ಪ್ರಮುಖ ಸುದ್ದಿ

ಡೋಕ್ಲಾಂ ವಿವಾದ: ಭಾರತದ ಬೆಂಬಲಕ್ಕೆ ನಿಂತ ಜಪಾನ್

ಪ್ರಮುಖ ಸುದ್ದಿ, ಟೋಕಿಯೋ, ಆ.18: ಸಿಕ್ಕಿಂ ಗಡಿಯಲ್ಲಿನ ಡೋಕ್ಲಾಮ್ ಪ್ರದೇಶದ ಒಡೆತನಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಚೀನಾ ನಡುವಿನ ಬಿಕ್ಕಟ್ಟು ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿರುವ ಸಂದರ್ಭದಲ್ಲಿ ಜಪಾನ್ ಭಾರತಕ್ಕೆ ಬೆಂಬಲವಾಗಿ ನಿಂತಿದೆ.

ಚೀನಾ ಕ್ರಮದ ವಿರುದ್ಧ ಕಿಡಿಕಾರಿರುವ ಜಪಾನ್ ಭಾರತಕ್ಕೆ ಬೆಂಬಲ ವ್ಯಕ್ತಪಡಿಸಿದೆ. ಡೋಕ್ಲಾಮ್ ವಿವಾದ ಸಂಬಂಧ ಪ್ರತಿಕ್ರಿಯೆ ನೀಡಿರುವ ಜಪಾನ್ ರಾಯಭಾರಿ ಕೆಂಜಿ ಹಿರಮಟ್ಸು, ಡೋಕ್ಲಾಮ್ ಗಡಿ ವಿವಾದ ಸಂಬಂಧ ಭಾರತ ಹಾಗೂ ಚೀನಾ ಗಡಿಯಲ್ಲಿ ಕಳೆದೆರಡು ತಿಂಗಳುಗಳಿಂದ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದೆ. ಡೋಕ್ಲಾಮ್ ಗಡಿಯಲ್ಲಿ ಚೀನಾ ರಸ್ತೆ ನಿರ್ಮಾಣ ಮಾಡಿರುವುದಕ್ಕೆ ವಿರೋಧ ವ್ಯಕ್ತಪಡಿಸಿರುವ ಭಾರತ ಗಡಿಯಲ್ಲಿ ತನ್ನ ಸೇನೆಯನ್ನು ನಿಯೋಜನೆಗೊಳಿಸಿದೆ. ಗಡಿಯಲ್ಲಿ ಶಾಂತಿ ಸ್ಥಾಪನೆಗೆ ಸೇನೆ ನಿಯೋಜನೆ ಮುಖ್ಯವಾಗಿದೆ. ಡೋಕ್ಲಾಮ್ ಗಡಿಯಲ್ಲಿ ಭಾರತೀಯ ಸೇನೆ ಯಥಾಸ್ಥಿತಿಯನ್ನು ಬದಲಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಡೋಕ್ಲಾಮ್ ವಿವಾದ ಸಂಬಂಧ ಭಾರತ ಹಾಗೂ ಚೀನಾ ನಡುವೆ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿಯನ್ನು ಜಪಾನ್ ಗಮನಿಸುತ್ತಲೇ ಇದೆ. ವಿವಾದ ಪ್ರಾದೇಶಿಕ ಸ್ಥಿರತೆಯ ಮೇಲೆ ಪ್ರಭಾವ ಬೀರುವ ಸಾಮರ್ಥ್ಯವನ್ನು ಹೊಂದಿದೆ. ಭಾರತದ ನಿಲುವಿಗೆ ಬರುವುದಾದರೆ. ಭೂತಾನ್ ಜೊತೆಗಿನ ದ್ವಿಪಕ್ಷೀಯ ಒಪ್ಪಂದದಿಂದಾಗಿ ಭಾರತ ವಿವಾದದಲ್ಲಿ ಭಾಗಿಯಾಗುತ್ತಿದೆ. ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರು ಕೂಡ ವಿವಾದ ಸಂಬಂಧ ಸ್ಪಷ್ಟವಾಗಿ ಹೇಳಿಕೆ ನೀಡಿದ್ದರು. ಡೋಕ್ಲಾಮ್ ವಿವಾದವನ್ನು ರಾಜತಾಂತ್ರಿಕ ಮಾರ್ಗದ ಮೂಲಕ ಬಗೆಹರಿಸುವುದಾಗಿ ಹೇಳಿದ್ದರು. ಈ ರೀತಿಯ ನಿಲುವು ಶಾಂತಿಯುತ ನಿರ್ಣಯಕ್ಕೆ ಮುಖ್ಯ ಎಂಬುದನ್ನು ಜಪಾನ್ ಪರಿಗಣಿಸುತ್ತದೆ ಎಂದು ತಿಳಿಸಿದ್ದಾರೆ. ವಿಶ್ವದ ದೊಡ್ಡಣ್ಣ ಅಮೆರಿಕಾ ಬೆಂಬಲದೊಂದಿಗೆ ಜಪಾನ್ ಬೆಂಬಲೂ ದೊರಕಿರುವುದರಿಂದ ಭಾರತದ ಹೋರಾಟಕ್ಕೆ ಆನೆ ಬಲ ಬಂದಂತಾಗಿದೆ. (ವರದಿ ಬಿ.ಎಂ)

 

Leave a Reply

comments

Related Articles

error: