ಸುದ್ದಿ ಸಂಕ್ಷಿಪ್ತ

ಕಲೆ, ಸಂಸ್ಕೃತಿ ಉಳಿಸಿ: ಟಿ. ಮಹದೇವಸ್ವಾಮಿ

ಭಾರತೀಯ ಗ್ರಾಮೀಣ ಶೈಕ್ಷಣಿಕ ಅಭಿವೃದ್ಧಿ ಹಾಗೂ ಆವಿಷ್ಕಾರಿ ತಂತ್ರಜ್ಞಾನ ಕೇಂದ್ರ (ಕ್ರೆಡಿಟ್- ಐ) ಸಂಸ್ಥೆಯ 10 ನೇ ವರ್ಷದ ಸಾರ್ಥಕ ಸೇವೆಯ ಸಂಭ್ರಮಾಚರಣೆಯ ಪ್ರಯುಕ್ತ ಅಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆಯ ಸಹಯೋಗದೊಡನೆ ಅ.22 ರಂದು ಜೆ.ಎಲ್.ಬಿ. ರಸ್ತೆಯ ರೋಟರಿ ಶಾಲೆಯ ಸಭಾಂಗಣದಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಮಟ್ಟದ ‘ಜಾನಪದ ಗೀತೆ’ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.

ವಂಗೀಪುರ ಮಠದ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ ಅವರ ದಿವ್ಯಸಾನಿಧ್ಯದಲ್ಲಿ ಅಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆ ಅಧ್ಯಕ್ಷರಾದ ಟಿ. ಮಹದೇವಸ್ವಾಮಿ ಅವರು ಉದ್ಘಾಟಿಸಿ ಮಾತನಾಡಿ, “ಇತ್ತೀಚಿನ ದಿನಗಳಲ್ಲಿ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುವವರ ಸಂಖ್ಯೆ ಕಡಿಮೆಯಾಗಿದೆ. ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಂತಹ ಕಾರ್ಯ ಮಾಡಬೇಕು. ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪುವಂತಹ ಇಂತಹ ಕಾರ್ಯಕ್ರಮಗಳನ್ನು ಕ್ರೆಡಿಟ್-ಐ ಸಂಸ್ಥೆ ಮಾಡುತ್ತಿರುವುದು ತುಂಬಾ ಸಂತೋಷದ ವಿಚಾರ” ಎಂದು ಹರ್ಷ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪ್ರಾಧ್ಯಾಪಕಿ ಮತ್ತು ಹಿರಿಯ ಸಲಹೆಗಾರ್ತಿ ವಸಂತಮ್ಮ ಅವರು ಮಾತನಾಡಿ, “ಇಂದು ಚಲನಚಿತ್ರಗಳು ಮಕ್ಕಳ ಮೇಲೆ ತುಂಬಾ ಪ್ರಭಾವ ಬೀರುತ್ತಿವೆ. ಇದರಿಂದಾಗಿ ಜಾನಪದ ಸೊಗಡು ಕಣ್ಮರೆಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಎನ್ಎಸ್ಎಸ್ ಸಂಸ್ಥೆಯು ಸುಪ್ತ ಪ್ರತಿಭೆಗಳನ್ನು ಹೊರತರುವಲ್ಲಿ ಉತ್ತಮ ಕಾರ್ಯ ನಿರ್ವಹಿಸುತ್ತಿದೆ” ಎಂದು ಹೇಳಿದರು.

ಕಾರ್ಯಕ್ರಮದ ನಂತರ ನಡೆದ ಜಾನಪದ ಗೀತೆ ಸ್ಪರ್ಧೆಯಲ್ಲಿ 4 ಜಿಲ್ಲೆಗಳ 54 ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ನಂತರ ಎನ್ಎಸ್ಎಸ್ ಗೆಳೆಯರ ಬಳಗದಿಂದ ಎನ್ಎಸ್ಎಸ್ ಭೀಷ್ಮ ಎಂದೇ ಖ್ಯಾತರಾಗಿರುವ ಪ್ರೊ. ಬಿ.ಕೆ. ಶಿವಣ್ಣ ಅವರಿಗೆ ಗುರುವಂದನೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಮಾಜ ಸೇವಕ ಕೆ. ರಘುರಾಂ, ಜೀನಿಯಸ್ ಕಾಲೇಜಿನ ಪ್ರಾಂಶುಪಾಲೆ ಸುರೇಖ ಪ್ರಭು ಇನ್ನಿತರರು ಹಾಜರಿದ್ದರು.

Leave a Reply

comments

Related Articles

error: