ಪ್ರಮುಖ ಸುದ್ದಿ

೨೨ರಂದು ಜಿಲ್ಲಾಡಳಿತದಿಂದ ದೇವರಾಜ ಅರಸು ಅದ್ಧೂರಿ ಜನ್ಮದಿನಾಚರಣೆ

ಪ್ರಮುಖ ಸುದ್ದಿ, ಮಂಡ್ಯ, ಆ.೮: ಹಿಂದುಳಿದ ವರ್ಗಗಳ ಹರಿಕಾರ, ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಜಿಲ್ಲಾಡಳಿತ ಹಾಗೂ ವಿವಿಧ ಸಂಘಟನೆ, ಸಮುದಾಯಗಳ ಸಹಕಾರದೊಂದಿಗೆ ಆ.೨೨ರಂದು ನಗರದಲ್ಲಿ ಅದ್ದೂರಿಯಾಗಿ ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಆರ್.ಪೂರ್ಣಿಮಾ ಅಧ್ಯಕ್ಷತೆಯಲ್ಲಿ ಅರಸು ಜನ್ಮ ದಿನಾಚರಣೆ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ಅರ್ಥಪೂರ್ಣವಾಗಿ ಕಾರ್ಯಕ್ರಮ ಏರ್ಪಡಿಸಲು ನಿರ್ಧಾರ ಕೈಗೊಳ್ಳಲಾಯಿತು.
ಸಭೆಯ ಆರಂಭದಲ್ಲಿ ಮುಖಂಡರು ಮಾತನಾಡಿ, ಡಿ.ದೇವರಾಜ ಅರಸು ಭಾವಚಿತ್ರ ಮೆರವಣಿಗೆ ಏರ್ಪಡಿಸಬೇಕು. ಎಸ್‌ಎಸ್‌ಎಲ್‌ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ಜಿಲ್ಲೆಯ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳನ್ನು ಗುರುತಿಸಿ ಗೌರವಿಸಬೇಕು. ವಿದ್ಯಾರ್ಥಿಗಳಿಗೆ ಪ್ರಬಂಧ, ಭಾಷಣ, ರಸಪ್ರಶ್ನೆ ಹಾಗೂ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಸೂಕ್ತ ಬಹುಮಾನ ನೀಡಲು ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕೆಂದು ಸಲಹೆಗಳನ್ನು ನೀಡಿದರು.
ಅಪರ ಜಿಲ್ಲಾಧಿಕಾರಿ ಪೂರ್ಣಿಮಾ ಮಾತನಾಡಿ, ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಎಲ್ಲರ ಸಹಕಾರ ಅಗತ್ಯ. ಅರಸು ಬಗ್ಗೆ ಆಳವಾದ ಜ್ಞಾನವಿರುವ ವಿಷಯ ತಜ್ಞರಿಂದ ಉಪನ್ಯಾಸ ಕಾರ್ಯಕಮ ಆಯೋಜಿಸುವುದು. ಉಪನ್ಯಾಸಕರನ್ನು ಆಯ್ಕೆ ಮಾಡುವ ಸಂಬಂಧ ನೀಡುವ ಸಲಹೆಗಳನ್ನು ಪರಿಗಣಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬಿ.ಆರ್.ರೂಪಾ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿದೇಶಕ ಎನ್.ಎಸ್.ಮಹೇಶ್‌ಹಾಗೂ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಸಭೆಯಲ್ಲಿ ಹಾಜರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: