ಮೈಸೂರು

ಯುವಜನತೆಯಲ್ಲಿ ಅಯೋಡಿನ್ ಕೊರತೆ ಹೆಚ್ಚುತ್ತಿದೆ : ಡಾ.ನಾಗರಾಜು ಆತಂಕ

ಇಂದಿನ ಯುವಜನತೆಯಲ್ಲಿನ ಆಹಾರ ಪದ್ಧತಿ ಮತ್ತು ಜೀವನ ಶೈಲಿಯಿಂದಾಗಿ  ದೇಹದಲ್ಲಿ ಅಯೋಡಿನ್ ಕೊರತೆ ಹೆಚ್ಚುತ್ತಿದ್ದು, ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಮೈಸೂರು ನಗರಪಾಲಿಕೆಯ ಆರೋಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು ಆತಂಕ ವ್ಯಕ್ತಪಡಿಸಿದ್ದಾರೆ.

ನ್ಯೂ ಸಯ್ಯಾಜಿರಾವ್ ರಸ್ತೆಯಲ್ಲಿರುವ ಮೆಡಿವೇವ್ ಸಭಾಂಗಣದಲ್ಲಿ ಮೈಸೂರು ಕ್ಲಿನಕಲ್ ಸೊಸೈಟಿ ಮತ್ತು ಅಬಾಟ್ ಇಂಡಿಯಾ ಸಹಯೋಗದೊಂದಿಗೆ ವಿಶ್ವ ಅಯೋಡಿನ್ ಕೊರತೆ ನಿವಾರಣಾ ದಿನಾಚರಣೆ ಅಂಗವಾಗಿ ಶುಕ್ರವಾರ ನಡೆದ ಉಚಿತ ಥೈರಾಯಿಡ್ ತಪಾಸಣಾ ಶಿಬಿರದ ಉದ್ಘಾಟನೆಯನ್ನು ಡಾ.ಡಿ.ಜಿ.ನಾಗರಾಜು ನೆರವೇರಿಸಿದರು.

ಬಳಿಕ ಮಾತನಾಡಿದ ಅವರು ಕಡಲತಡಿಯಲ್ಲಿನ ಜನರಿಗೆ ಅಯೋಡಿನ್ ಕೊರತೆ ಕಂಡು ಬರುವುದಿಲ್ಲ. ಪರಿಶುದ್ಧ ನೀರನ್ನು ಸೇವಿಸುವವರಲ್ಲಿ ಈ ಕೊರತೆ ಕಂಡು ಬರುತ್ತದೆ. ಅಭಿವೃದ್ಧಿಶೀಲ ದೇಶಗಳಲ್ಲಿನ ಜನರಲ್ಲಿ ಅಯೋಡಿನ್ ಕೊರತೆ ಕಂಡು ಬರುತ್ತದೆ. 1984ರಲ್ಲಿಯೇ ಭಾರತ ಸರ್ಕಾರ ನಿಯಮವೊಂದನ್ನು ಜಾರಿಗೆ ತಂದು ಉಪ್ಪು ಉತ್ಪಾದನಾ ಘಟಕಗಳಲ್ಲಿ ಅಯೋಡಿನ್ ಯುಕ್ತ ಉಪ್ಪನ್ನೇ ತಯಾರಿಸಲು ತಾಕೀತು ಮಾಡಿತು. ಅದನ್ನೇ ಇಂದಿನ ಸರ್ಕಾರಗಳೂ ಮುಂದುವರಿಸಿವೆ ಎಂದರು. ಅಯೋಡಿನ ಕೊರತೆಯನ್ನು ನಿವಾರಿಸಿ ಆರೋಗ್ಯವನ್ನು ಕಾಪಾಡಿಕೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ಕಾರ್ಯಕ್ರಮ ಆಯೋಜಿಸಿರುವುದು ಸಂತೋಷದ ವಿಷಯ. ಶಾರೀರಿಕ ಬದಲಾವಣೆಗಳಾದಾಗ ಅಯೋಡಿನ್ನ ಪ್ರಾಮುಖ್ಯತೆ ತಿಳಿದು ಬರುತ್ತದೆ ಎಂದು ತಿಳಿಸಿದರು.

ಗರ್ಭಧಾರಣಾ ಸಂಶೋಧನಾ ಸಂಸ್ಥೆಯ ತಜ್ಞ ವೈದ್ಯ ಸಿ.ಶರತ್ ಕುಮಾರ್ ಮಾತನಾಡಿ ಸಾಮಾನ್ಯ ವ್ಯಕ್ತಿಯ ಶರೀರದಲ್ಲಿ 150ಮೈಕ್ರೋ ಗ್ರಾಂ, ಮಕ್ಕಳಲ್ಲಿ 70ರಿಂದ 150ಮೈಕ್ರೋಗ್ರಾಂ, ಗರ್ಭಿಣಿ ಸ್ತ್ರೀಯರಲ್ಲಿ 175ಮೈಕ್ರೋಗ್ರಾಂ ಅಯೋಡಿನ್ ಇರಬೇಕು. ಇದಕ್ಕಿಂತ ಕಡಿಮೆ ಇರುವವರಿಗೆ ಅಯೋಡಿನ್ ಕೊರತೆ ಉಳ್ಳವರಾಗಿರುತ್ತಾರೆ. ಜಗತ್ತಿನ 30% ಜನಸಂಖ್ಯೆಯಲ್ಲಿ ಅಯೋಡಿನ್ ಕೊರತೆ ಇದೆ. ಭಾರತದಲ್ಲಿ 13ಕೋಟಿ ಜನ ಅಯೋಡಿನ್ ಕೊರತೆಯಿಂದ ಬಳಲುತ್ತಿದ್ದಾರೆ. TSH ಎನ್ನುವ ಪರೀಕ್ಷೆಯ ಮೂಲಕ ಅಯೋಡಿನ್ ಕೊರತೆಯನ್ನು ಕಂಡು ಹಿಡಿದು, ಪರಿಹಾರ ಕಂಡುಕೊಳ್ಳಬಹುದು. ಆಹಾರ ಪದ್ಧತಿಯಲ್ಲಿ ಬದಲಾವಣೆ ತಂದುಕೊಳ್ಳಬಹುದು ಎಂದರು.

ಕಾರ್ಯಕ್ರಮದಲ್ಲಿ ನಗರಪಾಲಿಕೆ ಸದಸ್ಯ ಪ್ರಶಾಂತಗೌಡ, ಡಾ.ಮಾಲಿನಿ, ಮೈಸೂರು ಕ್ಲಿನಿಕಲ್ ಸೊಸೈಟಿಯ ಖಜಾಂಚಿ ಡಾ.ರವಿಕುಮಾರ್, ಗೌರವ ಕಾರ್ಯದರ್ಶಿ ಡಾ.ಎಂ.ಜಿ.ಆರ್.ಅರಸ್ ಮತ್ತಿತರರು ಉಪಸ್ಥಿತರಿದ್ದರು.

 

Leave a Reply

comments

Related Articles

error: