ಕರ್ನಾಟಕಪ್ರಮುಖ ಸುದ್ದಿ

ನ್ಯಾಯಾಂಗದ ಆದೇಶದಂತೆ ತಮಿಳುನಾಡಿಗೆ ನೀರು: ಮುಖ್ಯಮಂತ್ರಿ ಸಿದ್ದರಾಮಯ್ಯ

ಚಾಮರಾಜನಗರ,ಆ.10-ತಮಿಳುನಾಡಿಗೆ ನೀರು ಬಿಡುವ ವಿಚಾರ ನ್ಯಾಯಾಲಯದಲ್ಲಿರುವುದರಿಂದ ನಾವು ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಹೇಳಲಾಗುವುದಿಲ್ಲ. ಸಾಮಾನ್ಯ ವರ್ಷದಲ್ಲಿ ತಮಿಳುನಾಡಿಗೆ 10 ಟಿಎಂಸಿ ನೀರು ಬಿಡಬೇಕು. ಜುಲೈ ನಲ್ಲಿ 34 ಟಿಎಂಸಿ, ಆಗಸ್ಟ್ ನಲ್ಲಿ 50 ಟಿಎಂಸಿ ನೀರು ಬಿಡಬೇಕು. ಆದರೆ ಇದುವರೆಗೂ 12 ಟಿಎಂಸಿ ನೀರು ಬಿಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಚಾಮರಾಜನಗರ ಆಲೂರಿನಲ್ಲಿ ರಾಚಯ್ಯ ಅವರ ಸ್ಮಾರಕ ನಿರ್ಮಾಣಕ್ಕೆ ಶಿಲಾನ್ಯಾಸ ಹಾಗೂ ಪಟ್ಟಣದಲ್ಲಿ ಜೋಡಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಲು ಚಾಮರಾಜನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಸಿದ್ದರಾಮಯ್ಯ ಸುದ್ದಿಗಾರರೊಂದಿಗೆ ಮಾತನಾಡಿ, ನಿನ್ನೆ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದ್ದು, 4 ಜಲಾಶಯಗಳಿಂದ 45 ಟಿಎಂಸಿ ನೀರಿದೆ. ಕಬಿನಿಯಲ್ಲಿ 8 ಟಿಎಂಸಿ ನೀರಿದೆ. ತಮಿಳುನಾಡಿಗೆ ನೀರು ಬಿಡುವ ವಿಚಾರ ನ್ಯಾಯಾಲಯದಲ್ಲಿರುವುದರಿಂದ ತಮಿಳುನಾಡಿಗೆ ನೀರು ಬಿಡದಿದ್ದರೆ ಅದು ನ್ಯಾಯಾಂಗ ನಿಂದನೆಯಾಗುತ್ತದೆ. ಹೀಗಾಗಿ ತಮಿಳುನಾಡಿಗೆ ನೀರು ಬಿಡಲಾಗುತ್ತಿದೆ. ಮಳೆಯಿಲ್ಲದಿರುವುದರಿಂದ ಸಂಕಷ್ಟ ಸೂತ್ರದ ಪ್ರಕಾರ ನಾವು ಸುಮಾರು 27 ಟಿಎಂಸಿ ನೀರು ಬಿಡಬೇಕಾಗುತ್ತದೆ. ಆದರೆ ನಾವು 12 ಟಿಎಂಸಿ ನೀರು ಬಿಟ್ಟಿದ್ದೇವೆ. ಅದೇ ರೀತಿ ನಮ್ಮ ರೈತರಿಗೂ ನೀರು ಬಿಟ್ಟಿದ್ದೇವೆ. ಕೆರೆ, ಕಟ್ಟೆಗಳಿಗೆ ನೀರು ತುಂಬಿಸಿ ಮಳೆಯಾಧಾರಿತ ಬೆಳೆಗಳಾದ ರಾಗಿ, ಜೋಳ, ದ್ವಿದಳ ಧ್ಯಾನಗಳನ್ನು ಬೆಳೆಯಿರಿ, ಭತ್ತ ಹಾಗೂ ಕಬ್ಬು ಬೆಳೆಯಬೇಡಿ ಎಂದು ಸೂಚಿಸಲಾಗಿದೆ ಎಂದರು.

ಇನ್ನೂ ವೀರಶೈವ ಧರ್ಮವನ್ನು ಸ್ವತಂತ್ರ ಧರ್ಮವನ್ನಾಗಿ ಮಾಡುವ ಬಗ್ಗೆ ಮಾತನಾಡಿದ ಅವರು, ವೀರಶೈವವನ್ನು ಸ್ವತಂತ್ರ ಧರ್ಮವನ್ನಾಗಿ ಮಾಡುವುದು ಸರ್ಕಾರದ ನಿಲುವಲ್ಲ. ನಾವೇ ಹುಟ್ಟುಹಾಕಿದ್ದೇವೆ ಎಂಬ ತಪ್ಪು ಕಲ್ಪನೆಯಾಗಿದೆ. ವೀರಶೈವ ಮಹಾಸಭಾದವರು ವೀರಶೈವವನ್ನು ಸ್ವತಂತ್ರ ಧರ್ಮವನ್ನಾಗಿ ಮಾಡಬೇಕು. ಅದಕ್ಕೆ ನೀವು ಶಿಫಾರಸ್ಸು ಮಾಡಬೇಕೆಂದು ಮನವಿ ಮಾಡಿದರು. ನೀವು ಒಟ್ಟಾಗಿ ಬನ್ನಿ. ಸರ್ಕಾರ ಪರಿಶೀಲಿಸಿ ಶಿಫಾರಸ್ಸು ಮಾಡುತ್ತದೆ ಎಂದು ಹೇಳಿದವು. ಅದರಲ್ಲಿ ಏನು ತಪ್ಪಿದೆ. ಅಖಿಲ ಭಾರತ ವೀರಶೈವ ಮಹಾಸಭಾದ ಶ್ಯಾಮಾನೂರು ಶಿವಶಂಕರಪ್ಪ ಕೇಳಿಕೊಂಡರು. ಹಾಗೇ ಮಾತೆ ಮಹದೇವಿ ಸಹ ಪತ್ರ ಬರೆದಿದ್ದರು. ಇದನ್ನು ನಾನು ಹುಟ್ಟುಹಾಕಿದಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಸದ ಆರ್.ಧ್ರುವನಾರಾಯಣ್ ಇತರರು ಹಾಜರಿದ್ದರು. ನಂತರ ಪಟ್ಟಣದಲ್ಲಿ ಜೋಡಿ ರಸ್ತೆ ಅಬಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿ‌ ಸಿದ್ದರಾಮಯ್ಯ, ಲೋಕೊಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಚಾಲನೆ ನೀಡಿದರು. (ವರದಿ-ವಿಎಸ್ಎಸ್, ಎಂ.ಎನ್)

Leave a Reply

comments

Related Articles

error: