ಕರ್ನಾಟಕಪ್ರಮುಖ ಸುದ್ದಿ

ಶ್ರವಣಬೆಳಗೊಳದ ಕಲ್ಯಾಣಿ ಸ್ವಚ್ಛತಾ ಕಾಮಗಾರಿಗೆ ಸಚಿವ ಎ.ಮಂಜು ಚಾಲನೆ

ರಾಜ್ಯ(ಹಾಸನ)ಆ.16:-  ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಮಹಾಮಸ್ತಕಾಭಿಷೇಕ ಮಹೋತ್ಸವ-2018 ರ ರಾಜ್ಯ ಸಮಿತಿ ಅಧ್ಯಕ್ಷ ಎ.ಮಂಜು ಬುಧವಾರ ಶ್ರವಣಬೆಳಗೊಳದ ಕಲ್ಯಾಣಿ ಸ್ವಚ್ಛತಾ ಕಾಮಗಾರಿಗೆ ಚಾಲನೆ ನೀಡಿದರು.
2018 ರಲ್ಲಿ ಶ್ರವಣಬೆಳಗೊಳದಲ್ಲಿ ಜರುಗಲಿರುವ ಮಹಾಮಸ್ತಕಾಭಿಷೇಕ ಮಹೋತ್ಸವ ಅಂಗವಾಗಿ ನಡೆಯುತ್ತಿರುವ ವಿವಿಧ ಕಾಮಗಾರಿಗಳಲ್ಲಿ  ಒಂದಾದ 30 ಲಕ್ಷ ರೂಪಾಯಿ ವೆಚ್ಚದ ಕಲ್ಯಾಣಿ ಸ್ವಚ್ಛತೆ ಕಾಮಗಾರಿಗೆ ಇಂದು ಚಾಲನೆ ನೀಡಲಾಯಿತು. ಈ ಕಾಮಗಾರಿಯನ್ನು ಬೆಳಗಾವಿಯ ಅಕ್ಷತಾ ಅಂಡರ್ ವಾಟರ್ ಸರ್ವಿಸ್‍ಗೆ ನೀಡಲಾಗಿದೆ. ಕಲ್ಯಾಣಿಯಲ್ಲಿ ಸುಮಾರು 22 ಅಡಿ ಆಳದಲ್ಲಿ 66 ಸಾವಿರ ಕ್ಯೂಬಿಕ್ ಮೀಟರ್ ನೀರಿದೆ ಎಂದು ಅಂದಾಜು ಮಾಡಲಾಗಿದ್ದು, ಶೇಖಡಾ 10 ರಷ್ಟು ನೀರು ಹೆಚ್ಚುವರಿಯಾಗಿ ಬರಲಿದೆ. 45 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.
ಕಲ್ಯಾಣಿಯಿಂದ ಹೊರ ತೆಗೆಯುವ ನೀರಿನ ಜೊತೆಗೆ ಕೆಸರು ಮಿಶ್ರಿತ ಮಣ್ಣನ್ನು ಹೊರ ತೆಗೆದು ಚರಂಡಿ ಮೂಲಕ ರಾಚೇನಹಳ್ಳಿ ಕೆರೆ ಹಾಗೂ ವಿಂಧ್ಯಗಿರಿ ಬೆಟ್ಟದ ತಪ್ಪಲಿನಲ್ಲಿರುವ ಗಂಜಿಕಟ್ಟೆಗೆ ಹರಿಸಲಾಗುತ್ತಿದೆ. ಕಲ್ಯಾಣಿಯಲ್ಲಿರುವ ಮೀನುಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಅಕ್ಷತಾ ಸಂಸ್ಥೆಯ ಮುಖ್ಯಸ್ಥ ಅಶೋಕ್ ತಿಳಿಸಿದರು.
ಈ ವೇಳೆ  ಸ್ವಸ್ತಿಶ್ರೀ ಭಟ್ಟಾರಕ ಸ್ವಾಮೀಜಿ, ಶಾಸಕ ಎಂ.ಎ.ಗೋಪಾಲಸ್ವಾಮಿ, ಸಿ.ಎನ್.ಬಾಲಕೃಷ್ಣ, ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ದಾಸರಿ, ಸಿಇಒ ಜಾನಕಿ, ಮಹಾಮಸ್ತಕಾಭಿಷೇಕ ಮಹೋತ್ಸವ ವಿಶೇಷಾಧಿಕಾರಿ ವರಪ್ರಸಾದ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: