ಪ್ರಮುಖ ಸುದ್ದಿ

ವಾರಾಂತ್ಯದಲ್ಲಿ ಸಂಪುಟ ವಿಸ್ತರಣೆ: ಸಿ.ಎಂ.ಇಬ್ರಾಹಿಂಗೆ ಸ್ಥಾನ

ಪ್ರಮುಖ ಸುದ್ದಿ, ನವದೆಹಲಿ, ಆ.೧೭: ಸಚಿವ ಸಂಪುಟದಲ್ಲಿ ಹಲವು ದಿನಗಳಿಂದ ಖಾಲಿ ಇದ್ದ ಮೂರು ಸಚಿವ ಸ್ಥಾನಗಳಿಗೆ ಈ ವಾರಾಂತ್ಯದಲ್ಲಿ ಶಾಸಕರನ್ನು ನೇಮಿಸಲು ಸಂಪುಟ ವಿಸ್ತರಣೆಯಾಗಲಿದೆ. ಜೊತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರಾಗಿರುವ ಸಿ.ಎಂ.ಇಬ್ರಾಹಿಂ ಅವರು ವಿಧಾನ ಪರಿಷತ್ ಸದಸ್ಯರಾಗಿ ಆಯ್ಕೆಯಾಗಲಿದ್ದಾರೆ.
ದೆಹಲಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ರಾಜಕೀಯ ಕಾರ್ಯದರ್ಶಿ ಅಹಮದ್ ಪಟೇಲ್ ಅವರ ಜೊತೆ ಚರ್ಚೆ ನಡೆಸಿದ ಬಳಿಕ ಸಚಿವ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿ ಪಡಿಸಿದ್ದಾರೆ. ಮೂಲಗಳ ಪ್ರಕಾರ ಆ.೧೯ ಇಲ್ಲವೇ ೨೧ರಂದು ಸಂಪುಟ ವಿಸ್ತರಣೆಯಾಗಲಿದೆ.
ಸಹಕಾರ ಸಚಿವರಾಗಿದ್ದ ಲಿಂಗಾಯಿತ ಸಮುದಾಯದಿಂದ ಎಚ್.ಎಸ್.ಮಹದೇವಪ್ರಸಾದ್ ಅವರ ಅಕಾಲಿಕ ನಿಧನದಿಂದ ಹಾಗೂ ಅಬಕಾರಿ ಸಚಿವರಾಗಿದ್ದು ಲೈಂಗಿಕ ಹಗರಣದಲ್ಲಿ ಸಿಲುಕಿ ಅಧಿಕಾರ ಕಳೆದುಕೊಂಡ ಕುರುಬ ಸಮುದಾಯದ ಎಚ್.ವೈ.ಮೇಟಿ ಮತ್ತು ಕೆಪಿಸಿಸಿ ಅಧ್ಯಕ್ಷರಾಗಲು ಗೃಹ ಸಚಿವ ಸ್ಥಾನ ಬಿಟ್ಟುಕೊಟ್ಟ ದಲಿತ ಸಮುದಾಯದ ಪರಮೇಶ್ವರ್ ಅವರಿಂದ ತೆರವಾದ ಮೂರು ಸ್ಥಾನಗಳಿಗೆ ಈಗ ನೂತನ ಸಚಿವರನ್ನು ನೇಮಿಸಿಬೇಕಿದೆ. ಲಿಂಗಾಯಿತ, ಕುರುಬ, ದಲಿತ ಸಮುದಾಯದ ಶಾಸಕರನ್ನು ಸಚಿವರನ್ನಾಗಿ ನೇಮಿಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ.
ಮೂಲಗಳ ಪ್ರಕಾರ ಲಿಂಗಾಯಿತರ ಕೋಟಾದಿಂದ ತಿಪಟೂರು ಕ್ಷೇತ್ರದ ಶಾಸಕ ಕೆ.ಷಡಕ್ಷರಿ, ಕುರುಬ ಸಮುದಾಯದಿಂದ ವಿಧಾನ ಪರಿಷತ್ ಸದಸ್ಯ ಎಚ್.ಎಂ.ರೇವಣ್ಣ, ಪರಿಶಿಷ್ಟ ಜಾತಿಯ ಎಡಗೈ ಸಮುದಾಯಕ್ಕೆ ಸೇರಿದ ಆರ್.ಬಿ.ತಿಮ್ಮಾಪುರ್ ಅವರನ್ನು ಸಚಿವರನ್ನಾಗಿ ನೆಮಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್‌ಗೆ ಪಟ್ಟಿ ಸಲ್ಲಿಸಿದ್ದಾರೆ. (ವರದಿ ಬಿ.ಎಂ)

Leave a Reply

comments

Related Articles

error: