ಪ್ರಮುಖ ಸುದ್ದಿ

ಸಾವು ಬದುಕಿನ ನಡುವೆ ಹೋರಾಡುತ್ತಿದ್ದರೂ ಚಿಕಿತ್ಸೆ ನೀಡುವವರೇ ಇಲ್ಲ…!

ಪ್ರಮುಖ ಸುದ್ದಿ, ಗುಂಡ್ಲುಪೇಟೆ, ಆ.೧೦: ಸರ್ಕಾರ ಹಾಡಿಗಳು ಹಾಗೂ ಗಿರಿಜನರ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿ ಅಭಿವೃದ್ದಿಯ ಪರ್ವ ಆರಂಭಿಸಿzವೆ ಎಂದು ಹೇಳಿಕೊಳ್ಳುತ್ತಿದೆ. ಆದರೆ ಬಂಡೀಪುರ ಹುಲಿಯೋಜನೆಯ ಕಾಡಂಚಿನ ಹಾಡಿಗಳಲ್ಲಿ ಮೂಲ ಸೌಕರ್ಯವೇ ಇಲ್ಲದೆ ಅನಾರೋಗ್ಯದಿಂದ ಗಿರಿಜನರು ನರಳುತ್ತಿದ್ದು, ಸಾವು ಬದುಕಿನ ನಡುವೆ ಜೀವನ್ಮರಣ ಹೋರಾಟ ನಡೆಸುತ್ತಿದ್ದರೂ ಚಿಕಿತ್ಸೆ ನೀಡದೇ ಇರುವುದು ಹಾಡಿಗಳ ಅವ್ಯವಸ್ಥೆಗೆ ಹಿಡಿದ ಕನ್ನಡಿಯಂತಿದೆ.
ಹೌದು ಚಿಕನ್‌ಗುನ್ಯಾದಿಂದ ಗಿರಿಜನರು ನರಳುತ್ತಿದ್ದರೆ ಸೂಕ್ತ ಚಿಕಿತ್ಸೆ ದೊರಕದೆ ಗಿರಿಜನ ವ್ಯಕ್ತಿಯೊಬ್ಬ ಅನಾರೋಗ್ಯದಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಬಂಡೀಪುರ ವ್ಯಾಪ್ತಿಯ ಚೆನ್ನೀಕಟ್ಟೆ ಹಾಗೂ ಕಾರೇಮಾಳ ಹಾಡಿಗಳ ಗಿರಿಜನರಿಗೆ ಸರ್ಕಾರದಿಂದ ನೀಡುವ ಸೌಲಭ್ಯಗಳು ಸರಿಯಾಗಿ ದೊರಕುತ್ತಿಲ್ಲ. ಇದರಿಂದ ಅಪೌಷ್ಟಿಕತೆ ಹಾಗೂ ಚಿಕನ್‌ಗುನ್ಯಾ ಜ್ವರದಿಂದ ಬಳಲುತ್ತಿದ್ದಾರೆ. ಗ್ರಾಮಪಂಚಾಯಿತಿ ಕೇಂದ್ರವಾದ ಮಂಗಲದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಈ ಕಾಡಂಚಿನ ಜನರ ಆರೋಗ್ಯ ತಪಾಸಣೆ ಹಾಗೂ ಮೇಲ್ವಿಚಾರಣೆಗೆ ಉದ್ಭವ ಎಂಬ ಹೆಸರಿನ ಸ್ವಯಂಸೇವಾ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದರೂ ಎಲ್ಲಾ ಜನರ ಆರೋಗ್ಯ ತಪಾಸಣೆ ಸಾಧ್ಯವಾಗುತ್ತಿಲ್ಲ.
ಕೆಲವು ತಿಂಗಳ ಹಿಂದೆ ಕೂಲಿಗಾಗಿ ಕೊಡಗಿನತ್ತ ತೆರಳಿದ್ದ ಕಾರೇಮಾಳದ ಚೆಲುವಯ್ಯ( ೪೫) ಎಂಬಾತನಿಗೆ ಕಳೆದ ೨ ತಿಂಗಳಿಂದ ಮೈಮೇಲೆ ಬೊಬ್ಬೆ ಮೂಡಿ ಕಾಯಿಲೆ ಉಲ್ಬಣಗೊಂಡಿದೆ. ದಿನೇ ದಿನೇ ಮೈ ಮೇಲೆ ಹುಳು ಬೀಳುತ್ತಿದ್ದು ಯಾವುದೋ ಪೌಡರ್‌ನ್ನು ಮೈಮೇಲೆ ಬಳಿದುಕೊಂಡು ಬಟ್ಟೆ ಹಾಕಿಕೊಳ್ಳದೆ ತಡೆಯಲಾಗದ ನೋವಿನಿಂದ ಒದ್ದಾಡುತ್ತಿದ್ದಾನೆ. ಖಾಯಿಲೆಯಿಂದ ಗಿರಿಜನನೊಬ್ಬ ಮನೆಯಿಂದ ಹೊರಗೆ ಬರಲಾಗದೆ ನರಳುತ್ತಿರುವ ಬಗ್ಗೆ ಸ್ಥಳೀಯರು ಆರೋಗ್ಯ ಇಲಾಖೆಯ ಗಮನಕ್ಕೆ ತಂದಿದ್ದರೂ ಕೂಡ ಕಾರೇಮಾಳದವರೆಗೆ ಬಂದ ಆರೋಗ್ಯ ಚಿಕಿತ್ಸಾ ವಾಹನ ಈತನ ಮನೆ ಬಳಿಗೆ ಬರಲಾಗದೆ ಹಿಂದುರುಗಿದೆ. ಪರಿಣಾಮವಾಗಿ ಚೆಲುವಯ್ಯ ತನ್ನ ಮನೆಯೊಳಗೆ ಸಾವು ಬದುಕಿನ ಹೋರಾಟ ನಡೆಸುತ್ತಿದ್ದಾನೆ. ಅಲ್ಲದೆ ಈತ ಮಳೆ ಬಂದರೆ ಸೋರುವ ಮುರುಕಲು ಮನೆಯಲ್ಲಿ ವಾಸವಿದ್ದು ಈತನಿಗೆ ಚಿಕಿತ್ಸೆ ನೀಡಲು ಯಾರೂ ಮುಂದೆ ಬರುತ್ತಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ಸೂಕ್ತ ಚಿಕಿತ್ಸೆ ನೀಡಿ ಜೀವ ಉಳಿಸುವ ಕಾರ್ಯ ಮಾಡಬೇಕಿದೆ. (ವರದಿ ಬಿ.ಎಂ)

Leave a Reply

comments

Related Articles

error: