ಮೈಸೂರು

ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಫಾಲ್ಕನ್ ಟೈರ್ಸ್ ಕಾರ್ಮಿಕ

ಕಾರ್ಖಾನೆ ಆರಂಭವಾಗದ ಕಾರಣ ಜೀವನ ನಡೆಸುವುದು ಕಷ್ಟವಾಗಿ ಮೈಸೂರಿನ ಫಾಲ್ಕನ್ ಟೈರ್ಸ್ ಕಾರ್ಮಿಕನೋರ್ವ ಕಾರ್ಖಾನೆ ಆವರಣದಲ್ಲೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವುದು ವರದಿಯಾಗಿದೆ.

ಮೈಸೂರಿನ ಜೆ.ಪಿ. ನಗರ ನಿವಾಸಿ ಕಿರಣ್ ರಾಜೇ ಅರಸ್ (35) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ. ತೀವ್ರವಾಗಿ ಅಸ್ವಸ್ಥರಾಗಿರುವ ಅವರನ್ನು ಗೋಕುಲಂನಲ್ಲಿರುವ ಆದಿತ್ಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಕಾರ್ಖಾನೆ ಮುಚ್ಚಿದ್ದಾಗಿನಿಂದ ಕೆಲ ಕಾರ್ಮಿಕರು ಇತರ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರೆ, ಇನ್ನೂ ಕೆಲವರು ಬಾಕಿ ವೇತನ ನೀಡುವಂತೆ ಪ್ರತಿದಿನ ಕಾರ್ಖಾನೆಗೆ ತೆರಳಿ ಒತ್ತಾಯಿಸುತ್ತಿದ್ದರು.

ಕಿರಣ್ ರಾಜೇ ಅರಸ್ ಗುರುವಾರ ಬೆಳಗ್ಗೆ 8ಕ್ಕೆ ಸಹದ್ಯೋಗಿ ರಾಮಚಂದ್ರ ರಾಜೇ ಅರಸ್‍ ಅವರೊಂದಿಗೆ ಫಾಲ್ಕನ್ ಫ್ಯಾಕ್ಟರಿ ಬಳಿ ತೆರಳಿದ್ದರು. ರಾಮಚಂದ್ರ ಅವರು ಕಾರ್ಖಾನೆಯೊಳಗೆ ಹೋದಾಗ ಕಿರಣ್ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸ್ಥಳದಲ್ಲಿದ್ದವರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಕಿರಣ್ ಅವರು ಒಂದು ವರ್ಷದ ಪುತ್ರಿ ದರ್ಶಿನಿ ಹಾಗೂ ಪತ್ನಿ ಶ್ರೇಯಾ ಅವರೊಂದಿಗೆ ಜೆಪಿ ನಗರದಲ್ಲಿ ವಾಸಿಸುತ್ತಿದ್ದಾರೆ. ಫಾಲ್ಕನ್ ಕಾರ್ಖಾನೆ ಮುಚ್ಚಿದ ಪರಿಣಾಮ ಜೀವನ ನಡೆಸಲು ಕಷ್ಟವಾದ್ದರಿಂದ ಆತ್ಮಹತ್ಯೆ ಯತ್ನ ನಡೆಸಿದ್ದಾರೆ ಎನ್ನಲಾಗಿದೆ. ಮೇಟಗಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

comments

Related Articles

error: