ಮೈಸೂರು

ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಚುನಾವಣೆಗೆ ಯಾವುದೇ ಅಡ್ಡಿ ಇಲ್ಲ; ನಿಗದಿಯಂತೆ ಆ.13ಕ್ಕೆ ಚುನಾವಣೆ: ಕೆ.ದೀಪಕ್

ಮೈಸೂರು,ಆ.9-ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಚುನಾವಣೆ ನಡೆಸಲು ನ್ಯಾಯಾಲಯದಿಂದ ಯಾವುದೇ ಅಡ್ಡಿ ಇಲ್ಲ ಎಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ದೀಪಕ್ ತಿಳಿಸಿದ್ದಾರೆ.

ಸಂಘದ ಕಾರ್ಯಕಾರಿಣಿ ಮಂಡಳಿ ಚುನಾವಣೆಗೆ ತಡೆಯಾಜ್ಞೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮೈಸೂರಿನ 5ನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಆ.18ಕ್ಕೆ ಮುಂದೂಡಿದೆ. ಈ ಮೂಲಕ ಆ.13 ರಂದು ನಿಗದಿಯಾಗಿರುವ ಚುನಾವಣೆಯ ಹಾದಿ ಸುಗಮವಾಗಿದೆ. ಸಂಘದ ಕಾರ್ಯಕಾರಿಣಿ ಮಂಡಳಿ ಚುನಾವಣೆಗೆ ತಡೆಯಾಜ್ಞೆ ಕೋರಿ ಪತ್ರಕರ್ತ ಟಿ.ಗುರುರಾಜ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಗಳು, ಸಂಘದ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳಿಗೆ ನೋಟಿಸ್ ಜಾರಿ ಮಾಡಿ ಆ.8 ರಂದು ಈ ಸಂಬಂಧ ವಿವರಣೆ ನೀಡುವಂತೆ ಕೋರ್ಟ್ ನಿರ್ದೇಶಿಸಿತ್ತು.

ಮಂಗಳವಾರ ಸಂಘದ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿಗಳು ನ್ಯಾಯಾಲಯಕ್ಕೆ ತಮ್ಮ ವಕೀಲರಾದ ಪಾಲಾಕ್ಷ ಅವರ ಮೂಲಕ ಹಾಜರಾಗಿ ವಿವರಣೆ ನೀಡಿದ್ದು, ವಾದವನ್ನು ಆಲಿಸಿದ ನ್ಯಾಯಾಧೀಶರು ದಾವೆಯನ್ನು ಆ.18ಕ್ಕೆ ತಕರಾರು ಸಲ್ಲಿಸಲು ಮುಂದೂಡಿದರು. ಇದರಿಂದ ಚುನಾವಣೆ ನಡೆಸಲು ನ್ಯಾಯಾಲಯದಿಂದ ಯಾವುದೇ ಅಡ್ಡಿ ಇಲ್ಲದಂತಾಗಿದೆ.

ಸಂಘದ ಕಾರ್ಯಕಾರಿ ಮಂಡಳಿಗೆ ಚುನಾವಣೆ ನಡೆಯುವ ಕುರಿತು ಕಳೆದ ಕೆಲ ದಿನಗಳಿಂದ ಉಂಟಾಗಿದ್ದ ಗೊಂದಲ ಹಾಗೂ ಕೆಲ ಕಿಡಿಗೇಡಿಗಳು ಸೃಷ್ಟಿಸುತ್ತಿದ್ದ ವದಂತಿಗಳಿಗೆ ಈ ಮೂಲಕ ತೆರೆಬಿದ್ದಂತಾಗಿದ್ದು, ಅಭ್ಯರ್ಥಿಗಳು ಯಾವುದೇ ಆತಂಕವಿಲ್ಲದೆ ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳಬಹುದಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ದೀಪಕ್ ತಿಳಿಸಿದ್ದಾರೆ. (ವರದಿ-ಎಸ್.ಎನ್, ಎಂ.ಎನ್)

Leave a Reply

comments

Related Articles

error: