ದೇಶಪ್ರಮುಖ ಸುದ್ದಿ

ಕ್ರಿಕೆಟ್ ರೋಚಕತೆ ಮೀರಿಸಿದ ರಾಜ್ಯಸಭಾ ಚುನಾವಣೆ : ಅಹಮದ್ ಪಟೇಲ್‍ಗೆ ಕೊನೆಗೂ ದಕ್ಕಿದ ಗೆಲುವು

ನವದೆಹಲಿ, ಆ.9 : ಗುಜರಾತ್ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ರಾಜಕೀಯ ಸಂಘರ್ಷವೆರ್ಪಟ್ಟು ಕ್ರಿಕೆಟ್‍ ರೋಚಕತೆಯನ್ನೂ ಮೀರಿಸುವಂತೆ ಇಡೀ ದೇಶದ ಗಮನ ಸೆಳೆಯಿತು. ನಿನ್ನೆ ತಡರಾತ್ರಿವರೆಗೂ ನಡೆದ ಚುನಾವಣಾ ಪ್ರಕ್ರಿಯೆಯು, ಬಿಜೆಪಿಯ ಇಬ್ಬರು ಮತ್ತು ಕಾಂಗ್ರೆಸ್‍ನ ಓರ್ವ ಸದಸ್ಯರು ರಾಜ್ಯಸಭೆಗೆ ಚುನಾಯಿತರಾಗುವುದರೊಂದಿಗೆ ಅಂತ್ಯ ಕಂಡಿತು.

ಸ್ಮೃತಿ ಇರಾನಿ.

ರಾಜ್ಯಸಭಾ ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಹೈ ಡ್ರಾಮಾ ನಡೆದ ಬಳಿಕ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಅವರು ಗೆಲುವನ್ನು ಚುನಾವಣಾ ಆಯೋಗ ಘೋಷಿಸಿತು. ಮೂರು ಸ್ಥಾನಗಳ ಪೈಕಿ ಎರಡು ಸ್ಥಾನಗಳಲ್ಲಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹಾಗೂ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಗೆಲುವು ಖಚಿತವಾಗಿತ್ತು. ಆದರೆ ರಾಜ್ಯಸಭೆಗೆ 5ನೇ ಬಾರಿ ಪುನರಾಯ್ಕೆ ಬಯಸಿದ್ದ ಅಹಮದ್ ಪಟೇಲ್ ಅವರ ಗೆಲವು ಸುಲಭ ಸಾಧ್ಯವಿರಲಿಲ್ಲ.

ಅಮಿತ್ ಷಾ.

ಬಿಜೆಪಿ ವತಿಯಿಂದ 3ನೇ ಅಭ್ಯರ್ಥಿಯ ಗೆಲುವು ಸಾಧ್ಯವಿಲ್ಲದೇ ಹೋದರೂ 3ನೇ ಅಭ್ಯರ್ಥಿಯನ್ನು ಬಿಜೆಪಿ ಕಣಕ್ಕಿಳಿಸಿತ್ತು. ಇದಲ್ಲದೆ ನಿನ್ನೆ ನಡೆದ ಮತದಾನದ ವೇಳೆ ಕಾಂಗ್ರೆಸ್‍ನ ಇಬ್ಬರು ಶಾಸಕರು ತಾವು ಯಾರಿಗೆ ಮತ ಚಲಾಯಿಸಿದ್ದೇವೆ ಎಂಬುದನ್ನು ಅಮಿತ್‍ ಷಾ ಅವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ತೋರಿಸಿದ್ದರು.

ಮೊದಲೇ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಹರಸಾಹಸ ಪಡುತ್ತಿದ್ದ ಕಾಂಗ್ರೆಸ್‍ ಪಕ್ಷವು ಇದರಿಂದ ಕೆರಳಿತು. ಈ ಇಬ್ಬರು ಶಾಸಕರ ಮತಗಳನ್ನು ಅನರ್ಹಗೊಳಿಸುವಂತೆ ಕಾಂಗ್ರೆಸ್ ನಾಯಕರು ಚುನಾವಣಾ ಆಯೋಗಕ್ಕೆ ಹಲವಾರು ಬಾರಿ ಮನವಿ ಸಲ್ಲಿಸಿದ ಕಾರಣ ಮತಎಣಿಕೆ ಪ್ರಕ್ರಿಯೆ ಆರಂಭವಾಗಲಿಲ್ಲ. ಕೊನೆಗೆ ತಡರಾತ್ರಿ 1 ಗಂಟೆಯವರೆಗೂ ದೂರು-ಪ್ರತಿದೂರುಗಳನ್ನು ಇತ್ಯರ್ಥಗೊಳಿಸುವಲ್ಲಿ ನಿರತರಾದ ಚುನಾವಣಾ ಆಯೋಗ 1.45 ರ ಸುಮಾರಿಗೆ ಮತ ಎಣಿಕೆ ಪೂರ್ಣಗೊಳಿ ಫಲಿತಾಂಶ ಪ್ರಕಟಿಸಿತು.

ಪ್ರತಿಷ್ಟೆಯ ಸಮರ :

ಅಹಮದ್ ಪಟೇಲ್ ಅವರು ಸೋನಿಯಾ ಗಾಂಧಿಯವರ ರಾಜಕೀಯ ಕಾರ್ಯದರ್ಶಿಯಾದ್ದರಿಂದ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವುದು ಕಾಂಗ್ರೆಸ್ ಪಕ್ಷಕ್ಕೆ ಪ್ರತಿಷ್ಟೆಯಂತಾಗಿತ್ತು. ಆದರೆ ಬಿಜೆಪಿ ತನ್ನ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವ ಮೂಲಕ ಕಾಂಗ್ರೆಸ್‍ ಅಭ್ಯರ್ಥಿಯನ್ನು ಸೋಲಿಸಲು ರಣತಂತ್ರ ಹೆಣೆದಿತ್ತು.

ಇದರ ಭಾಗವಾಗಿಯೇ ಬೆಂಗಳೂರಿಗೆ ಗುಜರಾತ್ ಶಾಸಕರನ್ನು ಕರೆತಂದ ಕರ್ನಾಟಕದ ಸಚಿವ ಡಿ.ಕೆ.ಶಿವಕುಮಾರ್ ಅವರ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿ ನಡೆದಿತ್ತು ಎಂದೂ ರಾಜಕೀಯ ವಲಯದಲ್ಲಿ ಚರ್ಚೆಯಾಗಿತ್ತು. ಹೀಗಾಗಿ ಬಿಜೆಪಿ ವತಿಯಿಂದ ಕಣಕ್ಕಿಳಿದಿದ್ದ ಮೂರನೇ ಅಭ್ಯರ್ಥಿ ಬಲವಂತಸಿಂಗ್ ರಜಪೂತ್ ಮತ್ತು ಅಹ್ಮದ್ ಪಟೇಲ್ ಗೆಲುವಿಗಾಗಿ ಹಣಾಹಣಿ ರೂಪದ ರಾಜಕೀಯ ಸ್ಪರ್ಧೆ ಏರ್ಪಟ್ಟಿತ್ತು.

ಕಾಂಗ್ರೆಸ್‍ನ ಇಬ್ಬರು ಶಾಸಕರ ಅಡ್ಡಮತದಾನ ವ್ಯರ್ಥ :
ಅಹ್ಮದ್ ಪಟೇಲ್.

3ನೇ ಅಭ್ಯರ್ಥಿಯ ಗೆಲುವು ಸುಲಭವೆಂದು ಲೆಕ್ಕ ಹಾಕಿದ್ದ ಬಿಜೆಪಿಯ ಯೋಜನೆ ಕೊನೆ ಕ್ಷಣದಲ್ಲಿ ತಲೆಕೆಳಗಾಯಿತು. ರಹಸ್ಯ ಮತದಾನದ ನಿಯಮ ಉಲ್ಲಂಘಿಸಿದ ಬಂಡಾಯ ಕಾಂಗ್ರೆಸ್ಸಿಗ ಶಂಕರಸಿಂಗ್ ವಘೇಲಾ ಅವರ ಬಣಕ್ಕೆ ಸೇರಿದ 2 ಬಂಡಾಯ ಕಾಂಗ್ರೆಸ್ ಶಾಸಕರ ಮತಗಳನ್ನು ಚುನಾವಣಾ ಆಯೋಗ ಅನರ್ಹಗೊಳಿಸಿತು. ಜೊತೆಗೆ ಬಿಜೆಪಿ ಪರ ಮತ ಚಲಾಯಿಸಬೇಕೆಂದು ವಿಪ್ ನೀಡಿದ್ದರೂ ಗುಜರಾತ್ ರಾಜ್ಯದ ಜೆಡಿಯು ಹಾಗೂ ಎನ್‍.ಸಿ.ಪಿ.ಯ ತಲಾ ಒಬ್ಬ ಶಾಸಕರು ಕಾಂಗ್ರೆಸ್ ಪರ ಮತ ಚಲಾಯಿದ್ದರಿಂದ ಕಾಂಗ್ರೆಸ್‍ ಅಭ್ಯರ್ಥಿ ಅಹಮದ್ ಪಟೇಲ್ ಅವರಿಗೆ ಗೆಲುವು ದಕ್ಕಿತು. ಪಟೇಲ್ ಅವರು 44 ಮತ ಪಡೆದು ಕೂದಲೆಳೆ ಅಂತರದಲ್ಲಿ ಗೆಲುವಿನ ನಗೆ ಬೀರಿದರು.

-ಎನ್.ಬಿ.

Leave a Reply

comments

Related Articles

error: