ಮೈಸೂರು

ಕಾದಂಬರಿ ಕೈಯ್ಯಲ್ಲಿ ಹಿಡಿಯುವ ರಂಗಭೂಮಿ: ಡಾ. ಕೆ. ಅನಂತರಾಮು ಬಣ್ಣನೆ

ಕಾದಂಬರಿಯನ್ನು ಕೈಯ್ಯಲ್ಲಿ ಹಿಡಿಯುವ ರಂಗಭೂಮಿ ಎಂದು ಕರೆಯಲಾಗುತ್ತದೆ ಎಂದು ಹಿರಿಯ ವಿದ್ವಾಂಸ ಡಾ. ಕೆ. ಅನಂತರಾಮು ಬಣ್ಣಿಸಿದರು.

ಮೈಸೂರಿನ ಕೃಷ್ಣಮೂರ್ತಿಪುರಂನ ನಮನ ಕಲಾಮಂಟಪದಲ್ಲಿ ವೆಂಕಟಗಿರಿ ಪ್ರಕಾಶನದ ವತಿಯಿಂದ ಏರ್ಪಡಿಸಲಾದ ಕೆಂಪಾಚಾರ್ ಕುಪ್ಯ ಅವರ ‘ಅರಿವು ಮೈತಳೆದಾಗ’ ಮರುಮುದ್ರಿತ ಕಾದಂಬರಿ ಕೃತಿ ಲೋಕಾರ್ಪಣೆ ಸಮಾರಂಭದಲ್ಲಿ ಪಾಲ್ಗೊಂಡು ಡಾ. ಕೆ. ಅನಂತರಾಮು ಮಾತನಾಡಿದರು.

ಕಾದಂಬರಿ ಸಾಹಿತ್ಯ ಪ್ರಕಾರವನ್ನು ಕರತಲ ರಂಗಭೂಮಿ ಎನ್ನಬಹುದಾಗಿದ್ದು, ಪಾತ್ರ, ಸಂಭಾಷಣೆ ಸೇರಿದಂತೆ ರಂಗಭೂಮಿಯ ಎಲ್ಲ ಅಂಶಗಳನ್ನು ಒಳಗೊಂಡಿರುತ್ತದೆ. ಕಾದಂಬರಿಯು ಸಾಮಾಜಿಕ, ಪೌರಾಣಿಕ, ಪತ್ತೇದಾರಿ ಸೇರಿದಂತೆ ಹಲವು ಪ್ರಭೇದಗಳನ್ನು ಹೊಂದಿದ್ದು, ಜನಪ್ರಿಯ ಪ್ರಾಕಾರವಾಗಿ ವಿಸ್ತಾರಗೊಂಡಿದೆ. ಕೆಂಪಾಚಾರ್ ಕುಪ್ಯ ಅವರ ‘ಅರಿವು ಮೈತಳೆದಾಗ’ ಮಧ್ಯಮ ಗಾತ್ರದ ಕಾದಂಬರಿಯಾಗಿದ್ದು, ಮೂರು ದಶಕಗಳ ಬಳಿಕ ಮರು ಮುದ್ರಣಗೊಂಡಿದೆ. ಪ್ರಗತಿಪರ ಚಿಂತನೆಗಳ ಉದ್ದೀಪನದಿಂದ ಇಂತಹ ಉತ್ತಮ ಕಾದಂಬರಿ ಸೃಷ್ಟಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಎಚ್.ಆರ್. ಚಂದ್ರವದನರಾವ್ ಅವರ ದಿನಕ್ಕೊಂದು ನುಡಿಮುತ್ತು ಕೃತಿಯನ್ನು ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡಮಿ ಟ್ರಸ್ಟ್ ನ  ಅಧ್ಯಕ್ಷ ಎಸ್. ರಾಮಪ್ರಸಾದ್ ಲೋಕಾರ್ಪಣೆಗೊಳಿಸಿದರು.

ವೇದಿಕೆಯಲ್ಲಿ ವೆಂಕಟಗಿರಿ ಪ್ರಕಾಶನದ ಪ್ರೊ. ನೀ. ಗಿರಿಗೌಡ, ಸಂಸ್ಕೃತಿ ಪೋಷಕ ಕೆ. ರಘುರಾಂ, ಕದಂಬ ರಂಗ ವೇದಿಕೆಯ ಅಧ್ಯಕ್ಷ ವಿದ್ಯಾಸಾಗರ ಕದಂಬ, ಸಾಹಿತಿಗಳಾದ ಕೆಂಪಾಚಾರ್ ಕುಪ್ಯ, ಎಚ್.ಆರ್. ರಾಮಚಂದ್ರ ವದನರಾವ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: