ಸುದ್ದಿ ಸಂಕ್ಷಿಪ್ತ

ಛಾಯಾಚಿತ್ರ ಸ್ಪರ್ಧೆ : ಸುನಿಲ್ ಶೆಟ್ಟಿ ಪ್ರಥಮ, ಸುಧಾಮ ಪೆರಾಜೆ ದ್ವಿತೀಯ

ಮಡಿಕೇರಿ ಆ.14 : ಕೊಡಗು ಜಿಲ್ಲಾ ಪತ್ರಕರ್ತರ ಸಂಘ ಹಾಗೂ ಕೊಡಗು ಪ್ರೆಸ್‍ಕ್ಲಬ್ ವತಿಯಿಂದ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಅಂಗವಾಗಿ ಸಾರ್ವಜನಿಕರಿಗೆ ಆಯೋಜಿಸಲಾಗಿದ್ದ ‘ಕೊಡಗಿನ ನಿಸರ್ಗ ಸೊಬಗು’ ಛಾಯಾಚಿತ್ರ ಸ್ಪರ್ಧೆಯಲ್ಲಿ ಮಡಿಕೇರಿಯ ಸುನಿಲ್ ಶೆಟ್ಟಿ ಪ್ರಥಮ, ಸುಧಾಮ ಪೆರಾಜೆ ದ್ವಿತೀಯ ಬಹುಮಾನ ಪಡೆದಿದ್ದಾರೆ.

ಮಡಿಕೇರಿಯ ಡೈರಿ ಫಾರಂನ ನಿವಾಸಿ ಕೆ.ಎಂ. ಜಗನ್ನಾಥ್ ಹಾಗೂ ಜಿ.ಎಸ್. ಲೀಲಾ ದಂಪತಿಯ ಪುತ್ರ ಸುನಿಲ್ ಶೆಟ್ಟಿ ಔಷಧಿ ವಿತರಣಾ ವ್ಯವಸ್ಥಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಮಡಿಕೇರಿಯ ಮಂಗಳಾದೇವಿ ನಗರದ ನಿವಾಸಿ ಕೇಶವ್ ಪೆರಾಜೆ ಹಾಗೂ ನಾಗಮ್ಮ ಪೆರಾಜೆ ದಂಪತಿ ಪುತ್ರ ಸುಧಾಮ ಪೆರಾಜೆ ಆಳ್ವಾಸ್ ಕಾಲೇಜಿನಲ್ಲಿ ಇತ್ತೀಚೆಗೆ ಪತ್ರಿಕೋದ್ಯಮ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ. ಈ ಹಿಂದೆ ರಾಜ್ಯ ಮಟ್ಟದ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆದಿದ್ದರು. ಮಡಿಕೇರಿಯ ಮಂಗಳಾದೇವಿ ನಗರದ ನಾಗೇಶ್ ಹಾಗೂ ಗೀತಾ ದಂಪತಿಗಳ ಪುತ್ರ ಜಗದೀಶ್ ಪೂಜಾರಿ ತೃತೀಯ ಬಹುಮಾನ ಪಡೆದಿದ್ದಾರೆ. ಇವರು ಮಡಿಕೇರಿಯಲ್ಲಿ ವಿಡಿಯೋಗ್ರಫರ್ ಆಗಿ ಕೆಲಸ ಮಾಡುತ್ತಿದ್ದಾರೆ. ಭಾಗಮಂಡಲ ಸಮೀಪದ ತಣ್ಣಿಮಾನಿಯ ನಿವಾಸಿ ದೇವಿಪ್ರಸಾದ್ ನಾಲ್ಕನೇ ಬಹುಮಾನ ಪಡೆದಿದ್ದಾರೆ.

ಪ್ರಥಮ ಬಹುಮಾನ 5,000 ರೂಪಾಯಿ ನಗದು ಹಾಗೂ ಪ್ರಶಸ್ತಿ, ದ್ವಿತೀಯ 2,000 ನಗದು ಹಾಗೂ ಪ್ರಶಸ್ತಿ, ತೃತೀಯ 1,000 ನಗದು ಹಾಗೂ ನಾಲ್ಕನೇ ಬಹುಮಾನ ಪಡೆದವರಿಗೆ 500 ನಗದು ಬಹುಮಾನ ನೀಡಲಾಗುತ್ತದೆ. ಆ.20ರಂದು ಮಡಿಕೇರಿಯ ಪತ್ರಿಕಾ ಭವನದಲ್ಲಿ ನಡೆಯುವ ವಿಶ್ವ ಛಾಯಾಗ್ರಾಹಕರ ದಿನಾಚರಣೆಯಲ್ಲಿ ವಿಜೇತರಿಗೆ ಪ್ರಶಸ್ತಿ ವಿತರಣೆಯಾಗಲಿದೆ. ಅಂದು ಪತ್ರಿಕಾ ಹಾಗೂ ದೃಶ್ಯ ಮಾಧ್ಯಮದ ಛಾಯಾಗ್ರಾಹಕರಿಗೆ ಆಯೋಜಿಸಲಾಗಿದ್ದ ಛಾಯಾಚಿತ್ರ ಹಾಗೂ ವಿಡಿಯೋಗ್ರಫಿ ಸ್ಪರ್ಧೆಯ ಫಲಿತಾಂಶ ಬರಲಿದೆ. ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸ್ಪರ್ಧಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬಹುದಾಗಿದೆ ಎಂದು ಪ್ರಧಾನ ಕಾರ್ಯದರ್ಶಿ ವಿಘ್ನೇಶ್ ಎಂ. ಭೂತನಕಾಡು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ವರದಿ: ಕೆಸಿಐ, ಎಲ್.ಜಿ)

Leave a Reply

comments

Related Articles

error: