ಮೈಸೂರು

ಬೆಳೆ ಉಳಿವಿಗೆ ನೀರು ಬಿಡಿ: ಸರಕಾರಕ್ಕೆ ರೈತ ಸಂಘ ಒತ್ತಾಯ

ರೈತರು ಬೆಳೆದಿರುವ ಬೆಳೆಯನ್ನು ಉಳಿಸಿಕೊಳ್ಳಲು ಕಾಲುವೆಗಳಿಗೆ ನೀರು ಹರಿಸಿ ಎಂದು ರಾಜ್ಯ ರೈತ ಸಂಘ ಸರಕಾರಕ್ಕೆ ಮನವಿ ಮಾಡಿದೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಬದಲಾಗಪುರ ನಾಗೇಂದ್ರ ಅವರು ಮಾತನಾಡಿ, ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಅರಿಯುವಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡೂ ವಿಫಲವಾಗಿವೆ. ಈಗ ರಾಜ್ಯ ಸರಕಾರವು ರೈತರಿಗೆ ನೀರು ಬಿಡಲು ತೀರ್ಮಾನಿಸಿದ್ದು, ನೀರಿನ ಮಟ್ಟ ಕಡಿಮೆಯಿದ್ದು ಎಲ್ಲ ಗ್ರಾಮಗಳಿಗೂ ನೀರು ಸಿಗುವುದು ಅಸಾಧ್ಯ. ಸರಕಾರವು ಪ್ರತಿದಿನ 1,800 ಕ್ಯೂಸೆಕ್‍ನಂತೆ 10 ದಿನಗಳ ಕಾಳ ನೀರು ಬಿಟ್ಟಲ್ಲಿ ರೈತರಿಗೆ ಉಪಯೋಗವಾಗಲಿದೆ ಎಂದು ಹೇಳಿದರು.

ಈಗಾಗಲೇ ನೀರಿನ ಅಭಾವದಿಂದ ಶೇ. 30ರಷ್ಟು ಬೆಳೆ ನಾಶವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಸರಕಾರವು ನೀರು ಬಿಡಬೇಕು ಮತ್ತು ರೈತರ ಕೃಷಿ ಸಾಲ ಮನ್ನಾ ಮಾಡಬೇಕೆಂದು ಅವರು ಆಗ್ರಹಿಸಿದರು.

ಬೆಳೆನಷ್ಟಕ್ಕೆ ಪರಿಹಾರ ನೀಡಲು ಕೇಂದ್ರ ಮತ್ತು ರಾಜ್ಯ ಸರಕಾರಗಳು ಅವೈಜ್ನಾನಿಕ ಕ್ರಮಗಳನ್ನು ಅನುಸರಿಸುತ್ತಿವೆ. ಪ್ರತಿ ಎಕರೆ ಭತ್ತ ನಾಶಕ್ಕೆ ಸರಕಾರ ಕೇವಲ 5,650 ರು. ನಿಗದಿಪಡಿಸಿದೆ. ಕರ್ನಾಟಕ ಕೃಷಿ ಆಯೋಗವು ಬೆಳೆ ನಾಶಕ್ಕೆ ಸಂಬಂಧಪಟ್ಟಂತೆ ನಷ್ಟದ ಪಟ್ಟಿಯೊಂದನ್ನು ಸಿದ್ಧಪಡಿಸಿದೆ. ಈ ವರದಿಯನ್ನಾಧರಿಸಿ ಸರಕಾರವು ಪರಿಹಾರ ಘೋಷಿಸಬೇಕೆಂದು ನಾಗೇಂದ್ರ ಒತ್ತಾಯಿಸಿದರು.

ರೈತ ನಾಯಕರಾದ ಕೆ.ಎಂ. ಪುಟ್ಟಸ್ವಾಮಿ, ಸರಗೂರು ನಾಗರಾಜ್, ಲೋಕೇಶ್ ರಾಜೇ ಅರಸ್, ಬೆಳಗೊಳ ಸುಬ್ರಹ್ಮಣ್ಯ ಮತ್ತು ಇತರರು ಉಪಸ್ಥಿತರಿದ್ದರು.

Leave a Reply

comments

Related Articles

error: