ಮೈಸೂರು

ಜಿಲ್ಲಾ ಮಟ್ಟದ ಕೇಬಲ್ ಟೆಲಿವಿಷನ್ ನೆಟ್‍ವರ್ಕ್ ನಿರ್ವಹಣಾ ಸಮಿತಿ ಪುನರ್ ರಚನೆ : ಏನು ಎತ್ತ?

ಮೈಸೂರು, ಆ.8 : ಕೇಬಲ್ ಟೆಲಿವಿಷನ್ ನೆಟ್‍ವರ್ಕ್ ಅಧಿನಿಯಮ 1995 ಹಾಗೂ ಅದರ ಮೇರೆಗೆ ಮಾಡಲಾದ ನಿಯಮಗಳ ಜಾರಿಯನ್ನು ಮೇಲ್ವಿಚಾರಣೆ ಮಾಡಲು ಜಿಲ್ಲೆಯಲ್ಲಿ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿಯನ್ನು ಜಿಲ್ಲಾಧಿಕಾರಿ ರಂದೀಪ್ ಡಿ. ಅವರು ಪುನಾರಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಸಮಿತಿ ಪುನರ್‍ರಚಿಸುವ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿಗೆ ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುತ್ತಾರೆ.  ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಮೈಸೂರು ನಗರ ಪೊಲೀಸ್ ಆಯುಕ್ತರು, ಜಿಲ್ಲೆಯಲ್ಲಿನ ಮಹಿಳಾ ಕಾಲೇಜಿನ ಒಬ್ಬರು ಪ್ರಾಂಶುಪಾಲರು, ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸುರುತ್ತಿರುವ ಪ್ರಮುಖ ಸರ್ಕಾರೇತರ ಸಂಸ್ಥೆಯ ಸದಸ್ಯರು, ಮಹಿಳಾ ಕಲ್ಯಾಣ ಕ್ಷೇತ್ರೆದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಮುಖ ಸರ್ಕಾರೇತರ ಸಂಸ್ಥೆಯ ಸದಸ್ಯರು, ಶಿಕ್ಷಣ ತಜ್ಞರು, ಮನಃಶಾಸ್ತ್ರ ತಜ್ಞರು, ಸಮಾಜ ಶಾಸ್ತ್ರ ತಜ್ಞರು ಸದಸ್ಯರಾಗಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪನಿರ್ದೇಶಕರು ಸದಸ್ಯ ಕಾರ್ಯದರ್ಶಿಗಳಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಜಿಲ್ಲಾಧಿಕಾರಿ ರಂದೀಪ್ ಅವರು ಸಭೆಯಲ್ಲಿ ಚರ್ಚಿಸಿ ಸಮಿತಿಗೆ ಗ್ರಾಮೀಣ ಶಿಕ್ಷಣ ಮತ್ತು ಆರೋಗ್ಯ ಸಂಸ್ಥೆಯ ನಿರ್ದೇಶಕಿ ಕೆ. ಸರಸ್ವತಿ, ಓಡಿಪಿ ಸಂಸ್ಥೆಯ ಸುನೀತ,  ಮಹಾರಾಣಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಾಗರಾಜು ಎ, ಮಹಾರಾಣಿ ಮಹಿಳಾ ಪ್ರಥಮ ದರ್ಜೆ ಕಲಾ ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ಎಸ್.ಜಿ. ರಾಘವೇಂದ್ರ, ಮೈಸೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆಯ ನಿವೃತ್ತ ಸಂಯೋಜನಾಧಿಕಾರಿ ಡಾ. ಕೆ.ಕಾಳಚೆನ್ನೇಗೌಡ ಅವರನ್ನು ಸದಸ್ಯರಾಗಿ ಆಯ್ಕೆ ಮಾಡಿದರು. ಮನಃಶಾಸ್ತ್ರ ತಜ್ಞರನ್ನು ಆಯ್ಕೆ ಮಾಡುವ ಸಂಬಂಧ ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣಾಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಕೇಬಲ್ ಟಿವಿ ನೆಟ್‍ವರ್ಕ್ ನಿಯಮಗಳು, 1994 ರ ಉಪಬಂಧಗಳನ್ನು ಕೇಬಲ್ ಟಿವಿ ನೆಟ್‍ವರ್ಕ್ ಮಾಲೀಕರು ಉಲ್ಲಂಘಿಸಿದರೆ ಈ ಬಗ್ಗೆ ಸಾರ್ವಜನಿಕರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಧನ್ವಂತ್ರಿ ರಸ್ತೆ, ಮೈಸೂರು ಇಲ್ಲಿ ಸ್ಥಾಪಿಸಲಾಗಿರುವ  ದೂರು ಕೋಶದಲ್ಲಿ  ದೂರವಾಣಿ ಸಂಖ್ಯೆ 0821-2423251 ಗೆ ದೂರು ಸಲ್ಲಿಸಬಹುದು. ದೂರು ಕೋಶಕ್ಕೆ ಒಬ್ಬರು ಸಿಬ್ಬಂದಿಯನ್ನು ನಿಯೋಜಿಸುವಂತೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕರಿಗೆ ತಿಳಿಸಿದರು.

ಕೇಬಲ್ ಟಿ.ವಿ. ನೆಟ್‍ವರ್ಕ್‍ನಲ್ಲಿ ಪ್ರಸಾರವಾಗುವ ವಿಷಯ ಯಾವುದೇ ಸಮುದಾಯಕ್ಕೆ ಭಂಗ ಹಾಗೂ ಪ್ರಚೋದನೆ ಉಂಟು ಮಾಡುವ ರೀತಿ ಇದ್ದಲ್ಲಿ ಮತ್ತು ಧರ್ಮ, ಜನಾಂಗ, ಭಾಷೆ, ಜಾತಿ, ಸಮುದಾಯದ ಆಧಾರದ ಮೇಲೆ ಅಥವಾ ಯಾವುದೇ ಆಧಾರದ ಮೇಲೆ ವೈಷಮ್ಯದ ಅಥವಾ ವೈರದ ಅಥವಾ ದ್ವೇಷದ ಭಾವನೆಗಳನ್ನು ಬೆಳೆಸುವ ಸಂಭವವಿರುವ ಅಥವಾ ಸಾರ್ವಜನಿಕ ಶಾಂತಿಗೆ ಭಂಗವುಂಟುಮಾಡುವ ಸಂಭವವಿದ್ದರೆ ಮತ್ತು ನಕಲಿ ಕೇಬಲ್ ಟಿವಿ ನೆಟ್‍ವರ್ಕ್ ಪ್ರಸಾರ ಕಂಡುಬಂದಲ್ಲಿ ಸಾರ್ವಜನಿಕರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿರುವ ದೂರು ಕೋಶದಲ್ಲಿ ದೂರು ಸಲ್ಲಿಸಬಹುದು ಎಂದರು.

ಪ್ರತಿ 2 ತಿಂಗಳಿಗೊಮ್ಮೆ ಸಭೆ ನಡೆಸಿ ಕೇಬಲ್ ಟಿವಿ ಯಾವ ಕಾರ್ಯಕ್ರಮ/ಜಾಹಿರಾತಿನ ವಿರುದ್ಧ ದೂರು ದಾಖಲಾಗಿರುವುದು ಅದರ ವಿ.ಸಿ.ಡಿ.ಯನ್ನು ಕೇಬಲ್ ಟಿ.ವಿ ನೆಟ್‍ವರ್ಕ್ ಕಚೇರಿಯಿಂದ ಪಡೆದು ಪರಿಶೀಲಿಸಿ ಉಲ್ಲಂಘನೆ ದೃಢಪಟ್ಟರೆ ಕೇಬಲ್ ಟಿ.ವಿ ನೆಟ್‍ವರ್ಕ್ ಅವರಿಗೆ ನೊಟೀಸ್ ಜಾರಿ ಮಾಡಬಹುದು ಎಂದು ತಿಳಿಸಿದರು.

ಕೇಬಲ್ ನೆಟ್‍ವರ್ಕ್ ಆಪರೇಟರ್‍ಗಳು ಫ್ರೀ ಟು ಏರ್ ಚಾನಲ್‍ಗಳು ಹಾಗೂ ಪ್ರಸರಣಕ್ಕಾಗಿ ನಿಯಮಿಸಲಾದ ಚಾನೆಲ್‍ಗಳನ್ನು ನಿರ್ವಹಿಸಿಲ್ಲವೆಂದು ಅಥವಾ ಸೂಕ್ತವಾಗಿ ಓದಲು ಅಥವಾ ಕೇಳಲು ಸಂಕೇತವು ತುಂಬಾ ದುರ್ಬಲವಾಗಿರುವಂಥ ರೀತಿಯಲ್ಲಿ ಅವುಗಳನ್ನು ಪ್ರಸಾರ ಮಾಡಲಾಗಿದೆಯೆಂದು ಕಂಡುಬಂದರೆ ಸಮಿತಿಯು ಅಧಿಕೃತ ಅಧಿಕಾರಿಯ ಮೂಲಕ ಸರಿಯಾಗಿ ಪ್ರಸಾರ ಮಾಡುವಂತೆ ಕೇಬಲ್ ಆಪರೇಟರ್‍ಗೆ ನಿರ್ದೇಶಿಸಬಹುದು ಅಥವಾ ಅಗತ್ಯವೆಂದು ಪರಿಗಣಿಸಬಹುದಾದ ಇತರೆ ಕ್ರಮಗಳನ್ನು ಕೈಗೊಳ್ಳಬಹುದು ಎಂದು ತಿಳಿಸಿದರು.

ಸಭೆಯಲ್ಲಿ ಮೈಸೂರು ನಗರ ಉಪ ಪೊಲೀಸ್ ಆಯುಕ್ತ ವಿಕ್ರಂ ಆಮ್ಟೆ, ಮಹಾರಾಣಿ ಮಹಿಳಾ ಪ್ರಥಮ ದರ್ಜೆ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ನಾಗರಾಜು ಎ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯಕ್ರಮ ಅಧಿಕಾರಿ ಟಿ.ಶೇಷಾದ್ರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ರಾಜು ಆರ್. ಉಪಸ್ಥಿತರಿದ್ದರು.

-ಎನ್.ಬಿ.

Leave a Reply

comments

Related Articles

error: