ಪ್ರಮುಖ ಸುದ್ದಿಮೈಸೂರು

ಪೊಲೀಸರು ಶಾಂತಿ ಸುವ್ಯವಸ್ಥೆ ಕಾಪಾಡಿ, ಶೋಷಿತರಿಗೆ ನ್ಯಾಯ ಒದಗಿಸಬೇಕು: ಸಿಎಂ ಸಿದ್ದರಾಮಯ್ಯ

ಪೊಲೀಸರು ಸಮಾಜದ ರಕ್ಷಕರಾಗಿದ್ದು, ಯಾವುದೇ ರಾಗ, ದ್ವೇಷ, ಅಸೂಯೆ, ಆಸೆ ಆಮಿಷಗಳಿಗೆ ಒಳಗಾಗದೆ ದಕ್ಷತೆ, ಪ್ರಾಮಾಣಿಕತೆ, ನಿಷ್ಠೆಯಿಂದ ಸಂವಿಧಾನ್ಮಕವಾಗಿ ಕೆಲಸ ಮಾಡಿ ಶೋಷಿತರು, ಬಡವರು, ಕೆಳವರ್ಗದವರಿಗೆ ನ್ಯಾಯಕೊಡಿಸಿ. ದುಷ್ಟರನ್ನು ಶಿಕ್ಷಿಸಿ ಸಜ್ಜನ ಸಮಾಜವನ್ನು ನಿರ್ಮಾಣ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.

ಶನಿವಾರ ಕರ್ನಾಟಕ ಪೊಲೀಸ್ ಅಕಾಡೆಮಿಯ 40ನೇ ತಂಡದ ಪ್ರಶಿಕ್ಷಣಾರ್ಥಿ ಉಪ ನಿರೀಕ್ಷಕರ ನಿರ್ಗಮನ ಪಥ ಸಂಚನದ ಗೌರವ ಸ್ವೀಕರಿಸಿ ಬಳಿಕ ಮಾತನಾಡಿದ ಅವರು, ಎಲ್ಲ ಹುದ್ದೆಗಳಿಗಿಂತಲೂ ಪೊಲೀಸ್ ಹುದ್ದೆ ಭಿನ್ನವಾಗಿದ್ದು ಮಾನಸಿಕ ಹಾಗೂ ದೈಹಿಕ ಒತ್ತಡವನ್ನು ಸರಿದೂಗಿಸಿ ಸಮಚಿತ್ತದಿಂದ ಕೆಲಸ ಮಾಡಬೇಕಾಗಿರುವ ಹುದ್ದೆಯಾಗಿದೆ. ಪೊಲೀಸರಿರುವ ಕಡೆ ಸಜ್ಜನರಿರುವುದರಿಂದ ಸಮಾಜದ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿ, ಶಾಂತಿ ಕದಡುವ, ಕೋಮುಗಲಭೆ ಸೃಷ್ಟಿಸುವ ದುಷ್ಟ ಶಕ್ತಿಗಳನ್ನು ಸದೆಬಡಿಯುವ ಕೆಲಸ ಮಾಡಬೇಕು. ಅಪರಾಧಗಳು ಘಟಿಸಿದ ಮೇಲೆ ಕ್ರಮ ಕೈಗೊಳ್ಳುವ ಬದಲು ಅಪರಾಧಗಳೇ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಆವೇಶ, ಆಕ್ರೋಶಗಳಿಗೆ ಒಳಗಾಗದೆ ಆಲೋಚನೆ ವಿವೇಚನೆಯಿಂದ ಕರ್ತವ್ಯ ನಿರ್ವಹಿಸಬೇಕು. ಆತ್ಮಸಾಕ್ಷಿಗೆ ಅನುಗುಣವಾಗಿ, ಜನಸ್ನೇಹಿಯಾಗಿ ನೊಂದವರು, ಶೋಷಿತರು, ತುಳಿತಕ್ಕೆ ಒಳಗಾದವರ ಕಣ್ಣೀರನ್ನು ಒರೆಸುವ ಕೈಗಳು ನಿಮ್ಮದಾಗಬೇಕು ಎಂದು ಸಲಹೆ ನೀಡಿದರು.

ಕರ್ನಾಟಕ ಪೊಲೀಸ್ ಅಕಾಡೆಮಿ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾಗಿದ್ದು, ಭೂತಾನ್, ಪುದುಚೇರಿ ಹಾಗೂ ಮಾಲ್ಡೀವ್ಸ್‌ನ ಪ್ರಶಿಕ್ಷಣಾರ್ಥಿಗಳಿಗೂ ತರಬೇತಿ ನೀಡಿರುವ ಹಿರಿಮೆ, ಗರಿಮೆಯನ್ನು ಹೊಂದಿದೆ. 40ನೇ ತಂಡದ 225 ವಿದ್ಯಾರ್ಥಿಗಳಲ್ಲಿ 44 ಮಹಿಳಾ ಅಭ್ಯರ್ಥಿಗಳಿದ್ದು ಪುರುಷರಿಗಿಂತ ನಾವೇನು ಕಮ್ಮಿ ಇಲ್ಲ ಎಂಬುದನ್ನು ಸಾಬೀತು ಪಡಿಸುತ್ತಿದ್ದಾರೆ. ಇಲ್ಲಿನ ತರಬೇತಿ ಅವಧಿಯಲ್ಲಿ ದೈಹಿಕ ಸದೃಢತೆಗೆ ಹೆಚ್ಚಿನ ಆದ್ಯತೆ ನೀಡಿದ್ದು ಎಲ್ಲರೂ ನೂರಕ್ಕೂ ನೂರು ಸದೃಢರಾಗಿದ್ದೀರಿ. ಇದೇ ಸದೃಢತೆಯನ್ನು ನಿಮ್ಮ ಸೇವಾವಧಿ ಮುಗಿಯುವವರೆಗೂ ಕಾಪಾಡಿಕೊಳ್ಳಿ ಎಂದು ಕಿವಿಮಾತು ಹೇಳಿದರು.

473 ಪೊಲೀಸರ ಸಾವು: ಪೊಲೀಸರಿಗೆ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ತಮ್ಮ ಪ್ರಾಣವನ್ನೂ ಪಣಕ್ಕಿಡಬೇಕಾದ ಸಂದರ್ಭಗಳು ಎದುರಾಗುತ್ತವೆ. ದೇಶದಲ್ಲಿ ಕರ್ತವ್ಯನಿತರಾಗಿದ್ದಾಗ 473 ಪೊಲೀಸರು ಮೃತಪಟ್ಟಿದ್ದು, ರಾಜ್ಯದಲ್ಲಿ 22 ಮಂದಿ ಪೊಲೀಸರು ಅಸುನೀಗಿದ್ದಾರೆ. ಇಂತಹ ಪೊಲೀಸ್ ಇಲಾಖೆಯ ಬಗ್ಗೆ ಸರ್ಕಾರಕ್ಕೆ ವಿಶೇಷವಾದ ಸಹಾನುಭೂತಿ ಇದ್ದು ಪೊಲೀಸರ ಕಲ್ಯಾಣಕ್ಕಾಗಿ ಅನೇಕ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತರಲಾಗಿದೆ. ಕರ್ನಾಟಕ ಪೊಲೀಸ್ ಅಕಾಡೆಮಿಗೆ ಜಾಗದ ಸಮಸ್ಯೆಯಿದ್ದು 3೦೦ ರಿಂದ 5೦೦ ಎಕರೆ ಜಾಗದ ಅವಶ್ಯಕತೆ ಇದೆ ಎಂದು ವಿಫುಲ್‌ಕುಮಾರ್ ತಿಳಿಸಿದ್ದು ಇದರ ಬಗ್ಗೆ ಪರಿಶೀಲನೆ ನಡೆಸಲಾಗುವುದು. ಪೊಲೀಸರಿಗೆ ಬೇಕಾಗುವ ಎಲ್ಲ ಸಹಕಾರ ಸೌಲಭ್ಯಗಳನ್ನು ನೀಡಲು ಸರ್ಕಾರ ಮುಕ್ತ ಮನಸ್ಸಿನಿಂದ ಸಿದ್ಧವಿದ್ದು ಯಾವುದೇ ಪ್ರಚೋದನೆಗಳಿಗೆ ಕಿವಿಗೊಡದೆ ಶಿಸ್ತಿನಿಂದ ಕಾರ್ಯನಿರ್ವಹಿಸಿ ಎಂದು ಹೇಳಿದರು.

ಇದೇ ವೇಳೆ ತರಬೇತಿ ಅವಧಿಯಲ್ಲಿ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ಮೊದಲ ಸ್ಥಾನ ಗಳಿಸಿದವರಿಗೆ ಬಹುಮಾನ ವಿತರಿಸಲಾಯಿತು. ಡ್ರಿಲ್ ವಿಭಾಗ, ಟ್ಯಾಕ್‌ಸ್ಟಿಕ್ಸ್, ಪುರುಷರ ವಿಭಾಗದ ಹೊರಾಂಗಣ ಸ್ಪರ್ಧೆ, ಡಿಜಿ ಹಾಗೂ ಐಜಿ ಕಪ್ ಹಾಗೂ ಪುರುಷರ ವಿಭಾಗದ ಆಲ್‌ರೌಂಡರ್ ಪ್ರಶಸ್ತಿ ಸೇರಿದಂತೆ 10 ಸಾವಿರ ನಗದು ಬಹುಮಾನವನ್ನು ಪಥಸಂಚಲನದ ಕಮಾಂಡರ್ ರಾಜೇಂದ್ರ ಪಿ. ಅವರಿಗೆ ನೀಡಲಾಯಿತು. ಕಾನೂನು ಸುವ್ಯವಸ್ಥೆ, ಅಪರಾಧ ತಡೆ ಮತ್ತು ಸಾರ್ವಜನಿಕ ಆದೇಶ, ಅತ್ಯುತ್ತಮ ಮಹಿಳಾ ಪ್ರಶಿಕ್ಷಣಾರ್ಥಿ, ಪೊಲೀಸ್ ಸಂಘಟನೆ ಮತ್ತು ನಿರ್ವಹಣೆ, ಅತ್ಯುತ್ತಮ ಒಳಾಂಗಣ ಪ್ರಶಿಕ್ಷಣಾರ್ಥಿ ಹಾಗೂ ಗೃಹಸಚಿವರ ಟ್ರೋಫಿ ಸೇರಿದಂತೆ 10 ಸಾವಿರ ನಗದು ಬಹುಮಾನವನ್ನು ಆಶಾ ಎಚ್.ಸಿ. ಅವರಿಗೆ ನೀಡಲಾಯಿತು. ರಾಜುರೆಡ್ಡಿ ಬೆನ್ನೂರು ಅವರಿಗೆ ದೈಹಿಕ ಸದೃಢತೆ ಪ್ರಶಸ್ತಿ, ಶಿವರಾಜು ಎಂ.ಜೆ. ಅವರಿಗೆ ಅಶ್ವರೋಹಣ ಪ್ರಶಸ್ತಿ, ಯೋಗೇಶ್ ಕೆ.ಪಿ. ಅವರಿಗೆ ಅತ್ಯುತ್ತಮ ರೈಫಲ್ ಶೂಟರ್ ಪ್ರಶಸ್ತಿ, ನವೀನ್ ಹೆಚ್.ಎಂ. ಅವರಿಗೆ ಅತ್ಯುತ್ತಮ ರಿವಾಲ್ವರ್ ಶೂಟರ್ ಪ್ರಶಸ್ತಿ, ಮಾನಪ್ಪ ಕುಪ್ಪೇಲ್‌ಪುರ್ ಅವರಿಗೆ ಮಾಹಿತಿ ಸಂಪರ್ಕ ತಂತ್ರಜ್ಞಾನ ಪ್ರಶಸ್ತಿ, ರಂಗಪ್ಪ ಎಚ್. ಅವರಿಗೆ ಆಂತರಿಕ ಮೌಲ್ಯಮಾಪನ ಪ್ರಶಸ್ತಿ, ಪವಿತ್ರಾ ಅವರಿಗೆ ನಿರ್ದೇಶಕರ ಮೌಲ್ಯಮಾಪನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

೮ ತಂಡಗಳ ೨೨೫ ಪ್ರಶಿಕ್ಷಣಾರ್ಥಿಗಳು ಆಕರ್ಷಕ ನಿರ್ಗಮನ ಪಥಸಂಚಲನ ನಡೆಸಿದರು. ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಶಿಕ್ಷಣ ಸಚಿವ ತನ್ವೀರ್‌ಶೇಠ್, ಗೃಹ ಸಚಿವರ ಸಲಹೆಗಾರ ಕೆಂಪಯ್ಯ, ಪೊಲೀಸ್ ಮಹಾ ನಿರ್ದೇಶಕ ಓಂಪ್ರಕಾಶ್, ತರಬೇತಿ ಪೊಲೀಸ್ ಮಹಾನಿರ್ದೇಶಕ ಪ್ರೇಮ್ ಶಂಕರ್ ಮೀನಾ, ತರಬೇತಿ ಆರಕ್ಷಕ ಮಹಾನಿರೀಕ್ಷಕ ಆಲೋಕ್ ಕುಮಾರ್, ಜಿಲ್ಲಾಧಿಕಾರಿ ಡಿ.ರಂದೀಪ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

kpa-cm-2

 

 

 

 

Leave a Reply

comments

Related Articles

error: