ಕರ್ನಾಟಕಪ್ರಮುಖ ಸುದ್ದಿಮೈಸೂರು

ದೇವೇಗೌಡರ ಆಡಳಿತ ನೀಡಲು ಸಾಧ್ಯವಿಲ್ಲ; ಸಿದ್ದರಾಮಯ್ಯ ವಿರುದ್ಧ ಇಬ್ರಾಹಿಂ ಟೀಕಾ ಪ್ರಹಾರ

ಮೈಸೂರು: “ಮುಖ್ಯಮಂತ್ರಿ ಮೊದಲಿನಂತಿಲ್ಲ, ವ್ಯವಸ್ಥೆಯೊಂದಿಗೆ ಅವರು ಬದಲಾಗಿ ಹೋಗಿದ್ದಾರೆ. ಸಿದ್ದರಾಮಯ್ಯ ಅವರಿಗೆ ಲಿಂಕ್ ತಪ್ಪಿಹೋಗಿದೆ. ಮೂರು ವರ್ಷದಲ್ಲಿ ಆಡಳಿತ ಕಳೆಗುಂದಿದೆ. ಸಿಎಂ ಹೇಳಿಕೊಳ್ಳುವಂಥ ಸಾಧನೆ ಮಾಡಿಲ್ಲ, ವ್ಯವಸ್ಥೆ ಹಾಳಾಗಿದೆ, ಬದ್ಧತೆ ಕಡಿಮೆಯಾಗಿದೆ” -– ಇವು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುರಿತು ಟೀಕಿಸಿದ ಪರಿ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಇಬ್ರಾಹಿಂ ಅವರು, ಮುಖ್ಯಮಂತ್ರಿ ಜೊತೆಗೆ ಎಲ್ಲವೂ ಸರಿ ಇಲ್ಲ ಎನ್ನುವಂತೆ ಒಂದರ ಹಿಂದೊಂದು ಟೀಕೆಗಳ ಬಾಣ ಬಿಟ್ಟರು. ಇದು ಸಾಲದೆಂಬಂತೆ ಮಾಜಿ ಪ್ರಧಾನಿ ಎಚ್‍.ಡಿ. ದೇವೇಗೌಡರು ನೀಡಿದ ಆಡಳಿತವನ್ನು ಸ್ಮರಿಸುತ್ತಾ, ದೇವೇಗೌಡರ ಆಡಳಿತವನ್ನು ಬೇರೆಯವರು ನೀಡಲು ಸಾಧ್ಯವಿಲ್ಲ, ಗೌಡರ ಆಡಳಿತಕ್ಕೆ ಅವರೇ ಸಾಟಿ ಎಂದು ಗೌಡರನ್ನು ಹಾಡಿ ಹೊಗಳಿದರು.

ಒಂದಾಗುತ್ತಾ ಜನತಾ ಪರಿವಾರ?

ಹಿಂದೆ ಜನತಾ ಪರಿವಾರದಲ್ಲಿದ್ದ ಸಮಾನ ಮನಸ್ಕನಾಯಕರು ಈಗ ಎಲ್ಲ ಪಕ್ಷಗಳಲ್ಲೂ ಇದ್ದಾರೆ. ಅವರೆಲ್ಲರನ್ನೂ ಒಟ್ಟುಗೂಡಿಸಿ ಸಮಾಲೋಚನೆ ನಡೆಸಲಾಗುವುದು ಎಂದೂ ಇದೇ ಸಂದರ್ಭ ಅವರು ತಿಳಿಸಿದ್ದಾರೆ. ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಒಬ್ಬರಾಗಿದ್ದ ಇಬ್ರಾಹಿಂ, ಮುಖ್ಯಮಂತ್ರಿಯನ್ನು ಬಹಿರಂಗವಾಗಿ ಟೀಕಿಸಿರುವ ಬೆಳವಣಿಗೆಯಿಂದ ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸೇರಬಹುದು ಎಂಬ ವಾದಕ್ಕೆ ಪುಷ್ಟಿ ನೀಡಿದಂತಾಗಿದೆ.

ಹಿಂದೆ ದೇವೇಗೌಡರನ್ನೂ ಟೀಕಿಸಿದ್ದರು!

ದೇವೇಗೌಡರು ಕರ್ನಾಟಕದ ಮುಖ್ಯಮಂತ್ರಿ ಮತ್ತು ದೇಶದ ಪ್ರಧಾನಮಂತ್ರಿಯಾಗಿದ್ದಾಗ ಅವರ ಸಂಪುಟದಲ್ಲಿ ಸಚಿವರಾಗಿದ್ದ ಇಬ್ರಾಹಿಂ, ಮಹತ್ವದ ಖಾತೆಗಳನ್ನೇ ಪಡೆದಿದ್ದರು. ನಂತರ ಜನತಾ ಪರಿವಾರ ಬಿಟ್ಟು ಕಾಂಗ್ರೆಸ್ ಸೇರಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ  ಸ್ಪರ್ಧಿಸಿ ಸೋತಿದ್ದರು. ಕಾಂಗ್ರೆಸ್ ನಲ್ಲಿದ್ದಾಗ ದೇವೇಗೌಡರನ್ನು ವಾಚಾಮಗೋಚರವಾಗಿ ಟೀಕಿಸಿದ್ದ ಇಬ್ರಾಹಿಂ, ಪ್ರಸ್ತುತ ದೇವೇಗೌಡರನ್ನು ಹಾಡಿ ಹೊಗಳುತ್ತಿರುವುದು ರಾಜಕೀಯ ಧೃವೀಕರಣದ ಸೂಚನೆಯಂತಿದೆ.

Leave a Reply

comments

Related Articles

error: