ಮೈಸೂರು

ಕೆಆರ್ ಎಸ್ ಜಲಾಶಯದಿಂದ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಲ್ಲಿ ನೀರು

ಮೈಸೂರು,ಆ.10:-  ಕಳೆದ ಒಂದು ತಿಂಗಳಿಂದ ರೈತರು ಹಾಗೂ ವಿವಿಧ ಸಂಘಟನೆಗಳ ಹೋರಾಟಕ್ಕೆ ಮಣಿದ ರಾಜ್ಯ ಸರ್ಕಾರ ಕೆಆರ್ ಎಸ್ ಜಲಾಶಯದಿಂದ ಅಚ್ಚುಕಟ್ಟು ವ್ಯಾಪ್ತಿಗೆ ಬರುವ ಎಲ್ಲಾ ನಾಲೆಗಳಿಗೆ ಮಧ್ಯರಾತ್ರಿಯಿಂದಲೇ ನೀರು ಬಿಡುಗಡೆಗೊಳಿಸಿದೆ.
ಕುಡಿಯುವ ನೀರಿಗೆ ಮತ್ತು ಅಂತರ್ಜಲ ಮಟ್ಟ ಹೆಚ್ಚಿಸಲು ಕೆರೆ ಕಟ್ಟೆಗಳನ್ನು ತುಂಬಿಸಲಾಗುತ್ತಿದೆ. ಇದರಿಂದ ಸಹಜವಾಗಿ ರೈತರ ಮೊಗದಲ್ಲಿ ಸಂತಸ ವ್ಯಕ್ತವಾಗಿದೆ. ಬುಧವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಾಲೆಗಳಿಗೆ ನೀರು ಹರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿತ್ತು. ಕಳೆದ ವರ್ಷದಿಂದ ಕಾವೇರಿ ಕೊಳ್ಳದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗದೆ ಜಲಾಶಯ ಸಂಪೂರ್ಣ ಭರ್ತಿಯಾಗಿರಲಿಲ್ಲ. ಸಕಾಲಕ್ಕೆ ಮಳೆಯಾಗದೆ ರೈತರು ಸಂಕಷ್ಟದಲ್ಲಿ ಸಿಲುಕಿದ್ದರು. ಭೂಮಿಗೆ ಹಾಕಿದ ಬೆಳೆ ಸಿಗದೆ ಕಂಗಾಲಾದ ರೈತರು ಆತ್ಮಹತ್ಯೆಗೆ ಮುಂದಾಗಿದ್ದನ್ನು ಇಲ್ಲಿ ಸ್ಮರಿಸಬಹುದು. ದುರಾದೃಷ್ಟ ಈ ವರ್ಷವೂ ಸಹ ಮುಂಗಾರು ಮಳೆ ಬಾರದೆ ರೈತರು ಇನ್ನೂ ಸಹ ಕೃಷಿ ಚಟುವಟಿಕೆಯಲ್ಲಿ ಭಾಗವಹಿಸದೆ ಮುಗಿಲಿನತ್ತ ಮುಖ ಮಾಡಿ ಕುಳಿತಿದ್ದರು.
ಕಳೆದ 15 ದಿನಗಳಿಂದ ಕಾವೇರಿ ಕೊಳ್ಳದಲ್ಲಿ ಮಳೆಯಾದ ಕಾರಣ ಕೆಆರ್ ಎಸ್ ಜಲಾಶಯಕ್ಕೆ ಸ್ವಲ್ಪ ಪ್ರಮಾಣದ ನೀರು ಹರಿದು ಬಂದಿದ್ದು, ಜಲಾಶಯದ ನೀರಿನ ಮಟ್ಟದ 93 ಅಡಿಗೆ ನಿಂತಿದೆ.
ಸುಪ್ರಿಂ ಕೋರ್ಟ್ ಆದೇಶದಂತೆ ರಾಜ್ಯಸರ್ಕಾರ ದಿನನಿತ್ಯ ತಮಿಳುನಾಡಿಗೆ ನೀರನ್ನು ಬಿಡುಗಡೆಗೊಳಿಸುತ್ತಿತ್ತು. ಇದು ಸಹಜವಾಗಿ ರೈತರನ್ನು ಕೆರಳಿಸಿ ಪ್ರತಿಭಟನೆಗೆ ಕಾರಣವಾಯಿತು. ನಾಲೆಗಳಿಗೆ ಕೆಆರ್ ಎಸ್ ಜಲಾಶಯದಿಂದ ನೀರು ಹರಿಸುವಂತೆ ಕಳೆದ ಒಂದು ತಿಂಗಳಿನಿಂದ ಸತತವಾಗಿ ರೈತರು ಹಾಗೂ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ ಪರಿಣಾಮ ರಾಜ್ಯ ಸರ್ಕಾರ ಒತ್ತಡಕ್ಕೆ ಮಣಿದು ನಾಲೆಗಳಿಗೆ ನೀರು ಹರಿಸಿದೆ. ಜೊತೆಗೆ ಕಬ್ಬು ಮತ್ತು ಭತ್ತ ಬೆಳೆಯದಂತೆ ಮನವಿ ಮಾಡಿದ್ದು, ಮಳೆ ಆಧಾರಿತ ಬೆಳೆ ಬೆಳೆಯಲು ಸೂಚಿಸಿದೆ.
ಜಲಾಶಯದಿಂದ ವಿವಿಧ ನಾಲೆಗಳಿಗೆ ನೀರು ಬಿಡುಗಡೆ ಮಾಡುತ್ತಿದ್ದಂತೆ ಮಂಡ್ಯ ಜಿಲ್ಲೆಯ ರೈತರು ಸಂತಸದಿಂದ ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವುದು ಎಲ್ಲೆಡೆ ಕಂಡು ಬಂದಿತು. ಕೆರೆ ಕಟ್ಟೆಗಳನ್ನು ತುಂಬಿಸಲು ಮುಂದಾಗಿರುವುದರಿಂದ ಅಂತರ್ಜಲ ಹೆಚ್ಚಾಗಿ ಈಗಾಗಲೆ ನಿಂತು ಹೋಗಿರುವ ಬೋರ್ ವೆಲ್ ಗಳು ಪುನಃ ಆರಂಭವಾಗುವ ಸಾಧ್ಯತೆ ಇರುವುದರಿಂದ ರೈತರ ಸಂತಸ ಇಮ್ಮಡಿಯಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: