ಮೈಸೂರು

ಹೊಸ ಬಡಾವಣೆ ನಿರ್ಮಾಣಗೊಂಡರೂ ಮೂಲಭೂತ ಸೌಲಭ್ಯವಿಲ್ಲವೆಂಬ ಆರೋಪ : ಪ್ರತಿಭಟನೆ

ಮೈಸೂರು,ಆ.12:- ಹುಣಸೂರು ನಗರದ 22 ನೇ ವಾರ್ಡ್‍ನ ಹೊಸ ಮಾರುತಿ ಬಡಾವಣೆ ನಿರ್ಮಾಣಗೊಂಡು 30 ವರ್ಷಗಳು ಕಳೆದಿದ್ದರೂ ಸದರಿ ಬಡಾವಣೆಯಲ್ಲಿ ಮೂಲಭೂತ ಸೌಲಭ್ಯವಿಲ್ಲದೆ ಜನತೆ ಸಂಕಷ್ಟ ಅನುಭವಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೂ ನಗರಸಭೆ ಅಧಿಕಾರಿಗಳು ಕೈಕಟ್ಟಿ ಕುಳಿತಿರುವುದನ್ನು ಖಂಡಿಸಿ ಬಡಾವಣೆ ನಿವಾಸಿಗಳು  ನಗರಸಭೆ ಕಛೇರಿ ಮುಂದೆ ಪ್ರತಿಭಟನೆ ನಡೆಸಿದರು.
ಈ ಬಡಾವಣೆಯಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಕುಟುಂಬಗಳು ವಾಸವಿದ್ದು ಕಳೆದ 30 ವರ್ಷಗಳ ಹಿಂದೆ ಪುರಸಭೆ ಕಾರ್ಯಾಲಯದಿಂದ ವಸತಿ ನಿರ್ಮಾಣ ಮಾಡಲು ಅನುಮತಿ ನೀಡಿದ್ದು,ವಸತಿ ಫಲಾನುಭವಿಗಳಿಂದ ಪುರಸಭೆ ಕಂದಾಯ ಹಾಗೂ ಇನ್ನಿತರೆ ತೆರಿಗೆಗಳನ್ನು ಪಡೆದಿದ್ದರೂ ಕನಿಷ್ಟ ಮೂಲಭೂತ ಸೌಕರ್ಯಗಳಾದ ರಸ್ತೆ, ಒಳಚರಂಡಿ ಡಾಂಬರೀಕರಣ ಮತ್ತು ರಸ್ತೆ ಸಂಪರ್ಕಗಳನ್ನು ಕಲ್ಪಿಸಿಕೊಟ್ಟಿಲ್ಲ ಎಂದು ದೂರಿದರು. ಒಳಚರಂಡಿ ವ್ಯವಸ್ಥೆ ಇಲ್ಲದೆ ಈ ಪ್ರದೇಶದಲ್ಲಿ ಕೊಳಚೆ ನೀರು ನಿಂತು ಮಾರಣಾಂತಿಕ ಕಾಯಿಲೆಗಳಾದ ಡೆಂಗ್ಯೂ, ಚಿಕನ್‍ಗುನ್ಯಾ ಮುಂತಾದ ಜ್ವರಗಳಿಂದ ಇಲ್ಲಿನ ನಿವಾಸಿಗಳು ನರಕಯಾತನೆ ಅನುಭವಿಸುತ್ತಿದ್ದಾರೆ  ಇಲ್ಲಿ  ಹಂದಿಗಳು ವಾಸಿಸುತ್ತವೆ. ಈ ಬಗ್ಗೆ ಇಲ್ಲಿನ ನಿವಾಸಿಗಳು ಹಲವಾರು ಬಾರಿ ನಗರಸಭೆ ಅಧಿಕರಿಗಳಿಗೆ ಹಾಗೂ ಶಾಸಕರಿಗೆ ದೂರು ಅರ್ಜಿಗಳನ್ನು ಸಲ್ಲಿಸಿದರೂ ಇದರತ್ತ ಯಾರು ಗಮನಹರಿಸದೆ ಇರುವುದನ್ನು ಖಂಡಿಸಿ ಸತ್ಯ ಎಂ.ಎ.ಎಸ್ ಫೌಂಡೇಶನ್ ಹುಣಸೂರು, ಜಯಕರ್ನಾಟಕ ಸಂಘ, ಹುಣಸೂರು ಪ್ರಗತಿಪರ ಚಿಂತಕರು, ಪ್ರಜಾವೇದಿಕೆ ಹಾಗೂ ಸ್ಥಳೀಯ ನಿವಾಸಿಗಳು ಸೇರಿ ನಗರಸಭಾ ಕಾರ್ಯಾಲಯದ ಮುಂದೆ ಪ್ರತಿಭಟನೆ ನಡೆಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಸತ್ಯ ಎಂ.ಎ.ಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ, ಜಯಕರ್ನಾಟಕ ಸಂಘದ ವರಿಷ್ಠ ರಮೇಶ್ ದೊಡ್ಡಹೆಜ್ಜೂರು,ಪ್ರಜಾವೇದಿಕೆ ಜಿಲ್ಲಾಧ್ಯಕ್ಷ ಪಾಂಡುಕುಮಾರ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: