ಪ್ರಮುಖ ಸುದ್ದಿಮೈಸೂರು

ಮೈಸೂರು ವಿವಿ ಹುದ್ದೆಗಳಿಗೆ ಅಕ್ರಮ ನೇಮಕಾತಿ: ಪ್ರೊ. ರಂಗಪ್ಪ ವಿರುದ್ಧ ಕ್ರಮಕ್ಕೆ ಆಗ್ರಹ

“ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸರ್ಕಾರದ ತಡೆಯಾಜ್ಞೆ ಮೀರಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಅವರು ಸುಮಾರು 250 ಹುದ್ದೆಗಳ ಅಕ್ರಮ ನೇಮಕಾತಿ ಪ್ರಕ್ರಿಯೆ ನಡೆಸಿರುವುದು ಖಂಡನೀಯ. ಅವರು ನಡೆಸಿರುವ ಎಲ್ಲ ನೇಮಕಾತಿಗಳನ್ನು ರದ್ದುಗೊಳಿಸಬೇಕು” ಎಂದು ವಿವಿ ಉಳಿಸಿ ಹೋರಾಟ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು ಒತ್ತಾಯಿಸಿದರು.

ಅವರು, ನಗರದಲ್ಲಿಂದು (ಅ. 22) ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯುನ್ನುದ್ದೇಶಿ ಮಾತನಾಡಿ, ನಿವೃತ್ತಿಗೆ ಕೆಲವೇ ತಿಂಗಳು ಬಾಕಿ ಇರುವ ಸಮಯದಲ್ಲಿ ಕುಲಪತಿ ಪ್ರೊ. ಕೆ.ಎಸ್. ರಂಗಪ್ಪನವರು ಈ ಸಂದರ್ಭ ಪರಿಶಿಷ್ಟರಿಗೆ ಮೀಸಲಾತಿ ನೀಡದೆ ತರಾತುರಿಯಲ್ಲಿ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತಿ ವಹಿಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿದೆ. ಉನ್ನತ ಶಿಕ್ಷಣ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂತಹ ಕೃತ್ಯವನ್ನು ವ್ಯವಸ್ಥಿತವಾಗಿ ಮಾಡುತ್ತಿರುವುದು ದುರಂತ. ಶಿಕ್ಷಣ ತಜ್ಞರು, ಸಾಹಿತಿಗಳು ಹಾಗೂ ಶಿಕ್ಷಣ ಸಚಿವರು ವ್ಯವಸ್ಥೆಯನ್ನು ಸರಿಪಡಿಸುವ ಬದಲು ಮೌನ ವಹಿಸಿರುವುದು ಆತಂಕಕ್ಕೀಡು ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಶತಮಾನ ಪೂರೈಸಿರುವ ಮೈಸೂರು ವಿಶ್ವವಿದ್ಯಾಲಯಕ್ಕೆ ತನ್ನದೇ ಹಿರಿಮೆ ಗರಿಮೆ ಇದೆ. 150 ಬೋಧಕ ಹುದ್ದೆಗಳನ್ನು ಅವಧಿ ಮೀರಿ ಅರ್ಜಿ ಸ್ವೀಕರಿಸಿ ನೇಮಕ ಮಾಡಿದ್ದಾರೆ. ಅಲ್ಲದೆ, 87 ಬ್ಯಾಕ್-ಲಾಗ್ ಹುದ್ದೆಗಳನ್ನು 55ಕ್ಕೆ ಇಳಿಸಿ ಸರ್ವಾಧಿಕಾರಿ ನಿಲುವು ಪ್ರದರ್ಶಿಸಿದ್ದಾರೆ. ಪ್ರಾಧ್ಯಾಪಕರ ನೇಮಕ ಗೊಂದಲದ ಗೂಡಾಗಿದೆ. ಕೇವಲ ಯುಜಿಸಿ ಅನುದಾನಕ್ಕಾಗಿ 445 ಸಿಬ್ಬಂದಿಯಿರುವ ವಿವಿಯಲ್ಲಿ 667 ಎಂದು ಸುಳ್ಳು ದಾಖಲೆ ಸೃಷ್ಟಿಸಿ  ಸಾರ್ವಜನಿಕರಿಗೆ ಹಾಗೂ ರಾಜ್ಯಪಾಲರಿಗೂ ವಂಚನೆ ಎಸಗಿದ್ದಾರೆ. ಇವರ ವಿರುದ್ಧ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಕಾನೂನು ಬಗ್ಗೆ ನಿರ್ಲಕ್ಷ್ಯ: ನಿವೃತ್ತಿಗೆ ಆರು ತಿಂಗಳ ಬಾಕಿಯಿರುವ ಮುನ್ನ ಯಾವುದೇ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳಬಾರದು ಎನ್ನುವ ಕಾನೂನನ್ನು ಗಾಳಿಗೆ ತೂರಿರುವ ಕುಲಪತಿ ರಂಗಪ್ಪ ಅವರು, ನಿವೃತ್ತಿ ಹೊಂದಲು ಕೇವಲ ಮೂರು ತಿಂಗಳು ಬಾಕಿ ಇರುವ ಈ ಸಂದರ್ಭದಲ್ಲಿ ವಿವಿಯಲ್ಲಿ ಹುದ್ದೆಗಳನ್ನು ಭರ್ತಿ ಮಾಡಲು ಮುಂದಾಗಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ.

ಅಕ್ರಮ ನೇಮಕ: ಯುವರಾಜ ಕಾಲೇಜಿನ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಗುತ್ತಿಗೆ ಆಧಾರಿತ 48 ಸಹಾಯಕ ಪ್ರಾಧ್ಯಾಪಕರನ್ನು ಕಾನೂನು ಬಾಹಿರ ನೇಮಕ ಮಾಡಿದ್ದು, ರಂಗಪ್ಪ ಅವರ ಪಾಳೆಗಾರಿಕೆ ವರ್ತನೆ ಮೆರೆಯುತ್ತಿದ್ದಾರೆ.

ಹೋರಾಟಗಾರರನ್ನು ಹತ್ತಿಕ್ಕುವ ತಂತ್ರ: ಹೋರಾಟಗಾರರನ್ನು ವ್ಯವಸ್ಥಿತವಾಗಿ ಹತ್ತಿಕ್ಕುವ ಷಡ್ಯಂತ್ರ ರಚಿಸಿ ಅವರ ವಿರುದ್ಧ ಸಮುದಾಯವನ್ನು ಎತ್ತಿಕಟ್ಟಿ ಜಾತಿ ಸಂಘರ್ಷಕ್ಕೆ ಎಡೆಮಾಡಿ ಹೋರಾಟಗಾರರನ್ನು ತುಳಿಯುತ್ತಿರುವುದು ಖೇದಕರ ಎಂದು ಬೇಸರ ವ್ಯಕ್ತಪಡಿಸಿದರು.

ಮಧ್ಯೆ ಪ್ರವೇಶಿಸಲಿ: ರಾಜ್ಯಪಾಲ ವಜುಭಾಯಿ ವಾಲ ಹಾಗೂ ಸರ್ಕಾರ ಈ ಕೂಡಲೇ ಮಧ್ಯೆ ಪ್ರವೇಶಿಸಿ, ರಂಗಪ್ಪ ವಿರುದ್ಧ ವಂಚನೆ – ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಹುದ್ದೆಯಿಂದ ಅಮಾನತುಗೊಳಿಸಬೇಕು. ಇಲ್ಲವಾದಲ್ಲಿ ಎಸ್.ಸಿ./ಎಸ್.ಟಿ. ಮತ್ತು ಹಿಂದುಳಿದ ವರ್ಗಗಳು ಹಾಗೂ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ರಾಜಭವನದ ಮುಂದೆ ಮುಂಬರುವ ದಿನಗಳಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮನವಿ: ಪ್ರೊ. ಕೆ.ಎಸ್. ರಂಗಪ್ಪ ಅವರು ಸರ್ಕಾರ ಹಾಗೂ ರಾಜ್ಯಪಾಲರ ಕಚೇರಿಯನ್ನು ದುರುಪಯೋಗಪಡಿಸಿಕೊಂಡಿದ್ದು ಈ ಬಗ್ಗೆ ಸರ್ಕಾರ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅ.22ರಂದು ಸಂಘದಿಂದ ಮನವಿ ಸಲ್ಲಿಸಲಾಗಿದ್ದು, ಕ್ರಮ ಕೈಗೊಳ್ಳುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಶ್ವಾಸನೆ ನೀಡಿದ್ದಾರೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

Leave a Reply

comments

Related Articles

error: