ಕರ್ನಾಟಕ

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಗೌರವ ಪ್ರಶಸ್ತಿ ಪ್ರದಾನ

ಮಡಿಕೇರಿ ಆ.11: ಯಾವುದೇ ಭಾಷೆ ಬಳಕೆ ಇಲ್ಲದಿದ್ದರೆ ನಶಿಸಿ ಹೋಗುವ ಸಾಧ್ಯತೆ ಹೆಚ್ಚಿದೆ. ಆದ್ದರಿಂದ ಮಾತೃ ಭಾಷೆಯಾದ ಅರೆಭಾಷೆ ಸೇರಿದಂತೆ ಹಲವು ಸ್ಥಳೀಯ ಭಾಷೆ, ಜನಪದ ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ಅತ್ಯಗತ್ಯವಾಗಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವರಾದ ರಮಾನಾಥ ರೈ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಗರದ ಕೊಡಗು ಗೌಡ ಸಮಾಜದಲ್ಲಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ 2016-17ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮಾಡಿ ಅವರು ಮಾತನಾಡಿದರು. ರಾಷ್ಟ್ರವು ಸಾವಿರಾರು ಭಾಷೆ, ಜಾತಿ, ಉಪಜಾತಿ, ಜನಾಂಗಗಳು, ಧರ್ಮಗಳನ್ನು ಒಳಗೊಂಡಿದ್ದು, ವಿವಿಧತೆಯಲ್ಲಿ ಏಕತೆಯನ್ನು ಹೊಂದಿದೆ. ಆ ನಿಟ್ಟಿನಲ್ಲಿ ದೇಶಕ್ಕೆ ಮತ್ತೊಂದು ದೇಶ ಹೋಲಿಕೆ ಮಾಡಲು ಆಗದು ಎಂದು ರಮಾನಾಥ ರೈ ಅವರು ಹೇಳಿದರು. ಭಾಷೆ, ಸಂಸ್ಕೃತಿ, ಜನಪದದಿಂದ ಭಾವೈಕ್ಯತೆಯನ್ನು ಕಾಣಬಹುದು. ಕೊಡಗಿನಲ್ಲಿ ಅರೆಭಾಷೆ, ಕೊಡವ, ಬ್ಯಾರಿ, ತುಳು, ಕೊಂಕಣಿ ಮಾತನಾಡುವವರು ಇದ್ದಾರೆ. ಈ ಭಾಷೆಗಳು ಕನ್ನಡ ಭಾಷೆ ಬೆಳವಣಿಗೆಗೆ ಪೂರಕವಾಗಿವೆ. ಜನಪದ ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಅಕಾಡೆಮಿಗಳು ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು. ಜಾತಿ, ಧರ್ಮ, ಭಾಷೆ ಮತ್ತು ಜನಾಂಗ ಉತ್ತಮ ಸಂಬಂಧ ಹೊಂದಲು ಅಕಾಡೆಮಿಗಳು ಕಾರ್ಯನಿರ್ವಹಿಸುತ್ತವೆ. ಇದರಿಂದ ಉತ್ತಮ ಭಾಂದವ್ಯ ಕಾಣಲು ಸಾಧ್ಯ ಎಂದು ಸಚಿವರು ನುಡಿದರು.

ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಅರೆಭಾಷೆ ಅಕಾಡೆಮಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿ ಅರೆಭಾಷೆ ಸಂಸ್ಕೃತಿ, ಸಾಹಿತ್ಯ ಇಡೀ ದೇಶಕ್ಕೆ ಪಸರಿಸುವಂತಾಗಬೇಕು. ಅರೆಭಾಷೆ ಸಮಾಜದವರನ್ನು ಇನ್ನೂ ಹತ್ತಿರಕ್ಕೆ ತರುವಂತಾಗಲು ಕಡಮಕಲ್ಲು ರಸ್ತೆಯಲ್ಲಿ ಓಡಾಡಲು ಅವಕಾಶ ಮಾಡಬೇಕು ಎಂದು ಅವರು ಸಲಹೆ ಮಾಡಿದರು. ದಕ್ಷಿಣ ಕನ್ನಡದ ಸುಳ್ಯ ತಾಲ್ಲೂಕಿನಲ್ಲಿ ಅರೆಭಾಷೆ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಅದರಲ್ಲೂ ಸುಬ್ರಹ್ಮಣ್ಯ, ಗುತ್ತಿಗಾರು ಭಾಗದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಅವರ ಓಡಾಟಕ್ಕೆ ಸಾರಿಗೆ ಸಂಪರ್ಕ ಕಲ್ಪಿಸಬೇಕು ಎಂದು ಅವರು ಸಚಿವರಲ್ಲಿ ಗಮನಸೆಳೆದರು. ಕಡಮಕಲ್ಲು ರಸ್ತೆ ಸಂಬಂಧಿಸಿದಂತೆ ಮಧ್ಯೆ ಪ್ರವೇಶಿಸಿ ಮಾತನಾಡಿದ ರಮಾನಾಥ ರೈ ಅವರು ಫಾರೆಸ್ಟ್ ಕನ್ಸರ್‍ವೇಟಿವ್ ಕಾಯ್ದೆಯಡಿ ಅರ್ಜಿ ಸಲ್ಲಿಸುವಂತೆ ಅವರು ಸಲಹೆ ಮಾಡಿದರು. ರಾಜ್ಯದಲ್ಲಿ ಶೇ.33 ರಷ್ಟು ಅರಣ್ಯವಿರಬೇಕು. ಆದರೆ ಕನಿಷ್ಠ ಶೇ.22 ರಷ್ಟು ಮಾತ್ರ ಅರಣ್ಯವಿದೆ. ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತಿರುವುದಕ್ಕೆ ಅರಣ್ಯ ಕಡಿಮೆಯಾಗುತ್ತಿರುವುದೇ ಕಾರಣ, ಆದ್ದರಿಂದ ಅರಣ್ಯ ಸಂರಕ್ಷಣೆ ಮಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಅರಣ್ಯವನ್ನು ಸಂರಕ್ಷಣೆ ಮಾಡುವುದರ ಜೊತೆಗೆ ಅರಣ್ಯೇತರ ಉದ್ದೇಶಕ್ಕಾಗಿ ಜಾಗ ಕೊಡಲು ಅವಕಾಶವಿದ್ದು, ಅದರಲ್ಲಿ ಅರ್ಜಿ ಸಲ್ಲಿಸಬೇಕಿದೆ ಎಂದು ಸಚಿವರು ಸಲಹೆ ಮಾಡಿದರು.

ಶಕ್ತಿ ದಿನಪತ್ರಿಕೆಯ ಪ್ರದಾನ ಸಂಪಾದಕರಾದ ಜಿ.ರಾಜೇಂದ್ರ ಅವರು ಮಾತನಾಡಿ ಭಾಷೆ ಮತ್ತು ಸಂಸ್ಕೃತಿ ಪ್ರತಿಯೊಬ್ಬರನ್ನು ಬೆಸೆಯುವ ಮಾಧ್ಯಮವಾಗಿದೆ. ಮಾತೃ ಭಾಷೆಯನ್ನು ಉಳಿಸಿ ಬೆಳೆಸಿಕೊಂಡು ಹೋಗಲು ಇಂತಹ ಉತ್ತೇಜನ ಕಾರ್ಯಕ್ರಮಗಳು ಅಗತ್ಯ ಎಂದು ಅವರು ಹೇಳಿದರು. ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಕೊಲ್ಯದ ಗಿರೀಶ್ ಅವರು ಮಾತನಾಡಿದರು. ಎಸ್.ಐ.ಭಾವಿಕಟ್ಟಿ ಅವರು ಪ್ರಶಸ್ತಿ ಪ್ರಧಾನ ಭಾಷಣ ಮಾಡಿದರು. ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷರಾದ ಪದ್ಮಿನಿ ಪೊನ್ನಪ್ಪ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರಾದ ಲೋಕೇಶ್ ಸಾಗರ್, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷರಾದ ಅಜ್ಜಮಾಡ ರಮೇಶ್ ಕುಟ್ಟಪ್ಪ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷರಾದ ಸೂರ್ತಲೆ ಸೋಮಣ್ಣ, ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಇತರರು ಇದ್ದರು.

ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ 2016-17ನೇ ಸಾಲಿನ ಗೌರವ ಪ್ರಶಸ್ತಿ ಪ್ರದಾನವನ್ನು ಡಾ.ಪುರುಷೋತ್ತಮ ಬಿಲಿಮಲೆ(ಅರೆಭಾಷೆ ಜನಪದ ಸಂಶೋಧನೆ), ಕುಲ್ಲಚನ ಕಾರ್ಯಪ್ಪ(ಅರೆಭಾಷೆ ಜನಪದ ಸಾಹಿತ್ಯ), ಎಂ.ಜಿ.ಕಾವೇರಮ್ಮ(ಅರೆಭಾಷೆ ಸಾಹಿತ್ಯ), ಅಮ್ಮಾಜೀರ ಪೊನ್ನಪ್ಪ(ಅರೆಭಾಷೆ ಸಂಗೀತ), ಕೇಪು ಅಜಿಲ(ಅರೆಭಾಷೆ ಜನಪದ ಸಂಸ್ಕೃತಿ) ಹಾಗೂ ಪಟ್ಟಡ ಪ್ರಭಾಕರ(ಅರೆಭಾಷೆ ಸಾಹಿತ್ಯ). ಅರೆಭಾಷೆಯ ಪುಸ್ತಕ ಬಿಡುಗಡೆ ಮಾಡಲಾಯಿತು. ಸಂಸ್ಕೃತಿ, ಸಂಪತ್ತು(ಅರೆಭಾಷೆ ಸಂಸ್ಕøತಿ ಪರಿಚಯ), ರುಚಿ(ಅರೆಭಾಷೆ ಸಂಪ್ರದಾಯ, ಅಡುಗೆ, ಅನುಭವ ಧಾರೆ, ಅರೆಭಾಷೆ ಕವನ ಸಂಕಲನ(ಹುದ್ದೆಟ್ಟಿ ಭವಾನಿ ಶಂಕರ್) ಬೆಳ್ಳಿ ಚುಕ್ಕೆಗ(ಅರೆಭಾಷೆ ನಾಟಕ ಸಂಕಲನ) ಬೈತಡ್ಕ ಜಾನಕಿ ಬೆಳ್ಯಪ್ಪ(ಹಿಂಗಾರ 7ನೇ ಆವೃತ್ತಿ ) ಪುಸ್ತಕ ಬಿಡುಗಡೆ ಮಾಡಲಾಯಿತು.   (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: