ಕರ್ನಾಟಕ

ಸಾಲು ಸಾಲು ರಜೆ ಪ್ರಯುಕ್ತ ಕೆ.ಎಸ್‌.ಆರ್‌.ಟಿ.ಸಿ ವತಿಯಿಂದ 500 ಹೆಚ್ಚುವರಿ ಬಸ್‌ ಸೌಲಭ್ಯ

ಬೆಂಗಳೂರು, ಆ.11: ಸ್ವಾತಂತ್ರ್ಯ ದಿನಾಚರಣೆ ಹಾಗೂ ಸಾಲು ರಜೆಗಳ ಪ್ರಯುಕ್ತ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಪ್ರಯಾಣಿಕರ ಅನುಕೂಲಕ್ಕಾಗಿ ಇದೇ 11 ಹಾಗೂ 12ರಂದು ನಗರದಿಂದ ವಿವಿಧ ಸ್ಥಳಗಳಿಗೆ ತೆರಳಲು 500 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ ಮಾಡಲಿದೆ. ರಾಜ್ಯದ ಮತ್ತು ಅಂತರರಾಜ್ಯದ ವಿವಿಧ ಸ್ಥಳಗಳಿಂದ ಬೆಂಗಳೂರಿಗೆ ಇದೇ 15ರಂದು ವಿಶೇಷ ವಾಹನಗಳ ಕಾರ್ಯಾಚರಣೆಗೆ ಅವಕಾಶ ಕಲ್ಪಿಸಲಿದೆ.

ಆಗಸ್ಟ್‌12ರಂದು ಎರಡನೇ ಶನಿವಾರ, ಮರುದಿನ ಭಾನುವಾರ ರಜೆ ಇದೆ. 14ರಂದು ಕೃಷ್ಣ ಜನ್ಮಾಷ್ಟಮಿಯ ಪ್ರಾದೇಶಿಕ ರಜೆ ಇದೆ. ಅದರ ಮರುದಿನ 15ಕ್ಕೆ ಸ್ವಾತಂತ್ರ್ಯೋತ್ಸವವಿದ್ದು, ಬಹುತೇಕ ನೌಕರರಿಗೆ ರಜೆ ಸಿಗುತ್ತದೆ. ಹೀಗಾಗಿ ಮೆಜೆಸ್ಟಿಕ್‌ ಬಸ್ ನಿಲ್ದಾಣದಿಂದ ಧರ್ಮಸ್ಥಳ, ಕುಕ್ಕೆಸುಬ್ರಹ್ಮಣ್ಯ, ಶಿವಮೊಗ್ಗ, ಹಾಸನ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ, ವಿಜಯಪುರ, ಗೋಕರ್ಣ, ಶಿರಸಿ, ಕಾರವಾರ, ರಾಯಚೂರು, ಕಲಬುರ್ಗಿ, ಬಳ್ಳಾರಿ, ಕೊಪ್ಪಳ, ಯಾದಗಿರಿ, ಬೀದರ್, ತಿರುಪತಿಗೆ ಹೆಚ್ಚುವರಿ ಬಸ್‌ಗಳು ತೆರಳಲಿವೆ.

ಮೈಸೂರು ರಸ್ತೆ ಬಸ್ ನಿಲ್ದಾಣದಿಂದ ಮೈಸೂರು, ಹುಣಸೂರು, ಪಿರಿಯಾಪಟ್ಟಣ, ವಿರಾಜಪೇಟೆ, ಕುಶಾಲನಗರ, ಮಡಿಕೇರಿಗೆ, ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೆ ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದಿಂದ ವಿಶೇಷ ಕಾರ್ಯಾಚರಣೆ ಮಾಡಲಾಗುತ್ತದೆ. ವಿಜಯನಗರ, ಜೆ.ಪಿ.ನಗರ, ಜಯನಗರ 4ನೇ ಬ್ಲಾಕ್, ಜಾಲಹಳ್ಳಿ ಕ್ರಾಸ್, ನವರಂಗ್, ಮಲ್ಲೇಶ್ವರ 18ನೇ ಅಡ್ಡ ರಸ್ತೆ, ಕೆಂಗೇರಿ ಉಪನಗರದಿಂದ ಶಿವಮೊಗ್ಗ, ದಾವಣಗೆರೆ, ತಿರುಪತಿ, ಮಂಗಳೂರು, ಕುಂದಾಪುರ, ಶೃಂಗೇರಿ, ಹೊರನಾಡು, ಕುಕ್ಕೆ ಸುಬ್ರಹ್ಮಣ್ಯ, ಧರ್ಮಸ್ಥಳಕ್ಕೆ ಹೆಚ್ಚುವರಿ ಸಾರಿಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ನಾಲ್ಕು ಅಥವಾ ಹೆಚ್ಚು ಪ್ರಯಾಣಿಕರು ಒಟ್ಟಾಗಿ ಮುಂಗಡ ಟಿಕೆಟ್‌ ಕಾಯ್ದಿರಿಸಿದಲ್ಲಿ ಶೇಕಡ 5ರಷ್ಟು ರಿಯಾಯಿತಿ ನೀಡಲಾಗುವುದು. ಹೋಗುವ ಮತ್ತು ಬರುವ ಪ್ರಯಾಣದ ಟಿಕೆಟನ್ನು ಒಟ್ಟಿಗೆ ಕಾಯ್ದಿರಿಸಿದಾಗ, ಬರುವ ಪ್ರಯಾಣ ದರದಲ್ಲಿ ಶೇಕಡ 10ರಷ್ಟು ರಿಯಾಯಿತಿ ನೀಡಲಾಗುವುದು. ಹೆಚ್ಚಿನ ಮಾಹಿತಿಗೆ 080-49596666 ಗೆ ಸಂಪರ್ಕಿಸಬಹುದಾಗಿದೆ. (ವರದಿ: ಎಲ್.ಜಿ)

 

 

 

Leave a Reply

comments

Related Articles

error: