ಮೈಸೂರು

ಸ್ಪರ್ಧೆಯನ್ನು ಮೆಟ್ಟಿನಿಂತಾಗ ಯಶಸ್ಸು ಸಾಧ್ಯ: ಉಮನಾಥ್

ಮೈಸೂರು. ಆ.೧೦: ಮಹಾರಾಣಿ ಮಹಿಳಾ ಕಲಾ ಕಾಲೇಜು, ಸಾಂಸ್ಕೃತಿಕ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಗುರುವಾರ ನಗರ ಮಟ್ಟದ ಅಂತರ ಕಾಲೇಜು ಚರ್ಚಾಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ಕಾಲೇಜಿನ ಸಭಾಂಗಣದಲ್ಲಿ ಬಹುರಾಷ್ಟ್ರೀಯ ಕಂಪನಿಗಳಿಂದ ಗ್ರಾಮೀಣ ಬದುಕು ಅವನತಿಯತ್ತ ಸಾಗುತ್ತಿದೆ ಎಂಬ ವಿಷಯದ ಕುರಿತು ಆಯೋಜಿಸಿದ್ದ ಚರ್ಚಾಸ್ಪರ್ಧೆಯನ್ನು ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ಆಯುಕ್ತ ಪ್ರೊ.ಎಂ.ಕೆ.ಉಮನಾಥ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಇಂದು ಪ್ರತಿಯೊಂದು ಕ್ಷೇತ್ರದಲ್ಲೂ ವಿಫುಲ ಅವಕಾಶಗಳಿರುವಂತೆ ಸ್ಪರ್ಧೆಯೂ ಹೆಚ್ಚಿದೆ. ಅದನ್ನೆಲ್ಲಾ ಮೆಟ್ಟಿನಿಂತು ಸಾಧನೆ ಮಾಡಬೇಕಾದರೆ ನಮ್ಮದೇ ಆದ ಪ್ರತಿಭೆ ಹಾಗೂ ಸಾಮರ್ಥ್ಯವನ್ನು ಮೈಗೂಡಿಸಿಕೊಳ್ಳಬೇಕು. ಆಗ ಮಾತ್ರ ಯಶಸ್ಸು ಸಾಧ್ಯ. ಈ ದಿಸೆಯಲ್ಲಿ ವಿದ್ಯಾರ್ಥಿಗಳು ಮುನ್ನಡೆಯಬೇಕು ಎಂದರು.
ಸ್ಪರ್ಧೆಯನ್ನು ಸವಾಲಾಗಿ ಸ್ವೀಕರಿಸಿ, ಸಂವಹನ ಕೌಶಲಗಳನ್ನು ಬೆಳೆಸಿಕೊಂಡು, ಗುರಿಯೆಡೆಗೆ ಹೆಜ್ಜೆ ಇಟ್ಟರೆ ಯಾವುದೂ ಅಸಾಧ್ಯವಲ್ಲ. ಶಾಲಾ ಕಾಲೇಜು ಹಂತಗಳಲ್ಲಿ ಈ ರೀತಿಯ ಸ್ಪರ್ಧೆಗಳನ್ನು ಹೆಚ್ಚೆಚ್ಚು ಆಯೋಜಿಸುವುದರಿಂದ ವಿದ್ಯಾರ್ಥಿಗಳಲ್ಲಿನ ಸಾಮರ್ಥ್ಯ ಹೆಚ್ಚಲಿದ್ದು, ವಿದ್ಯಾರ್ಥಿಗಳು ಇಂತಹ ವೇದಿಕೆಗಳನ್ನು ಸರಿಯಾಗಿ ಬಳಸಿಕೊಂಡು ಮುಂದೆ ಬರಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಂಶುಪಾಲ ಪ್ರೊ.ಎನ್.ನಂಜುಂಡಸ್ವಾಮಿ, ಕನ್ನಡ ಸಹ ಪ್ರಾಧ್ಯಾಪಕ ಪ್ರೊ.ಕೃಷ್ಣಮೂರ್ತಿ, ಅರ್ಥಶಾಸ್ತ್ರ ಸಹ ಪ್ರಾಧ್ಯಾಪಕಿ ಡಾ.ರಶ್ನಿ ಚನ್ನಯ್ಯ, ಡಾ.ಹೆಚ್.ಎಂ.ಕಲಾಶ್ರೀ, ಪ್ರೊ.ಶೈಲಜಾ, ಪ್ರೊ.ಎಂ.ನಂಜುಂಡಯ್ಯ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. (ವರದಿ ಬಿ.ಎಂ)

Leave a Reply

comments

Related Articles

error: