ಪ್ರಮುಖ ಸುದ್ದಿಮೈಸೂರು

ಈ ಗ್ರಾಮ ಗುಳೇ ಹೋಗುವುದಕ್ಕೆ ಫೇಮಸ್: ಇವರ ಗೋಳು ಕೇಳುವವರಿಲ್ಲ

stoty-3ಸಿಎಂ ಸಿದ್ದರಾಮಯ್ಯ ಅವರ ತವರು ಕ್ಷೇತ್ರದಲ್ಲಿ ಜನರ ಗೋಳು ಕೇಳೋರಿಲ್ಲ. ಮಳೆ ಇಲ್ಲದೆ, ಮಾಡಲು ಕೆಲಸವಿಲ್ಲದೆ ಗ್ರಾಮಸ್ಥರು ಊರಿಂದ ಗುಳೇ ಹೊರಟಿದ್ದಾರೆ.

ಒಂದು ಕಾಲದಲ್ಲಿ ಅತಿ ಹೆಚ್ಚು ರೇಷ್ಮೆ ಉತ್ಪಾದನೆಯಾಗುತ್ತಿದ್ದ ಗ್ರಾಮದಲ್ಲೀಗ ಉಳಿದಿರೋದು ಕೇವಲ ಎರಡೇ ಕುಟುಂಬ. ವರ್ಷಕ್ಕೆ ನಾಲ್ಕು ಕುಟುಂಬದಂತೆ ಊರಿನ ಜನರು ಗುಳೇ ಹೋಗಿದ್ದಾರೆ. ಹಿಂದೆ ಜನರಿಂದ ತುಬಿ ತುಳುಕುತ್ತಿದ್ದ ಗ್ರಾಮದಲ್ಲೀಗ ಎಲ್ಲಿ ಕಣ್ಣಾಡಿಸಿದರೂ ಜನರ ಸುಳಿವಿಲ್ಲ.story-4

ಇದು ಸಿಎಂ ಪ್ರತಿನಿಧಿಸುವ ಕ್ಷೇತ್ರ: ಇದು ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಅರಳಿಕಟ್ಟೆ ಹುಂಡಿ ಗ್ರಾಮದ ದುಸ್ಥಿತಿ. ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿನಿಧಿಸುವ ವರುಣಾ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗ್ರಾಮವಾಗಿದೆ. ವಿಪರ್ಯಾಸವೆಂದರೆ ಇಲ್ಲಿನ ಜನರು ತಾವು ಹುಟ್ಟಿ ಬೆಳೆದ ಊರು, ಸ್ವಂತ ಮನೆಯನ್ನೇ ಖಾಲಿ ಮಾಡಿ ನಗರಕ್ಕೆ ವಲಸೆ ಹೋಗುತ್ತಿದ್ದಾರೆ. ಇದಕ್ಕೆ ಕಾರಣ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಗ್ರಾಮದಲ್ಲಿ ಜನರಿದ್ದಾರೆ ಎಂಬುದನ್ನು ಮರೆತು ಸಂಪೂರ್ಣ ನಿರ್ಲಕ್ಷಿಸಿರುವುದು. ಯಾವುದೇ ಮೂಲ ಸೌಲಭ್ಯ, ನೌಕರಿ ಇಲ್ಲದೆ ಜೀವನ ನಡೆಸುವುದು ದುಸ್ತರವಾಗಿ ಹಳ್ಳಿ ಬಿಟ್ಟು ಪಟ್ಟಣ ಸೇರುತ್ತಿದ್ದಾರೆ.

ಸ್ಥಳೀಯ ಮುಖಂಡರಾದ ದ್ಯಾವನಾಯಕ ಅವರು ‘ಸಿಟಿಟುಡೆ’ಯೊಂದಿಗೆ ಮಾತನಾಡಿ, ಈ ಗ್ರಾಮದಲ್ಲಿ ಹೆಚ್ಚಾಗಿ ರೇಷ್ಮೆ ಬೆಳೆಯುತ್ತಿದ್ದರು. ರೇಷ್ಮೆ ಬೆಳೆಗೆ ಈ ಗ್ರಾಮ ಹೆಸರುವಾಸಿಯಾಗಿತ್ತು. ಆದರೆ ಈಗ ಗುಳೇ ಹೋಗಲು ಫೇಮಸ್ ಆಗಿದೆ. ಸರ್ಕಾರ ಇತ್ತ ಗಮನ ವಹಿಸಿ ಇಲ್ಲಿನ ಸಮಸ್ಯೆಗೆ ಸ್ಪಂದಿಸಬೇಕಿದೆ. ಇಲ್ಲವಾದರೆ ಮುಂದೆ ಸರ್ಕಾರಕ್ಕೆ ಜನ ಸರಿಯಾಗಿ ಬುದ್ಧಿ ಕಲಿಸುತ್ತಾರೆ. ಇರೋದು ಮೂರು ಮತ್ತೊಂದು ಮನೆ. ಅವರಿಗೆ ಸರಿಯಾಗಿ ಸ್ಪಂದಿಸಿ ಗುಳೆ ಹೋದವರ ಬಗ್ಗೆ ಮಾಹಿತಿ ಕಲೆ ಹಾಕಬೇಕಿದೆ ಎಂದು ಹೇಳಿದ್ದಾರೆ.

ಬಿಕೋ ಎನ್ನುತ್ತಿರುವ ಗ್ರಾಮ: ಗ್ರಾಮದಲ್ಲಿ ಸದ್ಯ ಇರೋದು ಒಂದೇ ಬೊರ್‌ವೇಲ್, ಒಂದು ನಲ್ಲಿ. ಸುಮಾರು 50ಕ್ಕೂ ಹೆಚ್ಚು ಕುಟುಂಬಗಳಿದ್ದ ಗ್ರಾಮ ಇಂದು ಜನರಿಲ್ಲದೆ ಬಿಕೋ ಎನ್ನುತ್ತಿದೆ. ಎತ್ತ ನೋಡಿದರೂ ಬೀಗ ಜಡಿದ ಮನೆಗಳು, ಬೀಳುವ ಹಂತ ತಲುಪಿದ ಕಟ್ಟಡಗಳು. ಹೆಸರಿಗೆ ಮಾತ್ರ ಪ್ರಧಾನಮಂತ್ರಿ ಗ್ರಾಮಸಡಕ್ ಯೋಜನೆಯ ಬೋರ್ಡ್‍ಗಳು ಮಾತ್ರ ರಾರಾಜಿಸುತ್ತಿವೆ. ಯೋಜನೆಯ ಹೆಸರು ತಿಳಿಯದ ಜನರು ಮಾತ್ರ ಹಳ್ಳಿಯಲ್ಲಿ ವಾಸ ಮಾಡುತ್ತಾ, ಜನರೊಂದಿಗೆ ಗ್ರಾಮದ ಪ್ರಾಣಿಗಳೂ ಸಹ ವಲಸೆ ಹೋಗುತ್ತಾ ಅರಳಿಕಟ್ಟೆ ಹುಂಡಿಗೆ ಟಾಟಾ ಮಾಡಿವೆ.

story-1

“ಸರ್, ಅರಳಿಕಟ್ಟೆ ಹುಂಡಿ ಜನರು 5 ವರ್ಷದಿಂದ ಹೀಗೆ ಗುಳೇ ಹೋಗುತ್ತಿದ್ದಾರೆ. ಸರ್ಕಾರದಿಂದ ಇಲ್ಲಿ ಬೋರ್ಡ್ ಗಳನ್ನು ಮಾತ್ರ ಹಾಕಿದ್ದಾರೆ. ಆದರೆ ಯಾವುದೇ ರೀತಿಯ ಯೋಜನೆ ಇಲ್ಲಿನವರಿಗೆ ಸಿಕ್ಕಿಲ್ಲ. ಹಾಗಾಗಿ ಇಲ್ಲಿನವರು ಎಲ್ಲಿ ಹೋದರು ಎಂಬುದೇ ಇದೀಗ ಪ್ರಶ್ನೆಯಾಗಿದೆ. ಇದು ನಮ್ಮೂರಿಗೆ ಆಗದಿರಲಿ ಎಂಬುದೇ ನಮ್ಮ ಕಳಕಳಿ” ಎಂದು ಅರಳಿಕಟ್ಟೆಹುಂಡಿ ಗ್ರಾಮದ ಪಕ್ಕದ ಗ್ರಾಮಸ್ಥ ಉಮೇಶ್ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಾಣಿ, ಪಕ್ಷಿಗಳ ಓಡಾಟ: ಸದ್ಯ ಗ್ರಾಮದಲ್ಲಿ ಜನರ ಬದಲು ಬೆರಳೆಣಿಕೆಯ ನಾಯಿ, ಪಕ್ಷಿಗಳು ಮಾತ್ರ ಕಾಣಲು ಸಿಗುತ್ತಿವೆ. ಮುಂದೆ ಅವು ಕೂಡ ಮರೆಯಾಗಿ ಗ್ರಾಮದಲ್ಲಿ ಕೇವಲ ಸರಕಾರ ಹಾಕಿರುವ ಬೋರ್ಡ್‍ಗಳಷ್ಟೇ ರಾರಾಜಿಸುವ ದುಸ್ಥಿತಿ ಉಂಟಾಗಲಿದೆ. ಸಿಎಂ ತವರು ಜಿಲ್ಲೆಯಲ್ಲಿ ಈ ರೀತಿಯ ಅವ್ಯವಸ್ಥೆ ಉಂಟಾಗಿರುವುದು ಮಾತ್ರ ವಿಪರ್ಯಾಸವೇ ಸರಿ. ಇನ್ನಾದರೂ, ಸರಕಾರ ಎಚ್ಚೆತ್ತು ಅರಳಿಕಟ್ಟೆ ಹುಂಡಿ ಗ್ರಾಮದ ಜನರ ಸಮಸ್ಯೆ ಆಲಿಸಿ, ಪ್ರಾಣಿ, ಪಕ್ಷಿಗಳು ಮಾತ್ರವಲ್ಲದೆ ಜನರು ವಾಸಿಸುವಂತಾಗಲಿ.

-ಸುರೇಶ್ ಎನ್.

Leave a Reply

comments

Related Articles

error: