ?

ರತ್ನಪಕ್ಷಿ-102, ಗಾಂಧಿ ಅಂಬೇಡ್ಕರ್-106, ಚೋರಚರಣದಾಸ-208,  ಅಲಿಬಾಬ -120, ಧಾಂಧೂಂ ಸುಂಟರಗಾಳಿ-108,  ನಾಯಿತಿಪ್ಪ-100, ಅಗ್ನಿ ಮತ್ತು ಮಳೆ-99 ಪ್ರದರ್ಶನಗಳನ್ನು ಪೂರೈಸಿದೆ.

* ಒಂದು ಕಡೆ ಚಲನಚಿತ್ರ, ಇನ್ನೊಂದು ಕಡೆ ಖಾಸಗಿ ವಾಹಿನಿ ‘ಮಜಾಟಾಕೀಸ್’, ನಟನ ರಂಗಶಾಲೆ ಇಷ್ಟೆಲ್ಲ ಒತ್ತಡದ ನಡುವೆ ನಾಟಕದ ಕಡೆ ಗಮನ ಹರಿಸಲು ಸಮಯ…?

ರಂಗಭೂಮಿಯಲ್ಲಿ ದುಡಿಯುವ ಹಲವಾರು ಜೀವಗಳಿವೆ. ಈ ನೆಲದ ಕುರಿತು ಬಲವಾದ ನಂಬಿಕೆ ಇರುವ ಯುವಪಡೆ ನಮ್ಮ ಜೊತೆ ಇದೆ. ಅವರಿಗೋಸ್ಕರ ನಾನು ಅಳಿಲುಸೇವೆಗಳನ್ನು ಸಲ್ಲಿಸಲೇಬೇಕು. ಎಲ್ಲ ಕಡೆಯೂ ಒಮ್ಮೊಮ್ಮೆ ಆರ್ಥಿಕ ಮುಗ್ಗಟ್ಟು ಎದುರಾಗುತ್ತದೆ. ಅವುಗಳನ್ನು ಪರಿಹರಿಸಲು ಇವೆಲ್ಲ ಅನಿವಾರ್ಯ.

* ಯಾವುದಾದರೂ ಹೊಸ ನಾಟಕ ನಿರ್ದೇಶಿಸಬೇಕು ಅನ್ನೋ ಆಲೋಚನೆ..?

ಸ್ವಲ್ಪ ಬ್ಯುಸಿ ಆಗಿದ್ದೇನೆ. ತಂಡದ ಜೊತೆ ಸಿಂಗಪುರ್‍ಗೆ ಹೋಗಿ ಬರುವ ಅವಕಾಶ ಸೃಷ್ಟಿಯಾಗುತ್ತಿದೆ. ಇವೆಲ್ಲದರ ನಡುವೆಯೂ ‘ಗಾಂಧಿ ಕನ್ನಡಕ’ ಓದುತ್ತಿದ್ದೇನೆ. ಅದೇ ನಿರ್ದೇಶನಗೊಂಡರೂ ಅಚ್ಚರಿಯಿಲ್ಲ.

* ಚಾಮಚಲುವೆ ನೂರನೇ ಪ್ರಯೋಗದ ಕುರಿತು ಹೆಮ್ಮೆ ಆಗ್ತಾ ಇದ್ಯಾ?

ತುಂಬಾ ಖುಷಿ ಆಗ್ತಾ ಇದೆ. ಅದಕ್ಕೆ ಕಾರಣಕರ್ತರು ಪ್ರೇಕ್ಷಕರು, ನಮ್ಮ ಕಲಾವಿದರು. ನಾಟಕಕ್ಕೆ ಪಿಚ್ಚಳ್ಳಿ ಶ್ರೀನಿವಾಸ್, ವರಪ್ರಸಾದ್ ಸಂಗೀತ ನೀಡಿದ್ದಾರೆ. ಕಂಸಾಳೆ, ವೀರಗಾಸೆ, ಯಕ್ಷಗಾನದ ಹೆಜ್ಜೆಗಳು ಸೇರಿದಂತೆ ಜಾನಪದ ಶೈಲಿಯಲ್ಲಿ ಗಮನ ಸೆಳೆಯುತ್ತಿದೆ. ಜನಸಾಮಾನ್ಯರಿಗೆ ಕಷ್ಟ, ಬೇರೆಯವರಿಗೆ ತಮಾಷೆ — ಇವು ನಾಟಕದ ತಿರುಳು. ನೊಂದ ಮನಸುಗಳನು ಸಾಂತ್ವನಪಡಿಸುವ ಕೆಲಸ ನಿಜಕ್ಕೂ ಯಶಸ್ವಿ ಅನಿಸ್ತಿದೆ. ಮೈಸೂರು ಪ್ರಾಂತ್ಯದ ಆರಾಧ್ಯ ದೇವತೆ ಚಾಮುಂಡೇಶ್ವರಿ. ಸುತ್ತಮುತ್ತಲಿರುವ ಜಾನಪದ ಕಾವ್ಯವನ್ನು ಆಧರಿಸಿದ ಕಥೆ, ಸಂಗೀತ, ಹಾಸ್ಯ, ಪ್ರಸ್ತುತ ವಿದ್ಯಮಾನಗಳನ್ನು ನಾವು ನಾಟಕಗಳಲ್ಲಿ ಅಳವಡಿಸಿಕೊಳ್ಳುತ್ತಿರುವುದರಿಂದ ಜನರಿಗೆ ಇನ್ನಷ್ಟು ಹತ್ತಿರವಾಗುತ್ತಿದ್ದೇವೆ.

ನೂರರ ಸಂಭ್ರಮದಲ್ಲಿರುವ ನಾಟಕವು ಸಹಸ್ರ ದಿನಗಳನ್ನು ಕಾಣುವಂತಾಗಲಿ. ಪ್ರತಿ ಹೆಜ್ಜೆಯಲ್ಲಿಯೂ ತನ್ನೊಂದಿಗೆ ಹೆಜ್ಜೆಯಿಟ್ಟು ಸಹಕರಿಸುವ ಪ್ರತಿಯೊಬ್ಬರನ್ನೂ ನೆನಪಿಸಿಕೊಳ್ಳುವ ರಮೇಶ್ ಗುಣ ಶ್ಲಾಘನೀಯ. ಸದಾ ನಗುತ್ತ-ನಗಿಸುತ್ತ ಇರುವ ರಮೇಶ್ ಅವರ ಕಲಾರಾಧನೆ ಹೀಗೇ ನಿರಂತರವಾಗಿರಲಿ, ಕಲಾರಸಿಕರಿಗೆ ಇನ್ನಷ್ಟು ರಸದೌತಣವನ್ನು ನೀಡಲಿ.

– ಸುಹಾಸಿನಿ ಹೆಗಡೆ

Leave a Reply

comments

Related Articles

error: