ಕರ್ನಾಟಕಪ್ರಮುಖ ಸುದ್ದಿ

ದೆಹಲಿಯಲ್ಲಿ ಜೆಡಿಎಸ್ ಬಂಡಾಯ ಶಾಸಕರು : ಕಾಂಗ್ರೆಸ್ ನಾಯಕರ ಭೇಟಿ ನಿರೀಕ್ಷೆ

ನವದೆಹಲಿ/ಬೆಂಗಳೂರು, ಆ.16 : ಜೆಡಿಎಸ್ ಪಕ್ಷದಿಂದ ಅಮಾನತಾಗಿರುವ ಆರು ಬಂಡಾಯ ಶಾಸಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಕಾಂಗ್ರೆಸ್ ಸೇರುವ ಕುರಿತು ಮಾತನಾಡಲು ಆ ಪಕ್ಷದ ನಾಯಕರ ಭೇಟಿ ಮಾಡುವ ನಿರೀಕ್ಷೆಯಲ್ಲಿದ್ದಾರೆ.

ಜೆಡಿಎಸ್‍ನಿಂದ ಅಮಾನತಾಗಿರುವ ಎಲ್ಲ ಶಾಸಕರು ಕಾಂಗ್ರೆಸ್ ಪಕ್ಷ ಸೇರುತ್ತೇವೆ ಎಂದು ಬೆಂಗಳೂರಿನ ಚಾಮರಾಜಪೇಟೆ ಕ್ಷೇತ್ರದ ಶಾಸಕ ಜಮೀರ್ ಅಹಮದ್ ಖಾನ್ ಕಳೆದ ವಾರ ಹೇಳಿಕೆ ನೀಡಿದ್ದರು. ಕಾಂಗ್ರೆಸ್ ಹೈಕಮಾಂಡ್ ನಾಯಕರ ಜೊತೆ ಮಾತುಕತೆ ನಡೆಸಲು ಶಾಸಕರು ದೆಹಲಿ ತಲುಪಿದ್ದು, ಸಂಜೆ ದಿಗ್ವಿಜಯ್ ಸಿಂಗ್ ಅವರನ್ನು ಭೇಟಿ ಮಾಡಲಿದ್ದಾರೆ.

ನಂತರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನೂ ಬಂಡಾಯ ಶಾಸಕರು ಭೇಟಿ ಮಾಡಲಿದ್ದು, ಬಂಡಾಯ ಶಾಸಕರ ಪಕ್ಷ ಸೇರ್ಪಡೆ ವಿಚಾರದ ಕುರಿತು ಮಾತುಕತೆ ನಡೆಯಲಿದೆ.

ರಾಜ್ಯಸಭೆ ಚುನಾವಣೆಯಲ್ಲಿ ಪಕ್ಷದ ವಿಪ್ ಉಲ್ಲಂಘನೆ ಮಾಡಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದ ಶಾಸಕರನ್ನು ಜೆಡಿಎಸ್‍ನಿಂದ ಅಮಾನತು ಮಾಡಲಾಗಿದೆ. ಜಮೀರ್ ಅಹಮದ್ ಖಾನ್ (ಚಾಮರಾಜಪೇಟೆ), ಅಖಂಡ ಶ್ರೀನಿವಾಸಮೂರ್ತಿ (ಪುಲಿಕೇಶಿ ನಗರ), ಚೆಲುವರಾಯ ಸ್ವಾಮಿ (ನಾಗಮಂಗಲ), ಎಚ್.ಸಿ.ಬಾಲಕೃಷ್ಣ (ಮಾಗಡಿ), ಇಕ್ಬಾಲ್ ಅನ್ಸಾರಿ (ಗಂಗಾವತಿ), ರಮೇಶ್ ಬಂಡಿಸಿದ್ದೇಗೌಡ (ಶ್ರೀರಂಗಪಟ್ಟಣ), ಭೀಮಾ ನಾಯಕ್ (ಹಗರಿಬೊಮ್ಮನಹಳ್ಳಿ) ಜೆಡಿಎಸ್ ನಿಂದ ಅಮಾನತುಗೊಂಡ ಶಾಸಕರಾಗಿದ್ದು, ಈಗ ಕಾಂಗ್ರೆಸ್ ಸೇರುವ ಪ್ರಯತ್ನ ನಡೆಸಿದ್ದಾರೆ.

ಬಂಡಾಯ ಶಾಸಕರಿಗೆ ಮುಖ್ಯಮಂತ್ರಿ ಒತ್ತಾಸೆ !

ಸಂಪುಟದಲ್ಲಿ ಖಾಲಿ ಇರುವ ಸ್ಥಾನಗಳ ಭರ್ತಿ ಮತ್ತು ಗೃಹಖಾತೆ ಹೊಣೆಗಾರಿಕೆ ಯಾರಿಗೆ ಕೊಡುವುದು ಎಂಬುದು ಸೇರಿದಂತೆ ಮುಂದಿನ ಚುನಾವಣೆಯ ಸಂಬಂಧ ಪಕ್ಷದ ಕಾರ್ಯತಂತ್ರಗಳನ್ನು ಚರ್ಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಮುಂತಾದ ನಾಯಕರೂ ಇಂದು ಸಂಜೆ ದೆಹಲಿಗೆ ತೆರಳಲಿದ್ದಾರೆ. ಈ ವೇಳೆ ಜೆಡಿಎಸ್ ಬಂಡಾಯ ಶಾಸಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಂಡು ಅವರಿಗೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಖಾತ್ರಿಪಡಿಸಿಕೊಳ್ಳುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕಮಾಂಡ್ ನಾಯಕರ ಜೊತೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ.

ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರೂ ಈ ವೇಳೆ ಹಾಜರಿರಲಿದ್ದು, ವಿಧಾನಪರಿಷತ್ತಿನ ಒಂದು ಸ್ಥಾನಕ್ಕೆ ಆ.31ರಂದು ಚುನಾವಣೆ ನಡೆಯಲಿದ್ದು, ಅಭ್ಯರ್ಥಿ ಆಯ್ಕೆ ಕುರಿತು ಅಂತಿಮ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಪಕ್ಷದ ಮುಂದಿನ ನಡೆಗಳ ಕುರಿತು ಮಹತ್ವದ ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.

-ಎನ್.ಬಿ.

Leave a Reply

comments

Related Articles

error: