ಕರ್ನಾಟಕಪ್ರಮುಖ ಸುದ್ದಿ

ಚುನಾವಣಾ ಯುದ್ಧದಲ್ಲಿ ಜಯಭೇರಿ ಬಾರಿಸಲು ಕಾರ್ಯಕರ್ತರು ಸೈನಿಕರಂತೆ ಹೋರಾಟ ನಡೆಸಬೇಕು : ಅಮಿತ್ ಷಾ

ರಾಜ್ಯ(ಬೆಂಗಳೂರು)ಆ.12;-  ಕರ್ನಾಟಕದಲ್ಲಿ ‘ಕೇಸರಿ ಪತಾಕೆ’ಯನ್ನು ಮತ್ತೊಮ್ಮೆ ಹಾರಿಸಲು ದೃಢ ಸಂಕಲ್ಪ ಮಾಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, 2018 ರಲ್ಲಿ ನಡೆಯಲಿರುವ ಚುನಾವಣಾ ಯುದ್ಧದಲ್ಲಿ ಜಯಭೇರಿ ಬಾರಿಸಲು ಸೈನಿಕರಂತೆ ಹೋರಾಟ ಮಾಡಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡುವ ಮೂಲಕ ‘ಪಾಂಚಜನ್ಯ’ ಮೊಳಗಿಸಿದರು.
ಚುನಾವಣಾ ರಣತಂತ್ರ ರೂಪಿಸುವಲ್ಲಿ ‘ಅಭಿನವ ಚಾಣಕ್ಯ’ ಎಂಬ ಖ್ಯಾತಿಗೆ ಪಾತ್ರರಾಗಿರುವ ಅಮಿತ್ ಷಾ, ಮೂರು ದಿನಗಳ ರಾಜ್ಯ ಭೇಟಿಗಾಗಿ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿದಾಗ ಸಮೀಪದ ಸಾದಹಳ್ಳಿ ಟೋಲ್‌ಗೇಟ್ ಬಳಿ ಸೇರಿದ್ದ ಕಾರ್ಯಕರ್ತರ ಹರ್ಷೋದ್ಗಾರಗಳ ನಡುವೆ ಭಾಷಣ ಮಾಡಿ, ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪ್ರತಿಯೊಬ್ಬ ಕಾರ್ಯಕರ್ತನೂ ಸಿಪಾಯಿಗಳಂತೆ ಕೆಲಸ ಮಾಡಬೇಕು. ಬಿಜೆಪಿ ಸರ್ಕಾರವನ್ನು ರಾಜ್ಯದಲ್ಲಿ ಪ್ರತಿಷ್ಠಾಪಿಸಬೇಕು. ರಾಜ್ಯದಲ್ಲಿನ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಬೇಕು ಎಂದು ಕರೆ ನೀಡಿದರು. ಕರ್ನಾಟಕದಲ್ಲಿ ಮುಂದಿನ ಸರ್ಕಾರ ಬಿಜೆಪಿಯದ್ದೇ ಎಂಬುದನ್ನು ಮನವರಿಕೆ ಮಾ‌ಡಿಕೊಡ‌ಲು ತಾವು ಬಂದಿರುವುದಾಗಿ ಹೇಳಿದ ಅವರು, ಬರುವ ಫೆಬ್ರವರಿ, ಮಾರ್ಚ್ ತಿಂಗಳಲ್ಲಿ ಪ್ರಧಾನಿ ನರೇಂದ್ರಮೋದಿ ಅವರ ವಿಜಯ ರಥಯಾತ್ರೆ ದಕ್ಷಿಣದ ಕಡೆಗೆ ಮುಖ ಮಾಡಲಿದೆ ಎಂದು ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು ಭಾವಿ ಮುಖ್ಯಮಂತ್ರಿ ಎಂದು ಅಮಿತ್ ಷಾ ಮಾತು ಆರಂಭಿಸಿದಾಗ ಕಾರ್ಯಕರ್ತರ ಜೈಕಾರ ಘೋಷಣೆ ಮುಗಿಲು ಮುಟ್ಟಿತ್ತು.
ಕಳೆದ 5 ವರ್ಷಗಳಿಂದ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಲು ಜನ ತೀರ್ಮಾನಿಸಿದ್ದಾರೆ. ಈ ವಾತಾವರಣವನ್ನು ಸದ್ಬಳಕೆ ಮಾಡಿಕೊಂಡು ಪಕ್ಷದ ಸಂಘಟನೆಗೆ ಪ್ರತಿಯೊಬ್ಬರೂ ಕಾಯಾ ವಾಚಾ ಮನಸಾ ಶ್ರಮಿಸಬೇಕು ಎಂದು ಕಿವಿಮಾತು ಹೇಳಿದರು.
ಪಕ್ಷವನ್ನು ಅಧಿಕಾರಕ್ಕೆ ತರಲು ಇಂದಿನಿಂದಲೇ ಕಾರ್ಯಕರ್ತರು ಸಜ್ಜಾಗಬೇಕು. ಕೇಂದ್ರ ಸರ್ಕಾರದ ಸಾಧನೆಗಳನ್ನು ರಾಜ್ಯದ ಮತದಾರರಿಗೆ ತಲುಪಿಸುವ ಕೆಲಸ ಮಾಡಬೇಕು ಎಂದು  ಕರೆ ನೀಡಿದರು.
ಯಡಿಯೂರಪ್ಪಮಾತನಾಡಿ  ಅಮಿತ್ ಷಾ  ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮೇಲೆ ಇದೇ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ್ದಾರೆ. ಅವರ ಮಾರ್ಗದರ್ಶನದ ಮೇರೆಗೆ ರಾಜ್ಯದಲ್ಲಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬರಲಿದ್ದೇವೆ ಎಂದರು.
ಕೇಂದ್ರ ಸಚಿವರಾದ ಅನಂತ್ ಕುಮಾರ್, ಡಿ.ವಿ. ಸದಾನಂದಗೌಡ, ವಿಧಾನಸಭೆ ಮತ್ತು ವಿಧಾನ ಪರಿಷತ್ ವಿರೋಧ ಪಕ್ಷಗಳ ನಾಯಕರುಗಳಾದ ಜಗದೀಶ್ ಶೆಟ್ಟರ್, ಕೆ.ಎಸ್. ಈಶ್ವರಪ್ಪ, ಮುಖಂಡರಾದ ಆರ್. ಅಶೋಕ್, ಬಿ.ಎನ್. ಬಚ್ಚೇಗೌಡ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: