ಮೈಸೂರು

ಯೋಧರು-ಪೊಲೀಸರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ: ಜಿಲ್ಲಾಧಿಕಾರಿ ರಂದೀಪ್

ದೇಶದ ಗಡಿ ಕಾಯುವ ಯೋಧರು ಹಾಗೂ ರಾಜ್ಯದ ಜನತೆಯನ್ನು ಕಾಯುವ ಪೊಲೀಸರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ ಎಂದು ಜಿಲ್ಲಾಧಿಕಾರಿ ಡಿ.ರಂದೀಪ್ ಹೇಳಿದರು.

ಮೈಸೂರು ಜಿಲ್ಲಾ ಪೊಲೀಸ್ ಕಚೇರಿ ಪಕ್ಕದಲ್ಲಿರುವ ಪೊಲೀಸ್ ಹುತಾತ್ಮರ ಸ್ಮಾರಕ ಉದ್ಯಾನವನದಲ್ಲಿ ಮೈಸೂರು ನಗರ ಮತ್ತು ಜಿಲ್ಲಾ ಪೊಲೀಸ್, ಕರ್ನಾಟಕ ಪೊಲೀಸ್ ಅಕಾಡಮಿ ಮತ್ತು ಕೆ.ಎಸ್.ಆರ್.ಪಿ ಘಟಕಗಳಿಂದ ನಡೆದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಪಾಲ್ಗೊಂಡ ಜಿಲ್ಲಾಧಿಕಾರಿ ಡಿ.ರಂದೀಪ್ ಅವರು, ಪೊಲೀಸ್ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು 1959ರ ಅಕ್ಟೋಬರ್ 21ರಿಂದಲೇ ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಆಚರಿಸುತ್ತಾ ಬಂದಿದ್ದೇವೆ ಎಂದರು.

ಅಂದು ಭಾರತ ಮತ್ತು ಚೀನಾದ ಗಡಿ ಪ್ರದೇಶದಲ್ಲಿರುವ ಲಡಾಕ್ ಪ್ರದೇಶದ ಅಕ್ಸಾಯ್ ಎಂಬಲ್ಲಿ ಸಿ.ಆರ್.ಪಿ.ಎಫ್ ಪಡೆಯ ಡಿ.ಎಸ್.ಪಿ ಕರಣ್ ಸಿಂಗ್ ಮತ್ತು ಅವರ ಸಿಬ್ಬಂದಿಗಳು ಗಸ್ತು ಕಾರ್ಯದಲ್ಲಿರುವಾಗ ಚೈನಾ ಪಡೆ ಇವರ ಮೇಲೆ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ದಾಳಿ ನಡೆಸಿತು. ಆದರೆ ಇದಾವುದಕ್ಕೂ ಜಗ್ಗದ ಸೈನಿಕರು, ತಮ್ಮ ಕಡೆ ಉಸಿರಿನ ತನಕ ಹೋರಾಟ ನಡೆಸಿ ವೀರ ಮರಣವನ್ನಪ್ಪಿದರು. ಹಲವರು ಗಾಯಗೊಂಡರು. ಈ ದಿನದ ನೆನಪಿಗಾಗಿ ಸ್ಮಾರಕ ನಿರ್ಮಿಸಲಾಯಿತು. ಹುತಾತ್ಮ ದಿನವನ್ನೂ ಆಚರಿಸಲಾಯಿತು. ಅದರಂತೆ ಎಲ್ಲೆಡೆಯೂ ಅಕ್ಟೋಬರ್ 21ರಂದು ಪೊಲೀಸ್ ಹುತಾತ್ಮ ದಿನವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು.

ಯೋಧರು ದೇಶದ ಗಡಿ ಕಾಯುತ್ತಿದ್ದರೆ, ಪೊಲೀಸರು ರಾಜ್ಯದಲ್ಲಿ ಸಾರ್ವಜನಿಕರನ್ನು ಕಾಯುತ್ತಾರೆ. ತಮ್ಮ ಖಾಸಗಿ ಜೀವನಕ್ಕಿಂತಲೂ ಹೆಚ್ಚಾಗಿ ಸಾರ್ವಜನಿಕರ ರಕ್ಷಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಡುತ್ತಾರೆ. ತಮ್ಮ ಜೀವನವನ್ನು ಸಾರ್ವಜನಿಕ ಸೇವೆಗಳಿಗೆ ಶ್ರೀಗಂಧದಂತೆ ತೇಯುತ್ತಾರೆ. ಅಂತಹವರು ಮರಣವನ್ನಪ್ಪಿದರೆ ಅವರನ್ನು ಸ್ಮರಿಸುವ ಕೆಲಸ ನಮ್ಮಿಂದಾಗಬೇಕು. ಅದಕ್ಕಾಗಿ ಮರಣವನ್ನಪ್ಪಿದ ನಮ್ಮ ಪೊಲೀಸರನ್ನು ಸ್ಮರಿಸಲೋಸುಗ ಅಕ್ಟೋಬರ್ 21 ರಂದು ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಆಚರಿಸಿ, ಅವರಿಗೆ ಗೌರವ ಅರ್ಪಿಸಿ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಕರ್ನಾಟಕ ಪೊಲೀಸ್ ಅಕಾಡಮಿಯ ನಿರ್ದೇಶಕ ವಿಫುಲ್ ಕುಮಾರ್, ದಕ್ಷಿಣ ವಲಯ ಪೊಲೀಸ್ ಮಹಾನಿರ್ದೇಶಕ ಬಿ.ಕೆ. ಸಿಂಗ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ. ಡಿ. ಚನ್ನಣ್ಣನವರ್, ಮತ್ತಿತರರು ಉಪಸ್ಥಿತರಿದ್ದರು.

ಪೊಲೀಸ್ ಸಿಬ್ಬಂದಿ ಮೂರು ಸುತ್ತು ಕುಶಾಲು ತೋಪು ಸಿಡಿಸಿ ಹುತಾತ್ಮರಿಗೆ ಗೌರವ ಸೂಚಿಸಿದರು. ಈ ಸಂದರ್ಭ ನಾಡಗೀತೆ ಹಾಗೂ ರಾಷ್ಟ್ರಗೀತೆಗಳು ಮೊಳಗಿದವು. ಎಸ್ಪಿ ಸರ್ಕಲ್ ಬಳಿ ಇರುವ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಮರಣವನ್ನಪ್ಪಿದ ಹರಿಕೃಷ್ಣ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಲಾಯಿತು.

Leave a Reply

comments

Related Articles

error: