ಮೈಸೂರು

ಪರಿಸರ ಜಾಗೃತಿ ಹೊಣೆಗಾರಿಕೆ ಎಲ್ಲರ ಮೇಲಿದೆ: ಜಿ.ಪಂ.ಸದಸ್ಯೆ ಭಾಗ್ಯ ಟಿ.ಕೃಷ್ಣೇಗೌಡ ಅಭಿಪ್ರಾಯ

ಪರಿಸರ ಜಾಗೃತಿಯ ಬಗ್ಗೆ  ಕೇವಲ ಭಾಷಣ ಮಾಡದೆ ಕಾರ್ಯರೂಪಕ್ಕೆ ತರುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ ಎಂದು ಜಿ.ಪಂ. ಸದಸ್ಯೆ ಭಾಗ್ಯ ಟಿ. ಕೃಷ್ಣೇಗೌಡ ಅಭಿಪ್ರಾಯಪಟ್ಟರು.

ಅವರು ಅಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆಯು ವರುಣಾ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಆಯೋಜಿಸಿದ್ದ 22ನೇ ವಾರದ ‘ಜಾಗ ನಿಮ್ದು ಗಿಡ ನಮ್ದು’ ಸಸಿ ನೆಡುವ ಅಭಿಯಾನವನ್ನು ಉದ್ದೇಶಿ ಮಾತನಾಡಿದರು.  “ಇಂದು ಪ್ರಚಾರಕ್ಕೊಸ್ಕರ ಪರಿಸರ ಜಾಗೃತಿಯ ಬಗ್ಗೆ ಮಾತನಾಡುವವರ ನಡುವೆ ಪ್ರತೀ ವಾರವೂ ಸಸಿಗಳನ್ನು ಸದ್ದಿಲ್ಲದೆ ನೆಟ್ಟು ಪೋಷಿಸುತ್ತಿರುವ ವೇದಿಕೆಯ ಕಾರ್ಯವೈಖರಿ ಇತರರಿಗೆ ಮಾದರಿ” ಎಂದು ತಿಳಿಸಿದ ಅವರು ಈಗಾಗಲೇ 4 ಸಾವಿರಕ್ಕೂ ಹೆಚ್ಚಿನ ಸಸಿಗಳನ್ನು ನೆಟ್ಟು ರಕ್ಷಿಸಿ ಬೆಳೆಸುತ್ತಿರುವ ಕಾರ್ಯ ಶ್ಲಾಘನೀಯ, ಇಂತಹ ವೇದಿಕೆಗಳ ಸಂಖ್ಯೆ ವೃದ್ದಿಸಲಿ ಎಂದು ಆಶಿಸಿದರು.

ಅಖಿಲ ಕರ್ನಾಟಕ ಪರಿಸರ ಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಟಿ. ಮಹದೇವಸ್ವಾಮಿ ಮಾತನಾಡಿ ಪರಿಸರ ಜಾಗೃತಿ ಎಂಬುದು ಪ್ರತಿಯೊಬ್ಬರ ಮನದಾಳದಲ್ಲಿ ಮೊಳಕೆಯೊಡೆದಾಗ ಮಾತ್ರ ನಮ್ಮ ಸುತ್ತಲೂ ಹಸಿರಿನ ವಾತಾವರಣ ಮೂಡಲು ಸಾಧ್ಯ ಎಂದರು.

ಶಾಲೆಯ ಮುಖ್ಯೋಪಾಧ್ಯಾಯರಾದ ಸಬಿಯಾಬಾನು ಅವರು ವಿದ್ಯಾರ್ಥಿಗಳನ್ನು ಪರಿಸರ ಪ್ರೇಮಿಗಳನ್ನಾಗಿಸಲು ಎಲ್ಲ ಪ್ರಯತ್ನಗಳನ್ನು ಮಾಡಲಾಗುತ್ತಿದೆ, ಇದಕ್ಕೆ ಎಲ್ಲರ ಸಹಕಾರ ಅಗತ್ಯವಿದೆ, ಸಸಿಗಳನ್ನು ಉಳಿಸುವ ಕಾರ್ಯ ಎಲ್ಲರಿಂದಲೂ ಆಗಬೇಕಿದೆ ಎಂದರು.

ವೇದಿಕೆಯ ಉಪಾಧ್ಯಕ್ಷ ಪ್ರೊ. ಜಗದೀಶ್, ಕಾರ್ಯದರ್ಶಿ ಮ.ನ. ಲತಾಮೋಹನ್, ಲ್ಯಾಂಡ್ ಡೆವಲಪರ್ ಚಂದ್ರಹಾಸ್, ಪದಾಧಿಕಾರಿಗಳಾದ ಲೋಕೇಶ್, ಮಹೇಶ್, ಕೇಶವ ಮೂರ್ತಿ, ನಾಗರಾಜ್, ದೇವರಾಜ್, ಶಾಲಾ ಮುಖ್ಯಮಂತ್ರಿ ಸ್ಫೂರ್ತಿ, ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

Leave a Reply

comments

Related Articles

error: