ಮೈಸೂರು

ಯೋಗಸಾಧಕ ಡಾ.ಬಿ.ಕೆ.ಎಸ್. ಐಯ್ಯಂಗಾರ್ ಯೋಗದ ಮಡಿವಂತಿಕೆ ತೊಡೆದವರು: ಕೆ.ರಘುರಾಮ

ಯೋಗದ ಮಡಿವಂತಿಕೆಯನ್ನು ತೊಡೆದು ವೈಜ್ಞಾನಿಕ ನೆಲೆಗಟ್ಟಿನಲ್ಲಿ ವಿನೂತನ ಪ್ರಯೋಗಗಳ ಮೂಲಕ ಯೋಗವನ್ನು ವಿಶ್ವಕ್ಕೆ ಪರಿಚಯಿಸಿದ ಡಾ.ಬಿ.ಕೆ.ಎಸ್.ಐಯ್ಯಂಗಾರ್ ಮಹಾನ್ ಯೋಗ ಸಾಧಕ ಎಂದು ಹಿರಿಯ ಸಮಾಜ ಸೇವಕ ಕೆ.ರಘುರಾಮ ವಾಜಪೇಯಿ ಸ್ಮರಿಸಿದರು.

ಅವರು, ನಗರದ ಪತ್ರಕರ್ತರ ಭವನದಲ್ಲಿಂದು (ಅ.22) ಹಿಮಾಲಯ ಫೌಂಡೇಶನ್ ವತಿಯಿಂದ ಡಾ.ಬಿ.ಕೆ.ಎಸ್. ಐಯ್ಯಂಗಾರ್ ಕುರಿತಾದ ‘ಯೋಗಭೀಷ್ಮ’ ಕೃತಿ ಬಿಡುಗಡೆಗೊಳಿಸಿ ಮಾತನಾಡಿ, ಯೋಗದಿಂದ ಮಹಿಳೆಯರನ್ನು ದೂರವಿಡಲಾಗಿದ್ದ ಮಡಿವಂತಿಕೆ ಕಾಲದಲ್ಲಿಯೇ  ಮಹಿಳೆಯರಿಗೆ ಯೋಗ ತರಬೇತಿ ನೀಡುವ ಮೂಲಕ ಸಮಾನತೆಯ ಮುನ್ನುಡಿ ಬರೆದರು. ಭಾರತದ ಸನಾತನ ಯೋಗ ವಿದ್ಯೆಯನ್ನು ನೂತನ ಅವಿಷ್ಕಾರದೊಂದಿಗೆ ವಿಶ್ವಕ್ಕೆ ಪಸರಿಸಿದವರು ಡಾ.ಬಿ.ಕೆ.ಎಸ್. ಐಯ್ಯಂಗಾರ್. ಅವರು ಪತಂಜಲಿ ಗುರುವಿನಿಂದ ಪ್ರಾಪ್ತವಾದ ಯೋಗವನ್ನು ಸುಮಾರು 72 ದೇಶಗಳಲ್ಲಿ ಪಸರಿಸಿ ವಿಶ್ವದಾದ್ಯಂತ ಸಂಚರಿಸಿ ಶಿಷ್ಯಕೋಟಿಯನ್ನು ಸಂಪಾದಿಸಿದ್ದಾರೆ. ಮೂಲತಃ ಮೈಸೂರಿನವರಾದರೂ ವಿದೇಶದಲ್ಲೂ ಯೋಗವನ್ನು ಜನಪ್ರಿಯಗೊಳಿಸಿ ದೈಹಿಕ ಹಾಗೂ ಮಾನಸಿಕ ಆರೋಗ್ಯದ ಸಮತೋಲನಕ್ಕೆ ಯೋಗದ ಮಹತ್ವವನ್ನು ಸಾರಿ ಯೋಗಕ್ಕೆ ವೈಜ್ಞಾನಿಕ ಸ್ಪರ್ಶ ನೀಡಿದ್ದರು. ಮನೆಯಲ್ಲಿಯೇ ಲಭಿಸುವ ವಸ್ತುಗಳಿಂದ ವಿನೂತನ ಪ್ರಯೋಗಗಳನ್ನು ನಡೆಸುವ ಮೂಲಕ ಯೋಗಕ್ಕೆ ಆಧುನಿಕತೆ ಟಚ್ ನೀಡಿದರು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮೈಸೂರು ಯೋಗಶಾಲಾ ಸಂಸ್ಥಾಪಕ ಯೋಗಪ್ರಕಾಶ್, ನಗರಪಾಲಿಕೆ ಸದಸ್ಯ ಬಿ.ವಿ.ಮಂಜುನಾಥ್, ಜೆ.ಎಸ್ಎಸ್. ಯೋಗಿಕ್ ಫೌಂಡೇಶನ್ ಸಂಸ್ಥಾಪಕ ಹರಿದ್ವಾರಕಾನಾಥ್, ಕವಿಯತರಿ ಪುಷ್ಪ ಐಯ್ಯಂಗಾರ್ ಹಾಗೂ ಶೃಂಗೇರಿ ಶಾರದಾಂಬ ದೇವಸ್ಥಾನದ ಉಪಾಧ್ಯಕ್ಷ ಎಂ.ಎಲ್.ಕಲ್ಯಾಣ್ ಕುಮಾರ್ ಉಪಸ್ಥಿತರಿದ್ದರು.

Leave a Reply

comments

Related Articles

error: