ಪ್ರಮುಖ ಸುದ್ದಿಮೈಸೂರು

ಇಬ್ರಾಹಿಂಗೆ ಸಿದ್ದರಾಮಯ್ಯ ಟಾಂಗ್: ಕೆಲವರನ್ನು ತೃಪ್ತಿಪಡಿಸುವುದು ಅಸಾಧ್ಯವೆಂದ ಸಿಎಂ

ಕೆಲವರಿಗೆ ಎಷ್ಟು ಮಾಡಿದರೂ ತೃಪ್ತಿ ಎಂಬುದು ಇಲ್ಲ. ಅವರಿಗೆ ಯಾವಾಗಲೂ ಅತೃಪ್ತಿಯೇ ಎಂದು ಸಿದ್ದರಾಮಯ್ಯ ಅವರು ಸಿ.ಎಂ. ಇಬ್ರಾಹಿಂಗೆ ನೇರವಾಗಿ ತಿರುಗೇಟು ನೀಡಿದ್ದಾರೆ. ಸಿದ್ದರಾಮಯ್ಯ ಅವರು ನಿರೀಕ್ಷಿತ ಮಟ್ಟದಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಇತ್ತೀಚಿಗೆ ರಾಜ್ಯ ಯೋಜನಾ ಮಂಡಳಿ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಮುಖ್ಯಮಂತ್ರಿ ಕಾರ್ಯವೈಖರಿ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಇದಕ್ಕೆ ಸಿದ್ದರಾಮಯ್ಯ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿರುವ ತಮ್ಮ ನಿವಾಸದ ಬಳಿ ಜನತಾದರ್ಶನ ನಡೆಸಿ ಮಾತನಾಡಿದರು. ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ ನೂರಕ್ಕೂ ಹೆಚ್ಚು ಮಂದಿ ಅಹವಾಲುಗಳನ್ನು ಸಲ್ಲಿಸಿದರು.

ಜನತಾ ದರ್ಶನ ನಡೆಯುತ್ತಿದ್ದ ವೇಳೆ ಫಾಲ್ಕನ್ ಟೈರ್ಸ್ ಕಾರ್ಖಾನೆ ನೌಕರರು ಪ್ರತಿಭಟನೆ ನಡೆಸಿದರು. ಕಾರ್ಖಾನೆಯ ಉಳಿವಿಗಾಗಿ ಪ್ರತಿಭಟನೆ ನಡೆಸಿದ ಕಾರ್ಮಿಕರು ಕಣ್ಣೀರು ಹಾಕಿದರು. ಈ ಸಮಸ್ಯೆಯನ್ನು ಬಗೆಹರಿಸುವುದಾಗಿ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.

ಫಾಲ್ಕನ್ ಟೈರ್ಸ್ ಕಾರ್ಖಾನೆಗೆ ಬೀಗ ಮುದ್ರೆ ಹಾಕಲಾಗಿದ್ದು, ಕಳೆದ ಹಲವಾರು ತಿಂಗಳಿನಿಂದ ಕೆಲಸವಿಲ್ಲದೆ ಕಾರ್ಮಿಕರು ತೊಂದರೆಗೆ ಸಿಲುಕಿದ್ದಾರೆ. ಎರಡು ದಿನಗಳ ಹಿಂದೆ ನೌಕರರೊಬ್ಬರು ಕಾರ್ಖಾನೆ ಆವರಣದಲ್ಲಿ ಆತ್ಮಹತ್ಯೆಗೂ ಯತ್ನಿಸಿದ್ದರು.

ಮಹಾದಾಯಿ ನದಿ ನೀರು ಹಂಚಿಕೆ ವಿಚಾರವಾಗಿ ನಿಗದಿಯಾಗಿದ್ದ ಮೂರು ರಾಜ್ಯಗಳ ಮುಖ್ಯಮಂತ್ರಿಗಳ ಸಭೆಯನ್ನು ಮುಂದೂಡಲಾಗಿದ್ದು, ಮುಂದಿನ ಸಭೆಯ ದಿನಾಂಕ ನಿಗದಿಯಾಗಿಲ್ಲ. ನಾನು ಮುಂದಿನ ದಿನಾಂಕ ನಿಗದಿ ಮಾಡಲು ಸಾಧ್ಯವಿಲ್ಲ. ನಾನೇ ಪತ್ರ ಬರೆದಿರುವ ಕಾರಣ ಯಾವತ್ತು ಸಭೆ ಕರೆದರೂ ಹೋಗುತ್ತೇನೆ. ಗೋವಾ ಸಿಎಂ ಗೈರಾಗುತ್ತಾರೆಂದು ಮಾಧ್ಯಮದಿಂದ ತಿಳಿದುಕೊಂಡೆ. ಅವರ ಜೊತೆ ಮಾತನಾಡುವ ಪ್ರಯತ್ನ ಮಾಡುತ್ತೇನೆ. ಮುಂದಿನ ಸಭೆಯನ್ನು ಎಲ್ಲಿ ನಿಗದಿಪಡಿಸಿದರೂ ನಾನು ಅಲ್ಲಿಗೆ ತೆರಳುತ್ತೇನೆ ಎಂದು ಸಿದ್ದರಾಮಯ್ಯ ಅವರು ಹೇಳಿದರು.

ರಾಜ್ಯದಲ್ಲಾಗಿರುವ ಬೆಳೆ ನಷ್ಟದ ಬಗ್ಗೆ ಕಂದಾಯ ಸಚಿವರೇ ಸ್ವತಃ ದೆಹಲಿಗೆ ಕೇಂದ್ರಕ್ಕೆ ವರದಿ ಸಲ್ಲಿಸಲಿದ್ದಾರೆ. ರಾಜ್ಯದ ಪೊಲೀಸರ ವೇತನ ಪರಿಷ್ಕರಣೆ ಬಗ್ಗೆ ರಾಘವೇಂದ್ರ ಔರಾದ್ಕರ್ ಸಮಿತಿ ವರದಿ ಸಿಕ್ಕಿದೆ. ಪೊಲೀಸರ ಎಲ್ಲ ಅಹವಾಲುಗಳನ್ನು ಆಲಿಸಿ ವರದಿಯನ್ನು ಸಿದ್ಧಪಡಿಸಿದ್ದಾರೆ. ಇತರ ರಾಜ್ಯಗಳ ವೇತನ ಪರಿಷ್ಕರಣೆ ನೋಡಿ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

 

Leave a Reply

comments

Related Articles

error: