ಪ್ರಮುಖ ಸುದ್ದಿಮೈಸೂರು

ಮಾನಸಿಕ ಆರೋಗ್ಯಕ್ಕೆ ಜೀವನ ಪ್ರೀತಿಯೇ ರಹದಾರಿ: ಡಾ. ಸರ್ವಮಂಗಳಾ ಶಂಕರ್

“ಇಂದಿನ ದಿನಗಳಲ್ಲಿ ಅಧಿಕಾರಿಗಳು, ಪ್ರೇಮಿಗಳು ಜೀವನವನ್ನು ಎದುರಿಸದೇ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಜೀವನವನ್ನು ಪ್ರೀತಿಸಬೇಕು. ಆತ್ಮಹತ್ಯೆ ಮಾಡಿಕೊಳ್ಳುವುದು ಹೇಡಿತನ.” ಎಂದು ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಕಲಾ ವಿವಿಯ ಕುಲಪತಿ ಡಾ. ಸರ್ವಮಂಗಳ ಶಂಕರ್ ಹೇಳಿದರು.

ಜೆಎಸ್ಎಸ್ ಮನೋವೈದ್ಯಶಾಸ್ತ್ರ ವೈದ್ಯಕೀಯ ಕಾಲೇಜು, ಜೆಎಸ್ಎಸ್ ಸ್ಕೂಲ್ ಆಫ್ ನರ್ಸಿಂಗ್ ಮತ್ತು  ಮಾನಸಿಕ ಅಖಿಲ ಭಾರತ ವೈದ್ಯಕೀಯ ಸಂಘದ ವತಿಯಿಂದ ಅ.21ರ ಬೆಳಿಗ್ಗೆ 11 ಗಂಟೆಗೆ ಜೆ.ಎಸ್.ಎಸ್. ಆಸ್ಪತ್ರೆಯ ಶ್ರೀರಾಜೇಂದ್ರ ಶತಮಾನೋತ್ಸವ ಭವನದಲ್ಲಿ ಏರ್ಪಡಿಸಲಾಗಿದ್ದ ‘ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ’ಯನ್ನು ಉದ್ಘಾಟಿಸಿ ಮಾತನಾಡಿದ ಅವರು, “ಪ್ರಸ್ತುತ ದಿನಗಳಲ್ಲಿ ಭಾರತದಲ್ಲಿ ಮನೋರೋಗಿಗಳನ್ನು ಸಮಾಜ ಕಾಣುವ ರೀತಿಯೇ ಬೇರೆಯಾಗಿದೆ. ಇದರಿಂದಾಗಿ ಅವರು ಮಾನಸಿಕ ನೋವು ಅನುಭವಿಸುವಂತಾಗಿದೆ. ಆದ್ದರಿಂದ ಎಲ್ಲರೂ ಪ್ರಬುದ್ಧ ಮನಸ್ಸನ್ನು ಬೆಳೆಸಿಕೊಂಡು ಮಾನಸಿಕ ರೋಗಿಗಳನ್ನು ಸಮಾನ ಮನೋಭಾವದಿಂದ ಕಾಣಬೇಕು ಎಂದು  ಸಲಹೆ ನೀಡಿದರು. ಇತ್ತೀಚಿನ ದಿನಗಳಲ್ಲಿ ಸಂಗೀತ ಚಿಕಿತ್ಸೆಯು ಮನೋರೋಗಿಗಳ ದುಗುಡತೆಯನ್ನು ಹೋಗಲಾಡಿಸುವಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಯಶಸ್ವಿಯಾಗಿದೆ. ಸಂಗೀತದ ರಾಗ, ತಾಳಗಳು ಅವರ ಮನಸ್ಸನ್ನು ಶಾಂತ ಚಿತ್ತತೆಯಡೆಗೆ ಕರೆದೊಯ್ಯುತ್ತವೆ. ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರು ಆಸ್ಪತ್ರೆಗಳಿಗೆ ಭೇಟಿ ನೀಡಿ ಸಂಗೀತದಿಂದ ಮನೋರೋಗಿಗಳ ಮನಸ್ಸನ್ನು ಉಲ್ಲಾಸಪಡಿಸಿ ಅವರನ್ನು ಗುಣಮುಖರಾಗಿಸುತ್ತಿದ್ದರು” ಎಂದು ಸ್ಮರಿಸಿದರು.

ವೈದ್ಯ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, “ವೈದ್ಯರಾದವರು ಮನೋರೋಗಿಗಳ ಮನಸ್ಸನ್ನು ಅರಿತು ಪ್ರೀತಿಯಿಂದ ಅವರೊಡನೆ ಬೆರೆಯಬೇಕು. ಅವರ ಮನಸ್ಸನ್ನು ಧೈರ್ಯ, ಉಲ್ಲಾಸದೆಡೆಗೆ ಕರೆದೊಯ್ಯುವ ಶಕ್ತಿ ಇರುವುದು ನಿಮ್ಮಂತಹ ವೈದ್ಯರಿಗೆ ಮಾತ್ರ” ಎಂದು ಕಿವಿಮಾತು ಹೇಳಿದರು.

ಈ  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆ.ಎಸ್.ಎಸ್. ವಿವಿಯ ಕುಲಸಚಿವ ಡಾ. ಬಿ. ಮಂಜುನಾಥ್  ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಖಿಲ ಭಾರತ ವೈದ್ಯಕೀಯ ಸಂಘದ ಕಾರ್ಯದರ್ಶಿ ಸುರೇಶ್ ರುದ್ರಪ್ಪ, ಜೆಎಸ್ಎಸ್ ವಿವಿಯ ನಿರ್ದೇಶಕ ಡಾ.ಕುಶಾಲಪ್ಪ ಪಿ.ಎ, ಜೆಎಸ್ಎಸ್ ಆಸ್ಪತ್ರೆಯ ನಿರ್ದೇಶಕ ಡಾ. ಎಂ.ಡಿ. ರವಿ, ಡಾ. ಹೆಚ್.ಕೆ. ದಾಮೋದರ್ ರಾವ್ ಉಪಸ್ಥಿತರಿದ್ದರು. ಜೆಎಸ್ಎಸ್ ಆಸ್ಪತ್ರೆಯ ಮನೋವೈದ್ಯಶಾಸ್ತ್ರದ ಪ್ರಾಧ್ಯಾಪಕ ಡಾ. ಟಿ.ಎಸ್. ಸತ್ಯನಾರಾಯಣ ರಾವ್ ಅವರು ‘ಮಾನಸಿಕ ಆರೋಗ್ಯದಲ್ಲಿ ಘನತೆ” ವಿಷಯ ಕುರಿತು ಉಪನ್ಯಾಸ ನೀಡಿದರು.

img-20161021-wa0005

ಜೆಎಸ್ಎಸ್ ನಿಂದ ಅಗ್ರಹಾರದವರೆಗೆ ರ್ಯಾಲಿ: ಇದಕ್ಕೂ ಮುನ್ನ ಹಮ್ಮಿಕೊಳ್ಳಲಾಗಿದ್ದ ಜಾಗೃತ ರ್ಯಾಲಿಯನ್ನು ಜೆಎಸ್ಎಸ್ ಆಸ್ಪತ್ರೆಯ ನಿರ್ದೇಶಕ ಡಾ. ಎಂ.ಡಿ. ರವಿ ಉದ್ಘಾಟಿಸಿದರು. ಜೆಎಸ್ಎಸ್ ಆಸ್ಪತ್ರೆಯಿಂದ ಅಗ್ರಹಾರ ವೃತ್ತದವರೆಗೆ ರ್ಯಾಲಿ ಸಾಗಿತು. ಈ ರ್ಯಾಲಿಯಲ್ಲಿ ಸುಮಾರು 250  ಸ್ಕೂಲ್ ಆಫ್ ನರ್ಸಿಂಗ್ ನ ವಿದ್ಯಾರ್ಥಿಗಳು ಭಾಗವಹಿಸಿದ್ದರು. “ಮಾನಸಿಕ ಸ್ವಾಸ್ಥಕ್ಕೆ ಬೇಕು ಸೌಹಾರ್ದ ಸಂಬಂಧಗಳು ಮತ್ತು ಉತ್ತಮ ಕುಟುಂಬ ಪರಿಸರ”, “ನಮ್ಮ ಮಾನಸಿಕ ಆರೋಗ್ಯ ನಮ್ಮ ಕೈಲಿದೆ”. ಮಾನಸಿಕ ಕಾಯಿಲೆಗಿದೆ ಮನೋಚಿಕಿತ್ಸೆ ಮತ್ತು ನಡವಳಿಕೆ ಚಿಕಿತ್ಸೆ” – ಇವೇ ಮೊದಲಾದವುಗಳು ರ್ಯಾಲಿಯ ಘೋಷ ವಾಕ್ಯಗಳಾಗಿದ್ದವು.

img-20161021-wa0006

Leave a Reply

comments

Related Articles

error: