
ಪ್ರಮುಖ ಸುದ್ದಿ
ಕಾಡುಪ್ರಾಣಿಗೆ ನಾಯಿ ಬಲಿ: ಚಿರತೆ ಇಲ್ಲವೆ ಹುಲಿಯಿಂದ ದಾಳಿ ಶಂಕೆ
ಪ್ರಮುಖ ಸುದ್ದಿ, ಗುಂಡ್ಲುಪೇಟೆ, ಆ.18: ಮನೆಮುಂದೆ ಮಲಗಿದ್ದ ನಾಯಿಯನ್ನು ಹುಲಿ ಇಲ್ಲವೇ ಚಿರತೆ ಕೊಂದು ಹಾಕಿರುವ ಘಟನೆ ತಾಲೂಕಿನ ರಾಘವಾಪುರ ಕೆರೆ ಸಮೀಪದ ಜಮೀನಿನಲ್ಲಿ ನಡೆದಿದ್ದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಆರ್.ಸಿ.ನಾಗರಾಜು ಎಂಬುವರ ಮನೆಯ ಬಳಿ ಕಟ್ಟಿಹಾಕಿದ್ದ ಎರಡು ನಾಯಿಗಳನ್ನು ಕೊಂದುಹಾಕಿರುವ ಘಟನೆ ನಡೆದಿದ್ದು, ನಾಯಿಗಳ ಚೀರಾಟ ಕೇಳಿ ಮನೆಯವರು ಹೊರಬರುತ್ತಿದ್ದಂತೆಯೇ ಓಡಿಹೋಗಿದೆ. ಬೆಳಕಾದ ನಂತರ ನೋಡಿದಾಗ ಭಾರೀ ಗಾತ್ರದ ಹೆಜ್ಜೆಯ ಗುರುತುಗಳು ಕಂಡುಬಂದಿವೆ. ಇದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದ್ದು, ಅರಣ್ಯ ಇಲಾಖೆಯವರು ಬೋನು ಅಳವಡಿಸಿ ಇದನ್ನು ಕೂಡಲೇ ಸೆರೆಹಿಡಿಯಲು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಕಳೆದ ತಿಂಗಳು ಸಮೀಪದ ತಗ್ಗಲೂರು ಗ್ರಾಮದ ಮಹದೇವಪ್ಪ ಎಂಬುವರ ಜಮೀನಿನಲ್ಲಿ ಬೋನು ಇರಿಸಿದ್ದಾಗ ಮರಿ ಚಿರತೆ ಸೆರೆಯಾಗಿತ್ತು. ನಂತರ ಇದರ ತಾಯಿ ಸಮೀಪದಲ್ಲಿನ ಹಳ್ಳದಮಾದಹಳ್ಳಿ ಹಾಗೂ ರಾಷ್ಟ್ರೀಯ ಹೆದಾರಿಯಲ್ಲಿಯೇ ಸಂಚರಿಸುತ್ತಿರುವುದನ್ನು ಹಲವಾರು ವಾಹನ ಸವಾರರು ಗಮನಿಸಿದ್ದಾರೆ. ಇದು ಸುತ್ತ ಮುತ್ತಲಿನ ಗ್ರಾಮಗಳ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದ್ದು ಚಿರತೆ ಸೆರೆಹಿಡಿಯುವಂತೆ ಒತ್ತಾಯಿಸಿದ್ದಾರೆ. (ವರದಿ ಬಿ.ಎಂ)